ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆ ವೇಳೆ ನಾಯಕತ್ವಕ್ಕೆ ಸೆಡ್ಡು ಹೊಡೆದು ಬಿಜೆಪಿಗೆ ಗುಡ್ ಬೈ ಹೇಳಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ಅವರನ್ನು ಮತ್ತೆ ಬಿಜೆಪಿಗೆ ಕರೆ ತರುವ ಪ್ರಯತ್ನ ತೀವ್ರವಾಗಿದೆ.
ಕಾಂಗ್ರೆಸ್ ನಿಂದು ವಿಧಾನ ಪರಿಷತ್ ಸದಸ್ಯರಾಗಿರುವ ಶೆಟ್ಟರ್ ಅವರಿಗೆ ಕಾಂಗ್ರೆಸ್ ನಲ್ಲಿ ಅಂತಹ ಮಾನ್ಯತೆ ಸಿಕ್ಕಿಲ್ಲ ಎಂಬುದನ್ನು ಆಧಾರವಾಗಿಟ್ಟು ಅವರನ್ನು ಬಿಜೆಪಿಗೆ ಸೆಳೆಯಲು ಮಾತುಕತೆಗಳು ನಿರ್ಣಾಯಕ ಹಂತ ತಲುಪಿವೆ.
ಶೆಟ್ಟರ್ ಬಿಜೆಪಿಗೆ ವಾಪಸ್ಸಾದರೆ ಪಕ್ಷದ ರಾಷ್ಟ್ರೀಯ ಮಂಡಳಿಯಲ್ಲಿ ಉನ್ನತ ಹುದ್ದೆ ನೀಡುವುದಲ್ಲದೆ, ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಕಣಕ್ಕಿಳಿಸುವ ಆಮಿಷ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಪಕ್ಷದ ರಾಷ್ಟ್ರೀಯ ನಾಯಕರೊಬ್ಬರು ಶೆಟ್ಟರ್ ಜೊತೆ ಮಾತನಾಡಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಶೆಟ್ಟರ್ ಜೊತೆ ಮಾತುಕತೆ ನಡೆಸಿದ್ದಾರೆ. ಅವರನ್ನು ಘರ್ ವ್ಯಾಪಿಸಿ ಮಾಡಿ ಕರೆತರುವ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಹೊರವಲಯದಲ್ಲಿ ನಡೆದ ಬಿಜೆಪಿ ಸರಣಿ ಸಭೆಗಳಲ್ಲೂ ಈ ಕುರಿತು ಚರ್ಚೆ ನಡೆಸಲಾಗಿದ್ದು, ಶೆಟ್ಟರ್ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನಕ್ಕೆ ಹಿರಿಯ ನಾಯಕರು ಸಹಮತ ಸೂಚಿಸಿದ್ದಾರೆ. ಹೀಗಾಗಿ ಶೆಟ್ಟರ್ ಅವರನ್ನು ಬಿಜೆಪಿಗೆ ಕರೆ ತರುವ ಪ್ರಯತ್ನಗಳು ತೀವ್ರವಾಗಿವೆ.
ಶೆಟ್ಟರ್ ಅವರನ್ನು ಸಂಪರ್ಕಿಸಿ ಅವರ ಮನವೊಲಿಸುವ ಕೆಲಸವನ್ನು ಯಡಿಯೂರಪ್ಪ ಮಾಡಲಿದ್ದು, ಇವರಿಗೆ ಬಸವರಾಜಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಹ ಶೆಟ್ಟರ್ ಅವರೊಂದಿಗೆ ಮುಂದಿನ ದಿನಗಳಲ್ಲಿ ಮಾತುಕತೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಮೂಲಗಳ ಪ್ರಕಾರ ಬಿಜೆಪಿಗೆ ಶೆಟ್ಟರ್ ಬಂದರೆ ಅವರನ್ನು ಈ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿಸಲು ಪಕ್ಷದೊಳಗೆ ಗಂಭೀರ ಚಿಂತನೆ ನಡೆದಿದೆ. ಹಾಲಿ ಅಭ್ಯರ್ಥಿ ಮಂಗಳ ಅಂಗಡಿ ಪುನಃ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದು, ಪ್ರಬಲ ಅಭ್ಯರ್ಥಿ ಹುಡುಕಾಟದಲ್ಲಿರುವ ಬಿಜೆಪಿಗೆ ಶೆಟ್ಟರ್ ಆಗಮಿಸಿದರೆ ಹೆಚ್ಚಿನ ಬಲ ಸಿಗಲಿದೆ ಎಂಬ ಲೆಕ್ಕಾಚಾರದಲ್ಲಿ ಪಕ್ಷ ಮುಳುಗಿದೆ.




