ಮಂದಿರ ಲೋಕಾರ್ಪಣೆಗೆ ತೆರಳಿದ ಮಠಾಧೀಶರು: ಪಂಚಪೀಠಾಧೀಶ್ವರರಿಗೆ ಆಹ್ವಾನವೇ ಇಲ್ಲ

2 years ago

ಬೆಂಗಳೂರು: ಅಯೋಧ್ಯೆಯಲ್ಲಿ ಸೋಮವಾರ ನಡೆಯುತ್ತಿರುವ ರಾಮಮಂದಿರ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜ್ಯದ ಮಠಾಧೀಶರ ದಂಡು ರಾಮನ ನಗರಿ ಅಯೋಧ್ಯೆ ತಲುಪಿದೆ. ಈ ಐತಿಹಾಸಿಕ ಸಮಾರಂಭವನ್ನು ಸಾಕ್ಷೀಕರಿಸಲು ಕರ್ನಾಟಕದ ಸುಮಾರು ಎಂಭತ್ತು ಸಾವಿರ ಜನ ಅಯೋಧ್ಯೆಗೆ ತೆರಳಿದ್ದಾರೆ.

ಅಯೋಧ್ಯೆ ಸಮಾರಂಭಕ್ಕೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಟ ಮಠಾಧೀಶರು.
ವಾಲ್ಮೀಕಿ ಗುರುಪೀಠದ ಶ್ರೀಗಳು, ಶ್ವಾಸಗುರು ವಚನಾನಂದ ಶ್ರೀಗಳು, ಬೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು, ಕಾಗಿನೆಲೆಯ ನಿರಂಜನಾನಂದಪುರಿ ಶ್ರೀಗಳು, ಕುಂಚಟಿಗ ಗುರುಪೀಠದ ಶಾಂತವೀರಶ್ರೀಗಳು, ಮಾದಾರ ಚೆನ್ನಯ್ಯ ಗುರುಪೀಠದ ಶ್ರೀಗಳು, ಭಗೀರಥ ಗುರುಪೀಠದ ಶ್ರೀಗಳು.

ಮಂದಿರ ಉದ್ಘಾಟನೆ ಹಾಗೂ ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಉಸ್ತುವಾರಿಯನ್ನು ವಿಶ್ವ ಹಿಂದೂಪರಿಷತ್ ನಾಯಕ ಕರ್ನಾಟಕದ ಗೋಪಾಲ್ ವಹಿಸಿದ್ದು.ಇಡೀ ಸಮಾರಂಭದಲ್ಲಿ ಕರ್ನಾಟಕದ ಛಾಪು ಎದ್ದು ಕಾಣುತ್ತಿದೆ.

ಬಾಲರಾಮನಿಗೆ ಮೊದಲ ದಿನ ಉಡಿಸಲು ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿಯ ವಸ್ತ್ರಗಳನ್ನು ಕೊಂಡೊಯ್ಯಲಾಗಿದೆ.ಕರ್ನಾಟಕದ ಅನೇಕ ಅರ್ಚಕ, ಆಗಮಿಕರು ಧಾರ್ಮಿಕ ಕೈಂಕರ್ಯಗಳ ನೇತೃತ್ವ ವಹಿಸಿದ್ದಾರೆ. ಈಗಾಗಲೇ ರಾಮ ಮಂದಿರ ದೇವಾಲಯ ಉದ್ಘಾಟನಾ ಸಮಾರಂಭಕ್ಕೆ ಕರ್ನಾಟಕದ ವಿವಿಧ ಮಠ-ಮಂದಿರಗಳಿಂದ ಸುಮಾರು 15ಕ್ಕೂ ಅಧಿಕ ಮಠಾಧೀಶರು ತೆರಳಿದ್ದಾರೆ.

ಇವರ ಜೊತೆಗೆ ಚಿತ್ರದುರ್ಗದಿಂದ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ನಿರಂಜನಾನಂದ ಮಹಾಸ್ವಾಮಿಜಿ, ಮಾದಾರ ಚನ್ನಯ್ಯ ಗುರುಪೀಠ ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮೀಜಿ, ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಹೊಸದುರ್ಗದ ಶಾಂತವೀರ ಮಹಾಸ್ವಾಮೀಜಿ, ಸಿದ್ದರಾಮೇಶ್ವರ ಮಹಾ ಸಂಸ್ಥಾನ ಭೋವಿ ಗುರುಪೀಠ ಚಿತ್ರದುರ್ಗದ ಇಮ್ಮಡಿ ಸಿದ್ದರಾಮಯ್ಯ ಮಹಾಸ್ವಾಮೀಜಿ ತೆರಳಿದ್ದಾರೆ. ಬೆಂಗಳೂರಿನಿಂದ ಎಲ್ಲ ಮಠಾಧೀಶರು, ವಿಮಾನದ ಮೂಲಕ ಲಕ್ನೋ ತಲುಪಲಿದ್ದಾರೆ. ಲಕ್ನೋದಿಂದ ಅಯೋಧ್ಯೆಗೆ ಕಾರಿನಲ್ಲಿ ಪ್ರಯಾಣಿಸಲಿದ್ದಾರೆ.

ಆದರೆ, ವೀರಶೈವದ ಪಂಚಪೀಠಗಳಾದ ರಂಭಾಪುರಿ, ಕೇದಾರ, ಶ್ರೀಶೈಲ, ಉಜ್ಜಯಿನಿ, ಕಾಶಿ ಪೀಠದ ಪೀಠಾಧಿಪತಿಗಳು ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸುತ್ತಿಲ್ಲ. ಜೊತೆಗೆ ಸದರಿ ಪೀಠಾಧಿಪತಿಗಳಿಗೆ ರಾಮಮಂದಿರ ಟ್ರಸ್ಟ್ ಅಥವಾ ಇನ್ನಾವುದೇ ಸಂಸ್ಥೆಯಿಂದ ಆಹ್ವಾನ ಬಂದಿಲ್ಲ ಎನ್ನಲಾಗಿದೆ. ಇದಕ್ಕೆ ಕಾರಣಗಳೇನು? ಎಂಬ ಸಂಗತಿ ಇದುವರೆಗೆ ಬಹಿರಂಗವಾಗಿಲ್ಲ.

ವಿಶೇಷವೆಂದರೆ, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ವೇಳೆ ಆರ್.ಎಸ್.ಎಸ್.., ಬಿಜೆಪಿ ನಿರ್ಧಾರವನ್ನು ಸಮರ್ಥಿಸಿದ್ದ ಈ ಪೀಠಾಧಿಪತಿಗಳು ಹಿಂದೂ ಧರ್ಮವನ್ನು ಒಡೆಯಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಅದರ ನಂತರ ಕೂಡ ಸಮಯ ಸಿಕ್ಕಾಗಲೆಲ್ಲ ಹಿಂದೂ ಧರ್ಮದ ಪರವಾಗಿ ಮಾತನಾಡುತ್ತಿದ್ದರು. ಆದರೆ, ಇದೀಗ ಮಹತ್ವದ ಕಾಲಘಟ್ಟದಲ್ಲಿ ವೀರಶೈವ ಪೀಠಾಧಿಪತಿಗಳಿಗೆ ಆಹ್ವಾನ ನೀಡದಿರುವುದು ಅಚ್ಚರಿಗೆ ಕಾರಣವಾಗಿದ್ದರೆ, ವೀರಶೈವ ಸಮುದಾಯದಲ್ಲಿ ಅಸಮಾಧಾನದ ಹೊಗೆ ಎದ್ದಿದೆ.

Leave a Reply