ಫುಟ್‍ ಪಾತ್ ಅತಿಕ್ರಮಣ ತೆರವುಗೊಳಿಸಿ: ನ್ಯಾ. ಸುಭಾಷ ಆಡಿ

2 years ago

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಸುಮಾರು 1.10 ಲಕ್ಷ ಖಾಲಿ ನಿವೇಶನಗಳಿದ್ದು, ಇವುಗಳ ಸ್ವಚ್ಛತೆಗೆ ಕ್ರಮವಹಿಸಿ, ಸೈಟ್ ಮಾಲೀಕರನ್ನು ಜವಾಬ್ದಾರರನ್ನಾಗಿಸಿ ನೋಟಿಸ್ ಜಾರಿ ಮಾಡಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯಮಟ್ಟದ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಸುಭಾಷ ಬಿ. ಆಡಿ ಸೂಚಿಸಿದರು.

ಜಿಲ್ಲಾ ಪಂಚಾಯತ್ ಆವರಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆ ಜರುಗಿಸಿ ಮಹಾನಗರ ಸ್ವಚ್ಛತೆ ಹಾಗೂ ಹಸರೀಕರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಅವಳಿ ನಗರ ವ್ಯಾಪ್ತಿ ಹಾಗೂ ಜಿಲ್ಲೆಯ ನಗರ, ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕಾಗಿ ಅನೇಕ ಸಭೆಗಳ ಮೂಲಕ ಅಧಿಕಾರಿಗಳಿಗೆ ಕ್ರಮವಹಿಸಲು ತಿಳಿಸಲಾಗಿದೆ. ಆದರೂ ನಿರೀಕ್ಷಿತ ಮಟ್ಟದ ಬದಲಾವಣೆ ಕಾಣುತಿಲ್ಲ. ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಕಾನೂನು ಪ್ರಕಾರ ಕಟ್ಟುನಿಟ್ಟಾಗಿ ನಿರ್ವಹಿಸಬೇಕು ಎಂದರು.

ಮಹಾನಗರದಲ್ಲಿ ಪ್ರತಿದಿನ ಉತ್ಪಾದನೆ ಆಗುವ ತ್ಯಾಜ್ಯವನ್ನು ನಿಯಮಾನುಸಾರ ಸಂಗ್ರಹಿಸಿ, ತಾಂತ್ರಿಕ ರೀತಿಯಲ್ಲಿ ವಿಂಗಡಿಸಿ ತ್ಯಾಜ್ಯವಿಲೇವಾರಿ ಮಾಡಬೇಕು. ಇದರಲ್ಲಿ ಸಾರ್ವಜನಿಕರ ಕರ್ತವ್ಯ ಹೆಚ್ಚು ಮುಖ್ಯವಾಗಿದೆ. ಹಸಿರು ನ್ಯಾಯಾಧೀಕರಣದ ನಿಯಮಾವಳಿಗಳನ್ನು ಜನಸಾಮಾನ್ಯರಿಗೆ ತಿಳಿಸಲು ಹೆಚ್ಚು ಹೆಚ್ಚು ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹೇಳಿದರು.

ಮಹಾನಗರ ವ್ಯಾಪ್ತಿಯಲ್ಲಿ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳು ವಾಸವಿರುವ ಸುಮಾರು 46  ವಸತಿ ಆವರಣ (ಕ್ವಾಟರ್ಸ್) ಗಳಿವೆ. ಇವುಗಳಲ್ಲಿ ಸ್ವಚ್ಛತೆ ಹಾಗೂ ಸೂಕ್ತ ರೀತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಬೇಕು. ನಗರದ ಪ್ರತಿ ಸಮುದಾಯಭವನ, ಕಲ್ಯಾಣ ಮಂಟಪ, ವಿದ್ಯಾರ್ಥಿ ನಿಲಯಗಳು, ವಸತಿಗೃಹ ಸಮುಚ್ಛಯ (ಅಪಾರ್ಟ್‍ಮೆಂಟ್) ಮುಂತಾದವುಗಳಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಂಗಡನೆ ನಿಯಮಾನುಸಾರ ಆಗುವಂತೆ ಆಯಾ ಮಾಲೀಕರನ್ನು ಹೊಣೆಗಾರಗೊಳಿಸಬೇಕು ಎಂದು ಸೂಚಿಸಿದರು.

ಮಹಾನಗರ ವ್ಯಾಪ್ತಿಯ ಕೆರೆಗಳ ಸ್ವಚ್ಛತೆ ಹಾಗೂ ಒತ್ತುವರಿ ತೆರವುಗೊಳಿಸಲು ಕ್ರಮವಹಿಸಬೇಕು. ನಗರದ ಕೊಳಚೆ ನೀರು, ಚರಂಡಿ, ಶೌಚದ ನೀರು ಕೆರೆಗಳನ್ನು ಸೇರದಂತೆ ಸಂರಕ್ಷಿಸಬೇಕು. ವಿಶೇಷವಾಗಿ ಈಗಾಗಲೇ ಸೂಚಿಸಿರುವಂತೆ ಧಾರವಾಡದ ಕೆಲಗೇರಿ ಕೆರೆ ಮತ್ತು ಹುಬ್ಬಳ್ಳಿಯ ಉಣಕಲ್ ಕೆರೆಗಳ ಬಗ್ಗೆ ತುರ್ತು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಬೀದಿ ಬದಿಯಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಚೆಲ್ಲುವವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಂಡು ದಂಡ ವಿಧಿಸಬೇಕು. ಅಂತಹ ಕಸ ಹಾಕುವ ಬ್ಲ್ಯಾಕ್ ಸ್ಪಾಟ್‍ಗಳನ್ನು ಗುರುತಿಸಿ ತ್ಯಾಜ್ಯ ಸಂಗ್ರಹವಾಗದಂತೆ ಸುತ್ತಲಿನ ಜನರಿಗೆ ಮುನ್ನೆಚ್ಚರಿಕೆ ವಹಿಸಲು  ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು. 

ತ್ಯಾಜ್ಯಗಳನ್ನು  ಕಡಿಮೆಗೊಳಿಸಲು ಹೆಚ್ಚು ಜನಸಂದಣಿ ಆಗುವ ಮದುವೆ, ಮನರಂಜನೆ ಹಾಗೂ ಇತರ ಕಾರ್ಯಕ್ರಮಗಳನ್ನು ಹಸಿರುಯುಕ್ತವಾಗಿ ಆಯೋಜಿಸಲು ಗ್ರೀನ್ ಮ್ಯಾರೇಜ್, ವೆಸ್ಟ್ ಫ್ರೀ ಮ್ಯಾರೇಜ್, ವೆಸ್ಟ್ ಫ್ರೀ ಪ್ರೊಗ್ರ್ಯಾಮ್‍ಗಳನ್ನು ಹೆಚ್ಚು ಪ್ರಚಲಿತಪಡಿಸಬೇಕು. ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶಗಳನ್ನಾಗಿ ರೂಪಿಸಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ, ಮಹಾನಗರ ಪಾಲಿಕೆಯ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ್ ಗಾಳಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಭರಮನಿ ಹಾಜರಿದ್ದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪ್ರಾದೇಶಿಕ ಅಧಿಕಾರಿ ಜಗದೀಶ ಐ.ಹೆಚ್. ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಶಾಲಾ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply