ಡಿ.ಕೆ.ಸುರೇಶ್ ಪ್ರತ್ಯೇಕ ದೇಶ ಬೇಡಿಕೆ ಬರಬಹುದು ಎಂಬ ಹೇಳಿಕೆ ಕುರಿತು ಮಿಶ್ರ ಪ್ರತಿಕ್ರಿಯೆ

3 years ago

ಬೆಂಗಳೂರು: ಕೇಂದ್ರದ ಅನುದಾನ ಬಿಡುಗಡೆ ತಾರತಮ್ಯ ವಿಚಾರದಲ್ಲಿ ಪ್ರತ್ಯೇಕ ರಾಷ್ಟ್ರದ ಪ್ರತಿಪಾದನೆ ಮಾಡಿದ ಸಂಸದ ಡಿ.ಕೆ.ಸುರೇಶ್ ಪ್ರತಿಪಕ್ಷಗಳ ಜೊತೆಗೆ ಸ್ವಪಕ್ಷೀಯರಿಂದಲೂ ಟೀಕೆಗೆ ಗುರಿಯಾಗಿದ್ದಾರೆ.

ಕಲ್ಲು ಹೊಡೆದುಕೊಂಡು ಇದ್ದವರನ್ನ ಲೋಕಸಭೆಗೆ ಕಳುಹಿಸಿದರೆ ಇನ್ನೇನಾಗುತ್ತೆ ಎಂದು ಪ್ರಶ್ನಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಇಲ್ಲಿ ಬಡ ಜನರ ಲೂಟಿ ಮಾಡಿಕೊಂಡು ಸಾಕ್ಷಿಗುಡ್ಡೆ ಮಾಡಿದ್ದಾರೆ. ಅಂಥವರನ್ನ ತೆಗೆದುಕೊಂಡು ಹೋಗಿ ದೇಶ ಕಟ್ಟು ಅಂತ ಕಳುಹಿಸಿದ್ರೆ ಕಟ್ತಾರಾ? ಅವರ ಸಾಮ್ರಾಜ್ಯ ಕಟ್ಟಿಕೊಳ್ತಾರೆ ಅಷ್ಟೇ. ಇವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದರು.

ಪ್ರತ್ಯೇಕ ರಾಷ್ಟ್ರಕ್ಕೆ ಕೇಂದ್ರ ಸರ್ಕಾರ ಆರ್ಥಿಕ ತಾರತಮ್ಯ, ಕರ್ನಾಟಕಕ್ಕೆ ಅನ್ಯಾಯ ಎಂಬ ಕಾರಣ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಬಿರಿಯಾನಿ ಊಟ ಮಾಡಿ ಭಾರತ್ ಜೋಡೊ ಯಾತ್ರೆ ಮಾಡಿದರು. ಈಗ ವಿಭಜನೆ ಬಗ್ಗೆ ಮಾತನಾಡುತ್ತಿದ್ದಾರೆ. ಒಂದು ವೇಳೆ ವಿಭಜನೆ ಆಯ್ತು ಅಂತ ತಿಳಿದುಕೊಳ್ಳಿ. ತಮಿಳುನಾಡಿನಿಂದ ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಸಾಧ್ಯವೇ ಎಂದರು.

ದೇಶದ ಮೊದಲನೇ ಬಜೆಟ್ ನ ಗಾತ್ರ 174 ಕೋಟಿ ರೂಪಾಯಿ ಇತ್ತು. ಆಗ ದೇಶದಲ್ಲಿ ಆಹಾರದ ಕೊರತೆ ಇತ್ತು. ಆಗಿನಿಂದಲೂ ಸರ್ಕಾರಗಳು ಬಜೆಟ್ ಮಂಡಿಸಿಕೊಂಡು ಬಂದಿವೆ. ನಾವು ಫೈನಾನ್ಸ್ ಕಮಿಷನ್‌ಗಳನ್ನ ಮಾಡಿಕೊಂಡಿದ್ದೇವೆ. ಅವರು ಎಲ್ಲಾ ರಾಜ್ಯಕ್ಕೂ ಭೇಟಿಕೊಟ್ಟು ಪರಿಶೀಲನೆ ಮಾಡುತ್ತಾರೆ. ಯಾವ ರಾಜ್ಯಕ್ಕೆ ಎಷ್ಟು ಹಣಬೇಕು ಅನ್ನೋ ವರದಿ ಕೊಡುತ್ತಾರೆ. ಯಾವ ರಾಜ್ಯ ಅಭಿವೃದ್ಧಿ ಆಗಿಲ್ಲ. ಯಾವ ರಾಜ್ಯ ಅಭಿವೃದ್ಧಿ ಆಗಿದೆ ಅದನ್ನ ನೋಡಿ ಹಣ ಹಂಚುತ್ತಾರೆ. ಈ ಹಂಚಿಕೆಯನ್ನು ಕಾಂಗ್ರೆಸ್ ಇದ್ದಾಗಲೇ ಪ್ರಾರಂಭ ಮಾಡಿದ್ದು. ಮೋದಿ ಬಂದು ಇದನ್ನ ಪ್ರಾರಂಭ ಮಾಡಿಲ್ಲ ಎಂದು ರಾಜ್ಯಕ್ಕೆ ಬಿಡುಗಡೆ ಮಾಡಬೇಕಾದ ಹಣವನ್ನು ಬಿಡುಗಡೆ ಮಾಡದ ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡರು.

