ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಸರ್ಕಾರದ ಸಾಧನೆಯನ್ನು ಮುಂದಿಟ್ಟುಕೊಂಡು ಮುಂದಿನ ಲೋಕಸಭಾ ಚುನಾವಣೆಯನ್ನು ಗೆಲ್ಲುವ ಆತ್ಮವಿಶ್ವಾಸ ಇಲ್ಲ. ಹಾಗಾಗಿಯೇ ಅಪೂರ್ಣ ಸ್ಥಿತಿಯಲ್ಲಿರುವ ರಾಮಮಂದಿರ ಉದ್ಘಾಟನೆ ಮೂಲಕ ಹಿಂದುತ್ವದ ಅಲೆಯನ್ನು ಬಡಿದೆಬ್ಬಿಸಿ ಚುನಾವಣೆಯನ್ನು ಗೆಲ್ಲುವ ತಂತ್ರ ನಡೆಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ರಾಮಮಂದಿರ ಉದ್ಘಾಟನೆಯ ಮೂಲಕ ತಮ್ಮ ವೈಫಲ್ಯವನ್ನು ಮುಚ್ಚಿಕೊಂಡು ಚುನಾವಣೆ ಗೆಲ್ಲುವ ಮೋದಿಯವರ ಈ ತಂತ್ರ ಫಲಿಸಲ್ಲ. ದೇಶದ ಜನತೆ ಈ ಬಾರಿ ಡೋಂಗಿ ಹಿಂದುತ್ವದ ಜಾಲಕ್ಕೆ ಬಲಿಯಾಗುವುದಿಲ್ಲ ಎಂದಿದ್ದಾರೆ.
ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಭಾಗವಹಿಸದಿರುವ ನಿಲುವನ್ನು ಸಮರ್ಥಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜಾತಿ, ಧರ್ಮ, ಪಕ್ಷ, ಪಂಥವನ್ನು ಮೀರಿ ಸರ್ವರನ್ನು ಒಳಗೊಂಡು ಭಕ್ತಿ ಮತ್ತು ಗೌರವದಿಂದ ನಡೆಯಬೇಕಾದ ಒಂದು ಧಾರ್ಮಿಕ ಕಾರ್ಯಕ್ರಮವನ್ನು ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಲಾಗಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಘ ಪರಿವಾರದ ನಾಯಕರು ಶ್ರೀರಾಮನಿಗೆ ಹಾಗೂ ದೇಶದ 140 ಕೋಟಿ ಜನತೆಗೆ ಅಗೌರವವನ್ನು ಉಂಟು ಮಾಡಿದ್ದಾರೆ. ಕಳೆದ 10 ವರ್ಷಗಳ ಆಡಳಿತದ ಸಾಧನೆಯಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿಯವರು ಅಪೂರ್ಣಾವಸ್ಥೆಯಲ್ಲಿರುವ ರಾಮಮಂದಿರ ಉದ್ಘಾಟಿಸಿ ಆ ಮೂಲಕ ಜನರ ಮನ ಗೆಲ್ಲಬಹುದು ಎಂದುಕೊಂಡಿದ್ದಾರೆ. ಇದು ಸಾಧ್ಯವಿಲ್ಲ ಎಂದಿದ್ದಾರೆ.
ಜನತೆಗೆ ಕಳೆದ 30-35 ವರ್ಷಗಳಿಂದ ಬಿಜೆಪಿ ಮತ್ತು ಸಂಘ ಪರಿವಾರ ರಾಮನ ಹೆಸರಿನಲ್ಲಿ ನಡೆಸಿಕೊಂಡು ಬಂದಿರುವ ರಾಜಕೀಯವನ್ನು ಅರಿತಿದ್ದಾರೆ. ಈ ಬಾರಿ ಬಿಜೆಪಿಯ ಹಿಂದುತ್ವದ ಜಪಕ್ಕೆ ಜನ ಬಲಿ ಬೀಳಲ್ಲ. ನಾವು ಹಿಂದೂ ಧರ್ಮದ ವಿರೋಧಿಗಳಲ್ಲ. ಧರ್ಮದ ಹೆಸರಿನಲ್ಲಿ ನಡೆಸಲಾಗುವ ಅಸ್ಪೃಶ್ಯತೆ, ಜಾತೀಯತೆ, ಅಂಧ ಶ್ರದ್ಧೆ, ಕಂದಾಚಾರಗಳನ್ನು ವಿರೋಧಿಸುತ್ತೇವೆ. ಧರ್ಮವನ್ನು ರಾಜಕಾರಣಕ್ಕೆ ಬಳಸುವುದರ ಬಗ್ಗೆ ನಮ್ಮ ಸಂಪೂರ್ಣ ವಿರೋಧವಿದೆ ಎಂದಿದ್ದಾರೆ.
ಮಹಾತ್ಮಗಾಂಧೀಜಿ, ಸ್ವಾಮಿ ವಿವೇಕಾನಂದ, ಕನಕದಾಸ, ನಾರಾಯಣಗುರು, ಕುವೆಂಪು ಸೇರಿದಂತೆ ದೇಶದ ಮಹನೀಯರು ಆಚರಿಸುತ್ತಾ ಬಂದಿರುವ ಹಿಂದೂ ಧರ್ಮದ ಬಗ್ಗೆ ನಮಗೆ ಯಾವುದೇ ತಕರಾರಿಲ್ಲ. ಆದರೆ ಧರ್ಮವನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿ ಮತ್ತು ಸಂಘ ಪರಿವಾರದ ಡೋಂಗಿ ಹಿಂದುತ್ವವನ್ನು ನಾವು ವಿರೋಧಿಸುತ್ತಲೇ ಇರುತ್ತೇವೆ. ಈ ವಿಚಾರದಲ್ಲಿ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಮಾಡುವುದಿಲ್ಲ ಎಂದಿದ್ದಾರೆ.
ಶ್ರೀರಾಮನ ಮೇಲೆ ನಂಬಿಕೆ ಮತ್ತು ಭಕ್ತಿ ಇದ್ದವರು ಪ್ರತಿದಿನ ಆತನನ್ನು ಪೂಜಿಸುವುದು ಹೇಗೆ, ಧಾರ್ಮಿಕ ಕರ್ತವ್ಯವೋ, ಅದೇ ರೀತಿ ಶ್ರೀರಾಮನ ಪರ ಧ್ವನಿ ಎತ್ತುವುದು ಸಹ ಧಾರ್ಮಿಕ ಕರ್ತವ್ಯವಾಗಿದೆ ಎಂದಿದ್ದಾರೆ.




