ನೇರ ಬಳಕೆ ತಡೆಗಟ್ಟುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ
ಬೆಂಗಳೂರು: ಎಚ್.ಎನ್ ವ್ಯಾಲಿ ಹಾಗೂ ಕೆ.ಸಿ ವ್ಯಾಲಿ ಏತ ನೀರಾವರಿ ಯೋಜನೆಯ ಮೂಲಕ ಕೆರೆಗಳಿಗೆ ಹರಿಸಲಾಗುತ್ತಿರುವ ಎರಡನೇ ಹಂತದ ಸಂಸ್ಕರಿಸಿದ ನೀರನ್ನ ನೇರವಾಗಿ ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ತಿಳಿಸಿದ್ದಾರೆ.
ಈ ಎರಡೂ ವ್ಯಾಲಿಗಳ ಏತ ನೀರಾವರಿ ಯೋಜನೆಯ ಮೂಲಕ ಬಯಲು ಸೀಮೆಯ ಜಿಲ್ಲೆಗಳಾದ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರಕ್ಕೆ ಸಂಸ್ಕರಿಸಿದ ನೀರನ್ನು ಹರಿಸಲಾಗುತ್ತಿದೆ. ಸಂಸ್ಕರಿಸಿದ ನೀರಿನ ಮೂಲಕ ಕೆರೆಗಳನ್ನು ತುಂಬಿಸಲಾಗುತ್ತಿದ್ದು, ಅಂತರ್ಜಲ ಮಟ್ಟ ಹೆಚ್ಚಿಸುವುದು ಪ್ರಮುಖ ಉದ್ದೇಶವಾಗಿದೆ ಎಂದಿದ್ದಾರೆ.
ಅಂತರ್ಜಲ ಹೆಚ್ಚಳದ ಪ್ರಮುಖ ಗುರಿಯ ಯೋಜನೆಯ ಫಲ ಈಗಾಗಲೇ ಗೋಚರವಾಗುತ್ತಿದೆ. ಈ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದ್ದು, ಜನ ಕೊಳೆವೆ ಬಾವಿಗಳ ಮೂಲಕ ನೀರನ್ನು ತಮ್ಮ ಬೆಳೆಗಳಿಗೆ ಉಪಯೋಗಿಸಬಹುದಾಗಿದೆ. ಸಂಸ್ಕರಿಸಿದ ನೀರನ್ನು ನೇರವಾಗಿ ಕುಡಿಯಲು ಹಾಗೂ ಕೃಷಿಗೆ ಬಳಸುವುದನ್ನ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.
ಆದರೆ, ಕೆಲವರು ಈ ನೀರನ್ನ ನೇರವಾಗಿ ತಮ್ಮ ಬೆಳೆಗಳಿಗೆ ಬಳಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇಂತಹ ಚಟುವಟಿಕೆಗಳಿಂದ ಯೋಜನೆಯ ಮೂಲ ಉದ್ದೇಶಕ್ಕೆ ತೊಂದರೆಯಾಗುತ್ತಿದೆ. ಸಂಸ್ಕರಿಸಿದ ನೀರು ಉತ್ತಮ ಗುಣಮಟ್ಟದ್ದಾಗಿದೆ. ಆದರೆ, ಇದರ ನೇರ ಬಳಕೆಯಿಂದ ತೊಂದರೆ ಆಗಬಾರದು ಎನ್ನುವ ಮುನ್ನೆಚ್ಚರಿಕೆ ನಮ್ಮದಾಗಿತ್ತು. ಇದನ್ನ ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಸಂಸ್ಕರಿಸಿದ ನೀರನ್ನು ಜನ ನೇರವಾಗಿ ತಮ್ಮ ಜಮೀನುಗಳಿಗೆ ಪಂಪ್ ಮಾಡುವುದು ಹಾಗೂ ಹರಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಆಗಾಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ನೀರನ್ನು ಬಳಸಿಕೊಳ್ಳುತ್ತಿರುವ ಜನರ ಮೇಲೆ ಕ್ರಮ ಕೈಗೊಳ್ಳಬೇಕು, ಕ್ರಮ ಕೈಗೊಳ್ಳಲು ವಿಫಲರಾಗುವ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.