ಸುರೇಶ್ ಅವರ ಹೇಳಿಕೆ ಬಾಲಿಶವಾಗಿದೆ. ಕೇಂದ್ರ ಸರ್ಕಾರದಿಂದ ನಮ್ಮ ಬೇಡಿಕೆಗಳನ್ನು ಸಂಘರ್ಷದಿಂದ ಈಡೇರಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿನ ವಾಸ್ತವವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು, ಹಣ ಪಡೆಯಬೇಕು. ಅದು ಬಿಟ್ಟು ಈ ರೀತಿ ಬಾಲಿಶವಾಗಿ ಮಾತನಾಡಿದರೆ, ಸಮಸ್ಯೆ ಬಗೆಹರಿಯುವುದಿಲ್ಲ. ಮತ್ತಷ್ಟು ಜಟಿಲಗೊಳ್ಳುತ್ತದೆ ಎಂದರು.

ಇನ್ನು ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಡಿ.ಕೆ.ಸುರೇಶ್ ಅವರ ಹೇಳಿಕೆಯ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಮಂತ್ರಿ ಮತ್ತು ಶಾಸಕರು ಸುರೇಶ್ ಅವರ ಹೇಳಿಕೆ ಸಮರ್ಥಿಸಿದರೆ ಮತ್ತೆ ಕೆಲವರು ದೇಶ ವಿಭಜನೆಯ ಮಾತುಗಳು ಒಳ್ಳೆಯದಲ್ಲ ಎಂದಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಹಲವು ಜನರ ತ್ಯಾಗ ಬಲಿದಾನಗಳಿಂದಾಗಿ ದೇಶ ಒಗ್ಗಟ್ಟಾಗಿದೆ. ಒಂದು ವಿಭಜನೆಯ ನೋವಿನಿಂದ ಸಾಕಷ್ಟು ಪಾಠ ಕಲಿತಿದ್ದೇವೆ, ದೇಶ ಎಂದೂ ಒಡೆಯಬಾರದು. ವಿಭಜನೆಯ ಮಾತನ್ನು ಯಾರು ಹೇಳಿದರು ಅದನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಅನುದಾನ ಬಿಡುಗಡೆ ವಿಚಾರದಲ್ಲಿ ತಾರತಮ್ಯವಾಗಿದ್ದರೆ ಅದನ್ನು ಕೇಳಲು ಸೂಕ್ತ ವೇದಿಕೆಗಳಿವೆ. ಅದನ್ನು ಬಿಟ್ಟು ದೇಶ ವಿಭಜನೆಯ ಮಾತನಾಡುವುದು ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಸಂವಿಧಾನ ಬದ್ಧವಾಗಿ ಕೆಲಸ ಮಾಡುವುದನ್ನು ಬಿಟ್ಟು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಇಂತಹ ತಾರತಮ್ಯವನ್ನು ವಿರೋಧಿಸಿ ನಮ್ಮ ಸಂಸದರು ನೀಡಿರುವ ಹೇಳಿಕೆ ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಡಿ.ಕೆ.ಸುರೇಶ್ ಸ್ಪಷ್ಟೀಕರಣ: ಇದರ ಬೆನ್ನಲ್ಲೇ ತಮ್ಮ ಹೇಳಿಕೆಗೆವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಉಲ್ಟಾ ಹೊಡೆದಿರುವ ಡಿ.ಕೆ.ಸುರೇಶ್, “ನಾನು ದೇಶ ವಿಭಜನೆ ಬಗ್ಗೆ ಮಾತನಾಡಿಲ್ಲ” ಎಂದಿದ್ದಾರೆ.

ನಾನು ದೇಶ ವಿಭಜನೆ ಬಗ್ಗೆ ಮಾತನಾಡಿಲ್ಲ. ನಾನು ನಿನ್ನೆ ಮಾತನಾಡಿದ್ದೇನೆಂದರೆ, ಇದೇ ರೀತಿಯಾಗಿ ಮುಂದುವರಿದರೆ ದಕ್ಷಿಣ ಭಾರತವನ್ನು ಬೇರೆ ದೇಶವನ್ನಾಗಿ ಮಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂಬುದಾಗಿ ಹೇಳಿದ್ದೇನೆ. ಅನಿವಾರ್ಯಕ್ಕೂ, ಅಗತ್ಯಕ್ಕೂ ವ್ಯತ್ಯಾಸ ಇದೆ ಎಂದು ಸ್ಪಷ್ಟೀಕರಣ ನೀಡಿದರು.

ನಾನು ಒಬ್ಬ ಭಾರತೀಯ, ಹಿಂದು ಸಹ ಹೌದು. ಆದರೆ, ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದ ಬಗ್ಗೆ ಹೇಳಿದ್ದೇನೆ. ಈ ಕಾರಣಕ್ಕೆ ಹೀಗೇ ಅನ್ಯಾಯ ಆಗುತ್ತಾ ಹೋದರೆ ಬೇರೆ ರಾಷ್ಟ್ರ ಆಗಬೇಕು. ಆ ಬಗ್ಗೆ ಕೂಗು ಕೇಳಿ ಬರುತ್ತದೆ ಎಂದು ನಾನು ಹೇಳಿದ್ದೇನೆ. ನಾನು ನಿನ್ನೆ ನೀಡಿರುವ ಹೇಳಿಕೆಗೆ ಬದ್ಧನಿದ್ದೇನೆ ಎಂದರು.

Leave a Reply