“ಮೋದಿಯವರ ನೇತೃತ್ವದ ಸರಕಾರ ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದತ್ತ ಸಾಗುತ್ತಿದೆ” ಎಂದು ನಾನು ಕೆಲವಾರು ಬರಹಗಳಲ್ಲಿ ಪ್ರಸ್ತಾಪಿಸಿದ್ದಾಗ ಹಲವರು ಟ್ರೋಲ್ ಮಾಡಿ ಟೀಕಿಸಿದ್ದರು. ಪ್ರಗತಿಪರ ಗೆಳೆಯರೇ ಅದೆಲ್ಲಾ ಸಾಧ್ಯವಿಲ್ಲವೆಂದು ಅಕ್ಷೇಪ ಎತ್ತಿದ್ದರು. ಆದರೆ ಈಗ ಆಗಿದ್ದಾದರೂ ಏನು?
ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ನಾಲ್ಕಾರು ನಿರುದ್ಯೋಗಿ ಯುವಕರು ವ್ಯವಸ್ಥೆ ವಿರುದ್ಧ ರೋಸಿಹೋಗಿ ಅಧಿವೇಶನ ನಡೆಯುವಾಗ ಸಂಸತ್ತಿನ ಒಳಗೆ ಅಕ್ರಮವಾಗಿ ನುಗ್ಗಿ ಹೊಗೆ ಬಾಂಬ್ ಸಿಡಿಸಿ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಅವರು ಮಾಡಿದ ದುಸ್ಸಾಹಸ ಕಾನೂನಿನ ದೃಷ್ಟಿಯಲ್ಲಿ ಅಪರಾಧವಾದರೂ ಆ ಹುಡುಗರು ಎತ್ತಿದ ಪ್ರಶ್ನೆಗಳು ಪರಾಮರ್ಶೆ ಮಾಡುವಂತಹವು. ಹೀಗೆ ಬಂಡೆದ್ದವರ ಆಕ್ರೋಶ ಹಾಗೂ ಅದರ ಹಿಂದಿರುವ ಕಾರಣಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಅವರ ಘೋಷಣೆಗಳಲಿದ್ದ ಸಂಗತಿ ಹಿನ್ನೆಲೆಗೆ ಸರಿದು ಭದ್ರತಾ ಲೋಪ ಎನ್ನುವುದೇ ಮುನ್ನೆಲೆಗೆ ಬಂತು.
ಪ್ರತಿಪಕ್ಷಗಳಿಗೆ ಒಂದು ಅಸ್ತ್ರ ಸಿಕ್ಕಂತಾಯ್ತು. ಅಧಿವೇಶನ ರಣರಂಗವಾಯ್ತು. ಗ್ರಹಮಂತ್ರಿಗಳೋ ಇಲ್ಲವೇ ಪ್ರಧಾನಿಗಳೋ ಸಂಸತ್ತಿಗೆ ಬಂದು ಲೋಪವನ್ನು ಸರಿಪಡಿಸುತ್ತೇವೆ, ಉನ್ನತ ಮಟ್ಟದ ತನಿಖೆ ಮಾಡಿಸುತ್ತೇವೆ ಅಂತಾ ಹೇಳಿದ್ದರೆ ಪ್ರತಿಪಕ್ಷಗಳ ಸಿಟ್ಟೂ ಶಮನವಾಗುತ್ತಿತ್ತು ಹಾಗೂ ಅಧಿವೇಶನ ಮುಂದುವರೆಯುತ್ತಿತ್ತು. ಆದರೆ ಆಳುವವರ ಅಹಮಿಕೆ ಇದಕ್ಕೆ ಅವಕಾಶ ಕೊಡಲಿಲ್ಲ.
