ಬೆಂಗಳೂರು: ಬಿಜೆಪಿ ಮತ್ತು ಆರ್ಎಸ್ಎಸ್ ತಮ್ಮ ಅಜೆಂಡಾವನ್ನು ಜಾರಿಗೆ ತರಲು ಅನಗತ್ಯವಾಗಿ ಜನರನ್ನು ಪ್ರಚೋದಿಸುತ್ತಿವೆ ಇದಕ್ಕೆ ಜೆಡಿಎಸ್ ಕೂಡ ಬೆಂಬಲ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ತ್ರಿವರ್ಣ ಮತ್ತು ಕನ್ನಡ ಬಾವುಟ ಹಾರಿಸಲು ಅನುಮತಿ ಪತ್ರ
ಮಂಡ್ಯ ಜಿಲ್ಲೆಯ ಕೆರಗೋಡು ಪ್ರಕರಣಕ್ಕೆ ರಾಜಕೀಯ ಸ್ವರೂಪ ನೀಡಿರುವ ಬಿಜೆಪಿ, ಜೆಡಿಎಸ್ ನಡೆ ಕುರಿತು ಕಿಡಿಕಾರಿದ ಅವರು, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿರೋಧಪಕ್ಷಗಳು ಜನರನ್ನು ಪ್ರಚೋದಿಸುತ್ತಿವೆ. ಕೆರಗೋಡಿನಲ್ಲಿ ರಾಷ್ಟ್ರ ಅಥವಾ ರಾಜ್ಯಧ್ವಜ ಹಾಕುತ್ತೇವೆಂದು ಅನುಮತಿ ಪಡೆದಿದ್ದರು. ಅದರ ನಿಯಮ ಉಲ್ಲಂಘನೆ ಮಾಡಿದ್ದರಿಂದಾಗಿ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಬೇಕಾಯಿತು. ನಾಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧ್ವಜಾರೋಹಣ ಮಾಡುತ್ತೇವೆ ಎಂದರೆ ಒಪ್ಪಿಕೊಳ್ಳಲಾಗುವುದಿಲ್ಲ ಎಂದರು.

ಕೆರಗೋಡು ಗ್ರಾಮಸ್ಥರು ಬರೆದುಕೊಟ್ಟ ಮುಚ್ಚಳಿಕೆ ಪತ್ರ
ಯಾವ ಬಾವುಟ ಹಾರಿಸುತ್ತೇವೆ ಎಂದು ಅನುಮತಿ ಪಡೆದಿದ್ದಾರೆಯೋ ಅದನ್ನು ಹಾರಿಸಲು ತಮ್ಮ ಆಕ್ಷೇಪ ಇಲ್ಲ. ಯಾವುದೇ ಧರ್ಮ, ಜಾತಿಯ ಬಾವುಟಗಳಿಗೂ ತಮ್ಮ ವಿರೋಧವಿಲ್ಲ ಎಂದರು.
ಚುನಾವಣೆ ಹೊರತುಪಡಿಸಿದರೆ ಇದರ ಹಿಂದೆ ಬೇರೆ ಯಾವ ಕಾರಣಗಳಿಲ್ಲ. ನನ್ನ ವಿರುದ್ಧ ಆರೋಪ ಮಾಡಲು ವಿರೋಧಪಕ್ಷದವರಿಗೆ ಬೇರೆ ಕಾರಣಗಳು ಸಿಕ್ಕಿಲ್ಲ. ಹಾಗಾಗಿ ಹಿಂದೂ ವಿರೋಧಿ ಎಂದು ಟೀಕೆ ಮಾಡುತ್ತಾರೆ. ನಾನೊಬ್ಬ ಹಿಂದು. ನಾನು ಎಲ್ಲಾ ಜನರನ್ನೂ ಮತ್ತು ಎಲ್ಲಾ ಧರ್ಮವನ್ನೂ ಪ್ರೀತಿಸುತ್ತೇನೆ ಎಂದರು.




