ಗ್ಯಾರಂಟಿಗಳ ಗೆಲುವು ಕರ್ನಾಟಕದ ಗೆಲುವು, ನಿಮ್ಮೆಲ್ಲರ ಗೆಲುವು: ಸಿದ್ದರಾಮಯ್ಯ

2 years ago

ಬೆಂಗಳೂರು: ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ನಾವು ಉಳಿದವರಂತೆ ವಚನ ಭ್ರಷ್ಟರಲ್ಲ, ವಚನ ಪಾಲಕರು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನುಡಿದಂತೆ ನಡೆಯುತ್ತೇವೆ ಎನ್ನುವುದು ನಾವು ಜನತೆಗೆ ನೀಡಿರುವ ವಚನ. ಉಳಿದವರಂತೆ ನಾವು ವಚನ ಭ್ರಷ್ಟರಲ್ಲ ವಚನ ಪಾಲಕರು ಎಂದಿದ್ದಾರೆ.

ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳಲ್ಲಿ ಐದಕ್ಕೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವುದು, ಜನರಿಂದ ಆಯ್ಕೆಯಾದ ಒಂದು ಸರ್ಕಾರದ ಕರ್ತವ್ಯ. ಆ ಯೋಜನೆಗಳು ದುರುಪಯೋಗವಾಗದಂತೆ ಪೂರ್ಣ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕಾಗಿರುವುದು ಜನರ ಕರ್ತವ್ಯ ಎಂದಿದ್ದಾರೆ.

ಗ್ಯಾರಂಟಿ ಯೋಜನೆಗಳು ಉಚಿತ ಯೋಜನೆಗಳು ಎಂಬ ತಪ್ಪು ಕಲ್ಪನೆ ಬೇಡ. ಇದು ನಿಮ್ಮದೆ ತೆರಿಗೆ ಹಣ, ನಿಮ್ಮದೆ ಕಲ್ಯಾಣ ಕಾರ್ಯಕ್ರಮಗಳು. ಗ್ಯಾರಂಟಿಗಳ ಪ್ರತಿ ಪೈಸೆಯೂ ಬದುಕಿಗೆ ಸದುಪಯೋಗವಾಗಬೇಕು. ಚುನಾವಣಾ ಪ್ರಣಾಳಿಕೆಯನ್ನು ಪ್ರಚಾರಕ್ಕೆ ಸೀಮಿತಗೊಳಿಸದೆ ಅದನ್ನು ಕಾರ್ಯರೂಪಕ್ಕೆ ತಂದು ಜನರ ಬದುಕಿನಲ್ಲಿ ಅವರ ಪ್ರತಿಫಲ ಕಾಣಬೇಕು ಎಂಬ ಆಶಯ ನಮ್ಮದು ಎಂದು ಹೇಳಿದ್ದಾರೆ.

ನಮ್ಮ ಸರ್ಕಾರದ ಸದಾಶಯಕ್ಕೆ ತಮ್ಮೆಲ್ಲರ ಬೆಂಬಲವಿರಲಿ. ಗ್ಯಾರಂಟಿಗಳ ಗೆಲುವು ಕರ್ನಾಟಕದ ಗೆಲುವು, ನಿಮ್ಮೆಲ್ಲರ ಗೆಲುವು ಎಂದಿದ್ದಾರೆ.

Leave a Reply