ಕೊನೆಗೂ ಅವರು ಬರಲಿಲ್ಲಾ, ಇವರು ಬಿಡಲಿಲ್ಲ. ಇದರಿಂದಾಗಿ ಕೆರಳಿದ ಪ್ರತಿಪಕ್ಷಗಳು ಭದ್ರತಾ ಲೋಪ ಕುರಿತು ಸ್ಪಷ್ಟನೆ ಕೊಡಲೇಬೇಕೆಂದು ಕೋಲಾಹಲ ಎಬ್ಬಿಸಿದವು. ಅದು ವಿರೋಧ ಪಕ್ಷಗಳ ಕೆಲಸವಾಗಿತ್ತು. ಪ್ರಧಾನಿಗಳು ಸ್ಪಷ್ಟನೆ ಕೊಡುವುದರಲ್ಲಿ ತಪ್ಪೇನೂ ಇರಲಿಲ್ಲ. ಆದರೆ ಪ್ರತಿಪಕ್ಷಗಳ ಆಗ್ರಹಕ್ಕೆ ಬೆಲೆಕೊಡುವ ಜಾಯಮಾನವೇ ಪ್ರಧಾನಿಗಳದ್ದಾಗಿಲ್ಲ. ಹೀಗಾಗಿ ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ. ಪ್ರಶ್ನಿಸುವವರನ್ನು ಸದನದ ಕಲಾಪದಿಂದಲೇ ಸಾಮೂಹಿಕವಾಗಿ ಉಚ್ಚಾಟಿಸುವ ಪರ್ವ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಶುರುವಾಯಿತು.
ಡಿಸೆಂಬರ್ 14 ರಂದು 14 ಸದಸ್ಯರನ್ನು ಅಮಾನತ್ತು ಗೊಳಿಸಲಾಯ್ತು. ಡಿ.18 ರಂದು ಮತ್ತೆ 78 ಜನ ಪ್ರತಿಪಕ್ಷದ ಸಂಸದರು ಉಚ್ಚಾಟನೆಗೊಂಡರು. ಡಿ.19 ರಂದು 49 ಸಂಸದರನ್ನು ಸದನದಿಂದ ಹೊರಗೆ ಹಾಕಲಾಯ್ತು. ಒಂದೇ ಅಧಿವೇಶನದ ಅವಧಿಯಲ್ಲಿ ಉಭಯ ಸದನಗಳಲ್ಲಿ ಒಟ್ಟು 141 ಸಂಸದರನ್ನು ಸದನದಿಂದ ಅಮಾನತ್ತು ಮಾಡಿದ್ದರಿಂದಾಗಿ ಎಂದೂ ಕಂಡರಿಯದ ವಿದ್ಯಮಾನಕ್ಕೆ ಸಂಸತ್ತು ಸಾಕ್ಷಿಯಾಯಿತು.
ಪ್ರಶ್ನೆ ಮಾಡಲೇಬಾರದು ಎಂದರೆ ಪ್ರತಿಪಕ್ಷಗಳಾದರೂ ಯಾಕೆ ಬೇಕು? ಸಂಸತ್ತಿಗೆ ಭದ್ರತಾ ಲೋಪ ಆದಾಗ ಅದರ ಬಗ್ಗೆ ಕೂಡಾ ಸರಕಾರದಿಂದ ಸ್ಪಷ್ಟನೆ ಕೇಳುವುದು ಅಪರಾಧವಾ? ಕೇಳಿದ ಪ್ರಶ್ನೆಗಳಿಗೆ ಸಂಬಂಧಿಸಿದವರು ಉತ್ತರ ಕೊಡದೇ ಇರುವಾಗ ವಿರೋಧ ಪಕ್ಷದವರು ಬಿತ್ತಿಪತ್ರಗಳನ್ನು ತೋರುವುದು, ಘೋಷಣೆಗಳನ್ನು ಕೂಗುವುದು ಶಿಕ್ಷಾರ್ಹವಾ? ಸಂಸತ್ತಿನ ಹೊರಗೆ ಹೇಳಿಕೆ ಕೊಡುವ ಗ್ರಹ ಸಚಿವರು ಹಾಗೂ ಪ್ರಧಾನಿಗಳು ಯಾಕೆ ಸದನದಲಿ ಸ್ಪಷ್ಟೀಕರಣ ಕೊಡುತ್ತಿಲ್ಲ? ಯಾವುದೇ ವಿಷಯ ಇರಲಿ ಸದನದಲ್ಲಿ ಚರ್ಚೆ ನಡೆಯಬೇಕು ಎಂದು ಆಗ್ರಹಿಸುವುದು ಸಂಸತ್ ಸದಸ್ಯರುಗಳ ಹಕ್ಕಲ್ಲವೇ? ಸದನದ ಘನತೆ ಕುಗ್ಗಿಸುವ ನಡತೆ ತೋರಿದ್ದಕ್ಕಾಗಿ ಈ ಅಮಾನತ್ತು ಎಂಬುದು ಸರಕಾರದ ಸಮರ್ಥನೆ. ಸಂಸದರ ಹಕ್ಕುಗಳನ್ನು ಸರಕಾರ ಮಾನ್ಯ ಮಾಡಿದ್ದರೆ ಈ ಘನತೆಗೆ ಯಾಕೆ ಕುಂದು ಬರುತ್ತಿತ್ತು? ಇದೇ ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಅದೆಷ್ಟು ಸಲ ಸದನದಲ್ಲಿ ಕೋಲಾಹಲ ಸೃಷ್ಟಿಸಿಲ್ಲ?
