ಬೆಂಗಳೂರು: ನಿಯಮದ ಪ್ರಕಾರ ಕನ್ನಡ ಬಳಸಬೇಕು ಎಂಬುದರಲ್ಲಿ ಎರಡನೇ ಮಾತೇ ಇಲ್ಲ. ಆದರೆ, ಯಾರೂ ಏಕಾಏಕಿ ಕಾನೂನನ್ನು ತಮ್ಮ ಕೈಗೆ ಎತ್ತಿಕೊಳ್ಳಬಾರದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಗಡಿ ಮುಂಗಟ್ಟುಗಳು, ವಾಣಿಜ್ಯೋದ್ಯಮ ಸಂಸ್ಥೆಗಳು ಕನ್ನಡ ನಾಮಫಲಕ ಬಳಸಬೇಕೆಂದು ಕ.ರ.ವೇ. ಕಾರ್ಯಕರ್ತರು ಹೋರಾಟ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಮೊದಲಿಗೆ, ಕನ್ನಡ ನಾಮಫಲಕಗಳನ್ನು ಹಾಕಲು ಒಂದು ಗಡುವು ನಿಗದಿಪಡಿಸುವ ನಿರ್ಧಾರ ಆಗಲಿ. ಅದಾದ ಮೇಲೆ ನಿಯಮ ಪಾಲಿಸದವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದರು.
ಉದ್ಯಮಗಳ ಸ್ಥಾಪನೆಗೆ ಭಾರತದ ರಾಜ್ಯಗಳೂ ಸೇರಿದಂತೆ ಜಗತ್ತಿನೆಲ್ಲೆಡೆ ಪೈಪೋಟಿ ಇದೆ. ಉದ್ಯಮಿಗಳಿಗೆ ಯಾವುದೇ ರಾಜ್ಯವೂ ಅನಿವಾರ್ಯವಲ್ಲ. ಇಂತಹ ಘಟನೆಗಳು ನಡೆದಾಗ ಅವು ಎಲ್ಲಾ ಕಡೆ ವೈರಲ್ ಆಗಿ ನಮ್ಮಲ್ಲಿ ಬಂಡವಾಳ ಹೂಡಲು ಹಿಂದೆಮುಂದೆ ನೋಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಕನ್ನಡಪರ ಹೋರಾಟಗಾರರು ಇದರ ಬಗ್ಗೆಯೂ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ನಮ್ಮ ಇಲಾಖೆಗೆ ಒಳಪಟ್ಟ ವ್ಯಾಪ್ತಿಯಲ್ಲಿ ಕೈಗಾರಿಕೆಗಳಲ್ಲಿ ಕನ್ನಡ ಬಳಕೆಗೆ ಸಂಬಂಧಿಸಿದಂತೆ ಸದ್ಯದಲ್ಲೇ ಸಲಹಾಸೂಚಿ (ಅಡ್ವೈಸರಿ) ಹೊರಡಿಸಲಾಗುವುದು ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಮೂವರು ಡಿಸಿಎಂ ಪ್ರಸ್ತಾವನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದರ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕುಳಿತು ನಾಯಕರ ಮುಂದೆ ನಮ್ಮ ಅಭಿಪ್ರಾಯ ಹೇಳುತ್ತೇವೆ. ಇದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ಅಗತ್ಯವಿಲ್ಲ ಎಂದರು.




