ಬೆಂಗಳೂರು: ಜಿಎಸ್ಟಿ ಜಾರಿಯಾದ ನಂತರ ರಾಜ್ಯದ ಆರ್ಥಿಕ ಸ್ವಾವಲಂಬನೆ ನೆಲ ಕಚ್ಚಿದೆ. ಜಿಎಸ್ಟಿಗೂ ಮುಂಚೆ ರಾಜ್ಯದ ಆದಾಯ ಶೇ.14 ರಿಂದ ಶೇ.16 ರಷ್ಟಿತ್ತು. ಆದರೆ, ಈ ಪ್ರಮಾಣ ಇದೀಗ ಶೇ.12ಕ್ಕೆ ಇಳಿದಿದೆ. ಇದರಿಂದಾಗಿ ರಾಜ್ಯದ ಜಿಡಿಪಿ ಇಳಿಮುಖವಾಗುತ್ತಿದೆ. ಸಮಾಜದಲ್ಲಿ ಹಣದ ಸಮಾನ ಹಂಚಿಕೆಯ ಪ್ರಮಾಣ ಶೇ.25 ರಷ್ಟು ಕುಸಿದಿದೆ. ಪರಿಣಾಮ ರಾಜ್ಯಕ್ಕೆ ಪ್ರತಿ ವರ್ಷ40 ರಿಂದ 50 ಸಾವಿರ ಕೋಟಿ ನಷ್ಟವಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ತಾಜ್ ವೆಸ್ಟ್ಎಂಡ್ ಹೋಟೆಲ್ನಲ್ಲಿ ಎಂಎಸ್ ರಾಮಯ್ಯ ವಿಶ್ವವಿದ್ಯಾಲಯ ಆಯೋಜಿಸಿದ್ದ “ಹಣಕಾಸಿನ ಫೆಡರಲಿಸಂ: ಹದಿನಾರನೇ ಹಣಕಾಸು ಆಯೋಗದ ಮುಂದಿರುವ ಸವಾಲುಗಳು”ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇನ್ನೂ 2010ರಲ್ಲಿ ಶೇ.8 ರಿಂದ 10 ರಷ್ಟು ಆದಾಯ ಸೆಸ್ ಮೂಲಕ ಕೇಂದ್ರಕ್ಕೆ ಹರಿಯುತ್ತಿತ್ತು. ಈ ಪ್ರಮಾಣ ಇದೀಗ ಶೇ.22ಕ್ಕೆ ಏರಿಕೆಯಾಗಿದೆ. ಆದರೂ, ರಾಜ್ಯಕ್ಕೆ ನಯಾಪೈಸೆಯೂ ಹಿಂತಿರುಗಿ ಬರುತ್ತಿಲ್ಲ ಎಂದರು.
ತೈಲ ತೆರಿಗೆಯಲ್ಲೂ ರಾಜ್ಯಕ್ಕಿಲ್ಲ ಪಾಲು!: ಕೇಂದ್ರ ಸರ್ಕಾರ 2014 ರಿಂದ ತೈಲದ ಮೇಲಿನ ತೆರಿಗೆಯನ್ನೂ ಶೇ.50 ರಷ್ಟು ಏರಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಗಣನೀಯವಾಗಿ ಇಳಿಸಿದ್ದ ಸಂದರ್ಭದಲ್ಲೂ ಸಹ ದೇಶದಲ್ಲಿ ಕೇಂದ್ರ ಸರ್ಕಾರ ತೆರಿಗೆಯನ್ನು ಮತ್ತಷ್ಟು ಏರಿಸಿತ್ತು. ಕೇಂದ್ರ ಸರ್ಕಾರದ 2018-19ರ ಬಜೆಟ್ನಲ್ಲಿ ತೈಲ ಆದಾಯದ ಪ್ರಮಾಣ ರೂ. 2.18 ಲಕ್ಷ ಕೋಟಿ. ಆದರೆ, 2022-23 ಬಜೆಟ್ನಲ್ಲಿ ಈ ಪ್ರಮಾಣ 5.15 ಲಕ್ಷ ಕೋಟಿಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ ರಾಜ್ಯ ಸರ್ಕಾರಗಳಿಗೆ ತೈಲದ ಮೇಲಿನ ತೆರಿಗೆಯನ್ನು ಏರಿಸಲು ಅವಕಾಶವೇ ಸಿಕ್ಕಿಲ್ಲ. ಎಲ್ಲಾ ಮೂಲಗಳಿಂದಲೂ ರಾಜ್ಯಕ್ಕೆ ಬರುವ ಆದಾಯ ಖೋತಾ ಆಗುತ್ತಿದೆ ಎಂದರು.
ಕರ್ನಾಟಕ ದೇಶದಲ್ಲೇ ಅತಿಹೆಚ್ಚು ತೆರಿಗೆ ಕಟ್ಟುವ ರಾಜ್ಯ. ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಹಣ ಹಂಚಿಕೊಳ್ಳಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಕರ್ನಾಟಕದ ತೆರಿಗೆ ಹಣ ಹಿಂದುಳಿದ ರಾಜ್ಯಗಳ ಅಭಿವೃದ್ಧಿಗೆ ಉಪಯೋಗವಾದರೆ ನಮಗೂ ಸಂತೋಷವೇ. ಹಾಗೆಂದು ನಮ್ಮ ಕತ್ತನ್ನು ಹಿಸುಕುವ ಕೆಲಸವಾಗಬಾರದು. ನಮ್ಮ ಪಾಲಿನ ಹಣ ನಮಗೆ ಸಿಗದಿದ್ದರೆ, ನಾವು ಸದೃಢ ರಾಜ್ಯವನ್ನು ನಿರ್ಮಿಸುವುದು ಹೇಗೆ ಸಾಧ್ಯ? ಒಂದು ವೇಳೆ ನಾವು ದುರ್ಬಲಗೊಂಡರೆ, ಕೇಂದ್ರವೂ ದುರ್ಬಲವಾದಂತೆ. ಹೀಗಾಗಿ ಎಲ್ಲರೂ ಅವರವರ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.