ಪ್ರತಿರೋಧದ ದ್ವನಿಗಳೇ ಇಲ್ಲದಂತೆ ಮಾಡುವುದು ಖಂಡಿತಾ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ವ್ಯವಸ್ಥಿತ ಹುನ್ನಾರ. ಸಂಸದರ ಹಕ್ಕುಗಳನ್ನು ಹತ್ತಿಕ್ಕುವ ವಿದ್ಯಮಾನಗಳು ಸರ್ವಾಧಿಕಾರಿ ಆಡಳಿತದಲ್ಲಿ ಮಾತ್ರ ಸಾಧ್ಯ. ಆದರೆ ಜನತಂತ್ರ ವ್ಯವಸ್ಥೆಯಲ್ಲೂ ಅದೇ ಮಾದರಿ ಆರಂಭವಾಗಿದೆ ಎಂದರೆ ಡೆಮಾಕ್ರಸಿ ಡೇಂಜರ್ ಝೋನ್ ಲ್ಲಿದೆ ಎಂದೇ ಅರ್ಥ. ಲೋಕಸಭೆಗೆ ಚುನಾವಣೆ ಮುಂದಿರುವ ದಿನಮಾನದಲ್ಲೇ ಈ ರೀತಿಯ ಡಿಕ್ಟೇಟರ್ ಆದೇಶಗಳು ಜಾರಿಯಾಗುತ್ತಿರುವಾಗ ಮತ್ತೆ ಇದೇ ಸರಕಾರ ಬಹುಮತ ಪಡೆದು ಮೂರನೇ ಸಲ ಅಧಿಕಾರಕ್ಕೇರಿದರೆ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವೇ?
ಈ ಅಪಾಯದ ಅರಿವು ಪ್ರತಿಪಕ್ಷಗಳಿಗೆ ಇರಬೇಕಿದೆ. ತಮ್ಮ ಸ್ವಾರ್ಥಗಳನ್ನು ಬಿಟ್ಟು ಒಂದಾಗಬೇಕಿದೆ. ಇಂಡಿಯಾ ಹೆಸರಲ್ಲಿ ಒಕ್ಕೂಟ ರಚಿಸಿಕೊಂಡು ಅದರಲ್ಲಿ ತಮಗೆಷ್ಟು ಇತರರಿಗೆಷ್ಟು ಅವಕಾಶ ಎಂಬ ಲೆಕ್ಕಾಚಾರಗಳ ಬಿಟ್ಟು ಪ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಲು ಒಂದುಗೂಡಬೇಕಾದ ಅಗತ್ಯವಿದೆ. ಸಂವಿಧಾನ ಉಳಿಸುವ ಸದುದ್ದೇಶದಿಂದ ಒಂದಾಗಿ ಸಂಘಟಿತವಾಗಿ ಬದ್ದತೆಯಿಂದ ಚುನಾವಣೆ ಎದುರಿಸಿದ್ದೇ ಆದರೆ ಬಿಜೆಪಿಯನ್ನು ಸೋಲಿಸಲು ಸಾಧ್ಯ? ಇಲ್ಲದೇ ಹೋದರೆ ಮುಂಬರುವ ದಿನಗಳಲ್ಲಿ ಪ್ರತಿಪಕ್ಷಗಳಿಗೆ ಉಳಿಗಾಲವಿಲ್ಲ. ಮತ್ತೆ ಪ್ಯಾಸಿಸ್ಟ್ ಸರಕಾರ ಬಂದರೆ ಸಂಸತ್ತಿನಲ್ಲಿ ಯಾರಿಗೂ ದ್ವನಿ ಎತ್ತಲು ಬಿಡುವುದಿಲ್ಲ. ಸರ್ವಾಧಿಕಾರದ ಘೋಷಣೆ ತಪ್ಪಿಸಲಾಗುವುದಿಲ್ಲ.
