44 ಆನ್ ಲೈನ್ ಸೇವೆಗಳಿಗೆ ಇನ್ನುಮುಂದೆ ಭೌತಿಕ ದಾಖಲೆ ಸಲ್ಲಿಸುವ ಅಗತ್ಯವಿಲ್ಲ: ಪ್ರಿಯಾಂಕ್ ಖರ್ಗೆ

2 years ago

ಬೆಂಗಳೂರು: ಗ್ರಾಮ ಪಂಚಾಯತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ನಾಡಕಚೇರಿಗಳ ಅಟಲ್ಜಿ ಜನಸ್ನೇಹಿ ಕೇಂದ್ರಗಳಲ್ಲಿ ಲಭ್ಯವಿರುವ 44 ಸೇವೆಗಳನ್ನು ಪಡೆಯಲು ಆನ್ಲೈನ್ನಲ್ಲಿ ಸಲ್ಲಿಸಲಾಗುತ್ತಿರುವ ಅರ್ಜಿಗಳಿಗೆ ಯಾವುದೇ ದಾಖಲೆಗಳನ್ನು ಭೌತಿಕ ರೂಪದಲ್ಲಿ ಸಲ್ಲಿಸುವಂತೆ ಕೋರಬಾರದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದಾರೆ.

ಗ್ರಾಮ ಲೆಕ್ಕಿಗರು ಕ್ಷೇತ್ರ ಪರಿಶೀಲನೆಗಾಗಿ ಅವಶ್ಯವಿರುವ ಅರ್ಜಿಗಳು ಮತ್ತು ಅವುಗಳ ದಾಖಲೆಗಳನ್ನು ನಾಡಕಚೇರಿಯ ತಂತ್ರಾಂಶದಿಂದಲೇ ಪಡೆದುಕೊಂಡು ನಿಗದಿತ ಅವಧಿಯಲ್ಲಿಯೇ ಈ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಬಾಪೂಜಿ ಸೇವಾ ಕೇಂದ್ರ ಮತ್ತು ಅಟಲ್ಜಿ ಜನಸ್ನೇಹಿ ಕೇಂದ್ರಗಳಲ್ಲಿ 44 ಸೇವೆಗಳನ್ನು ಪಡೆಯಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚತಂತ್ರ 2.0 ತಂತ್ರಾಂಶವನ್ನು ನಾಡಕಚೇರಿ ತಂತ್ರಾಂಶದೊಂದಿಗೆ ಸಂಯೋಜನೆ ಮಾಡಲಾಗಿದೆ. ಅದರಂತೆ ಗ್ರಾಮೀಣ ಜನರು ದಾಖಲೆಗಳನ್ನು ಪಡೆಯಲು ಪಂಚಾಯತಿ ಕಚೇರಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ಕೆಲವೆಡೆ ಗ್ರಾಮ ಲೆಕ್ಕಿಗರು, ಕ್ಷೇತ್ರ ಪರಿಶೀಲನೆಗಾಗಿ ಅರ್ಜಿಗಳನ್ನು ಮತ್ತು ಅವುಗಳ ದಾಖಲೆಗಳನ್ನು ಭೌತಿಕ ರೂಪದಲ್ಲಿ ಸಲ್ಲಿಸುವಂತೆ ಕೋರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಯೊಂದು ಸೇವೆಗೆ, ವಿವಿಧ ಪ್ರಮಾಣ ಪತ್ರಗಳಿಗಾಗಿ ನಿಗದಿತ ದಾಖಲೆಗಳನ್ನು ಅರ್ಜಿದಾರರಿಂದ ಅರ್ಜಿಯೊಂದಿಗೆ ಪಡೆಯಲಾಗುತ್ತಿದೆ. ಇವುಗಳನ್ನು ಗ್ರಾಮ ಪಂಚಾಯತಿಗಳಿಗೆ ನೀಡಲಾಗಿರುವ ನಾಡ ಕಛೇರಿ ತಂತ್ರಾಂಶದ ಲಾಗಿನ್ ನಲ್ಲಿ ಅಪ್ ಲೋಡ್ ಮಾಡಿ ಅರ್ಜಿಗಳನ್ನು ಆನ್ಲೈನ್ನಲ್ಲಿ ಸಲ್ಲಿಸಲಾಗುತ್ತಿದೆ. ಪ್ರತಿಯೊಂದು ಹೋಬಳಿಯು 6-7 ಗ್ರಾಮ ಪಂಚಾಯತಿಗಳನ್ನು ಹೊಂದಿದ್ದು, ಈ ವ್ಯಾಪ್ತಿಯ 20-50 ಸಾವಿರ ಜನರು ವಿವಿಧ ಸರ್ಕಾರಿ ಸೇವೆಗಳನ್ನು ಪಡೆಯಲು ಹೋಬಳಿ ಕೇಂದ್ರದ ನಾಡಕಚೇರಿಗೆ ಹೋಗಬೇಕಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗಿತ್ತು ಎಂದು ಹೇಳಿದ್ದಾರೆ.

ಈ ಸಮಸ್ಯೆಗೆ ಪರಿಹಾರವಾಗಿ ನಾಡಕಚೇರಿಗಳ ಅಟಲ್ಜಿ ಜನಸ್ನೇಹಿ ನಿರ್ದೇಶನಾಲಯದಡಿ ಸಿಗುತ್ತಿದ್ದ ಆದಾಯ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸ ಸ್ಥಳ ಪ್ರಮಾಣ ಪತ್ರ ಗಳಂತಹ ಪ್ರಮುಖ ಸೇವೆಗಳನ್ನು ದಕ್ಷ ಹಾಗೂ ತ್ವರಿತ ರೀತಿಯಲ್ಲಿ ಗ್ರಾಮ ಪಂಚಾಯತಿಗಳ ಮೂಲಕವೇ ನೀಡಲು ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೂತನವಾಗಿ ಒದಗಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಗ್ರಾಮೀಣ ಜನತೆ ಕಂದಾಯ ಇಲಾಖೆಯ ಅಟಲ್ಜೀ ಜನಸ್ನೇಹಿ ನಿರ್ದೇಶನಾಲಯದಡಿ ಬರುವ ಆದಾಯ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸ ಸ್ಥಳ ಪ್ರಮಾಣ ಪತ್ರಗಳಂತಹ 44 ಪ್ರಮುಖ ಸೇವೆಗಳನ್ನು ತ್ವರಿತವಾಗಿ ಪಡೆದುಕೊಳ್ಳಲು ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಸೇವಾ ಕೇಂದ್ರಗಳಲ್ಲಿ ಅನ್ಲೈನ್ ಮೂಲಕ ಅರ್ಜಿಯನ್ನು ಸೇವೆಗಳನ್ನು ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ಸರ್ಕಾರಿ ಸೇವೆಗಳನ್ನು ಮತ್ತಷ್ಟು ಸುಲಲಿತಗೊಳಿಸಿ, ಗ್ರಾಮೀಣ ಜನರ ಬಳಿಯೇ ಸೇವೆಗಳು ದೊರೆಯುವಂತೆ ಆಡಳಿತಯಂತ್ರವನ್ನು ಸಜ್ಜುಗೊಳಿಸಲಾಗಿದ್ದು, ನುಡಿದಂತೆ ನಡೆಯುವ ಈ ಸರ್ಕಾರ ತನ್ನ ಪ್ರಾಮಾಣಿಕ ಪ್ರಯತ್ನ ಮುಂದುವರೆಸಲಿದೆ ಎಂದು ಹೇಳಿದ್ದಾರೆ.

Leave a Reply