ಸಾವಿತ್ರಿ ಬಾಯಿ ಫುಲೆ ಹಲವು ಕಷ್ಟನಷ್ಟಗಳ ನಡುವೆ ಹೆಣ್ಣುಮಕ್ಕಳಿಗೆ ಅಕ್ಷರ ಕಲಿಸಿದರು

2 years ago

ಬೆಂಗಳೂರು: ಗಂಧದನಾಡು ಜನಪರ ವೇದಿಕೆ-ಗಜವೇ ಹಾಗೂ ಡಾ.ಗೋಪಾಲರಾಜು ಪ್ರಥಮ ದರ್ಜೆ ಕಾಲೇಜು ವತಿಯಿಂದ ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ, ಅಕ್ಷರದಾತೆ ಫಾತಿಮಾ ಶೇಖ್ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಮತ್ತು ಗಜವೇ 2024ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಜಯಲಕ್ಷ್ಮಿ ಮಾತನಾಡಿ ಅಕ್ಷರ ಮಾತೆ ಸಾವಿತ್ರಿ ಬಾಫುಲೆ, ಫಾತಿಮಾ ಶೇಖ್ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಸಂದೇಶ, ಕೊಡುಗೆ, ತ್ಯಾಗಗಳನ್ನು ನೆನಪು ಮಾಡಿಕೊಳ್ಳುವಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದು ಶ್ಲಾಘನೀಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾವಿತ್ರಿ ಬಾಫುಲೆ ಹಲವು ಕಷ್ಟ ನಷ್ಟಗಳನ್ನು ಅನುಭವಿಸಿ ಹೆಣ್ಣು ಮಕ್ಕಳಿಗೆ ಅಕ್ಷರವನ್ನು ಕಲಿಸುವ ಮೂಲಕ ಜ್ಞಾನಾರ್ಜನೆ ದಾರಿ ಮಾಡಿಕೊಟ್ಟರು. ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಹೆಚ್ಚು ತೆರೆದುಕೊಳ್ಳುವಂತೆ ದಾರಿದೀಪವಾದರು ಎಂದರು.

ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಹೇಮಾವತಿ ಮಾತಾಡಿ, ನನ್ನ ತಂದೆ ನನಗೆ ಎರಡು ಡಿಗ್ರಿಗಳನ್ನಾದರೂ ಮಾಡಲು ಹೇಳಿದ್ದರು. ಆದರೆ ನನಗೆ ಓದಿನ ಗೀಳಿನಿಂದಾಗಿ ಪಿ.ಎಚ್.ಡಿ ಸೇರಿದಂತೆ 4 ಡಿಗ್ರಿಗಳನ್ನು ಮಾಡಿದ್ದೇನೆ. ಹೀಗೆ ನನ್ನ ವಿದ್ಯಾರ್ಥಿಗಳು ಚೆನ್ನಾಗಿ ಓದಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಧ್ಯಾಪಕ ರಾಮಕೃಷ್ಣಪ್ಪ ಮಾತಾಡಿ, ಕುವೆಂಪು ಅವರ ಓ ನನ್ನ ಚೇತನ ಆಗು ನೀ ಅನಿಕೇತನ ಗೀತೆಯನ್ನು ಹಾಡುತ್ತಾ ಅಂಬೇಡ್ಕರರ ಚರಿತ್ರೆ ಮರೆತವರು ಚರಿತ್ರೆ ಸೃಷ್ಟಿಸಲಾರರು ಎಂಬ ಮಾತನ್ನು ಉಲ್ಲೇಖಿಸಿ ಮಾತನಾಡಿದರು.

ಪುರುಷ ಪ್ರಧಾನ ಸಮಾಜದ ಚೌಕಟ್ಟನ್ನು ಮೀರಿ ಜ್ಯೋತಿಬಾ ಫುಲೆ, ಸಾವಿತ್ರಿ ಬಾಯಿ ಫುಲೆ ಅವರು ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟರು. ಇತಿಹಾಸದಲ್ಲಿ ಮಹನೀಯರು ಮಾಡಿದ ಸಾಧನೆಯ ಕಾರಣಕ್ಕೆ ನಾವೆಲ್ಲ ಇಂದು ಸೇರಿದ್ದೇವೆ ಎಂದು ಬೇರು ಸಂಸ್ಥೆಯ ನಿರ್ದೇಶಕಿ ಅಭಿಪ್ರಾಯಪಟ್ಟರು.

ಜನವರಿ10 ಬುಧವಾರದಂದು ಗೋಪಾಲರಾಜು ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಜವೇ ಸಂಸ್ಥಾಪಕ ವಿಜಯರಾಮ, ರಾಜ್ಯ ಖಜಾಂಚಿ ಬಂಡಾಪುರ ಶ್ರೀನಿವಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಾನೂನು ಸಲಹೆಗಾರ ಪುರುಷೋತ್ತಮ್ ಒಡೆಯರ್, ರಾಜ್ಯ ಕಾರ್ಯದರ್ಶಿ ದೇವರಾಜು ನಾಯ್ಕ, ಗಜವೇ ಬೆಂಗಳೂರು ಅಧ್ಯಕ್ಷ ಸ್ವಾಭಿಮಾನಿ ಸತೀಶ್, ರಾಜ್ಯ ಸಹಕಾರ್ಯದರ್ಶಿ ಜಗದೀಶ್ ಅರಸು, ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರುಬಾಬು, ಕಾಲೇಜು ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತಿತರರು ಹಾಜರಿದ್ದರು.

Leave a Reply