ಒಂದು ದೇಶ ಒಂದು ಚುನಾವಣೆ ಬಿಜೆಪಿ ಪಕ್ಷದ ಆದ್ಯತೆಯಾಗಿದೆ. ತದ ನಂತರ ಒಂದು ದೇಶ ಎರಡೇ ಪಕ್ಷ ಎನ್ನುವುದು ಜಾರಿಯಾಗಲಿದೆ. ಅಂತಿಮವಾಗಿ ಚುನಾವಣೆಗಳನ್ನೇ ಬಹಿಷ್ಕರಿಸಿ ಸರ್ವಾಧಿಕಾರಿ ಸರಕಾರ ಘೋಷಣೆಯಾಗುತ್ತದೆ. ಸಂವಿಧಾನವನ್ನೇ ಅಮಾನತ್ತಿನಲ್ಲಿಟ್ಟು ಮನುಸ್ಮೃತಿ ಆಧಾರಿತ ಸಂವಿಧಾನವನ್ನು ಜಾರಿಗೆ ತರಲಾಗುತ್ತದೆ.
ಆಗ ಎಲ್ಲಾ ವಿರೋಧ ಪಕ್ಷಗಳು ಹೇಳಹೆಸರಿಲ್ಲವಾಗುತ್ತವೆ. ಪ್ರತಿರೋಧದ ದ್ವನಿಗಳನ್ನು ಅಡಗಿಸಲಾಗುತ್ತದೆ. ಹೋರಾಟಗಳನ್ನು ದಮನಿಸಲಾಗುತ್ತದೆ. ಈ ಸಂಭವನೀಯತೆಗಳ ಬಗ್ಗೆ ಬಿಜೆಪಿಯೇತರ ಎಲ್ಲಾ ಪಕ್ಷಗಳೂ ಈಗಲೇ ಯೋಚಿಸಬೇಕಿದೆ. ಸದನದಲ್ಲಾದ ಸಂಸದರ ಸಾಮೂಹಿಕ ಅಮಾನತ್ತು ಎಚ್ಚರದ ಗಂಟೆಯಾಗಬೇಕಿದೆ. ಇಷ್ಟೆಲ್ಲಾ ಆದ ಮೇಲೂ ಎಲ್ಲಾ ಪ್ರತಿಪಕ್ಷಗಳೂ ಎಚ್ಚರಗೊಳ್ಳದಿದ್ದರೆ, ಸಂಘಟಿತರಾಗದಿದ್ದರೆ ಸರ್ವನಾಶವಾಗಲು ಸಿದ್ದರಾಗಬೇಕಿದೆ. ಸರ್ವಾಧಿಕಾರ ಸ್ಥಾಪನೆಯಾದರೆ ಅದರ ಹೊಣೆಗಾರಿಕೆಯನ್ನೂ ಈ ಎಲ್ಲಾ ಪ್ರತಿಪಕ್ಷಗಳು ಹೊರಬೇಕಾಗುತ್ತದೆ. ಪ್ಯಾಸಿಸ್ಟರು ಮತ್ತೆ ಅಧಿಕಾರಕ್ಕೆ ಬರುವುದೇ ಆದರೆ ಅದು ಅವರ ಶಕ್ತಿಯಿಂದಲ್ಲಾ, ವಿರೋಧ ಪಕ್ಷಗಳ ದೌರ್ಬಲ್ಯ, ಸ್ವಾರ್ಥ, ಒಳಜಗಳಗಳಿಂದ ಎಂಬುದನ್ನು ಪ್ರತಿಪಕ್ಷದ ನಾಯಕರು ಅರಿಯಬೇಕಿದೆ. ಪ್ರಜಾಪ್ರಭುತ್ವವನ್ನು ಉಳಿಸುವ, ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ಜನರಿಗಿರುವಷ್ಟೇ ವಿರೋಧ ಪಕ್ಷಗಳಿಗೂ ಇರಬೇಕಾಗುತ್ತದೆ. ಬೇಜವಾಬ್ದಾರಿ ತೋರಿದ್ದೇ ಆದರೆ ಬಹುತ್ವದ ಭಾರತ ಹಿಂದುತ್ವದ ಪಾಲಾಗುತ್ತದೆ. ಸಮಾನತೆ ಸಾರುವ ಸಂವಿಧಾನದ ಮೇಲೆ ಮನುಸ್ಮೃತಿ ಸವಾರಿ ಮಾಡುತ್ತದೆ.
– ಶಶಿಕಾಂತ ಯಡಹಳ್ಳಿ, ಹಿರಿಯ ರಂಗಕರ್ಮಿ




