ಕಲಬುರಗಿ: ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿ ಅವರ ತಾಯಿ ರಸ್ತೆ ದಾಟುವಾಗ ಬೈಕ್ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಸೇಡಂ ರಿಂಗ್ ರಸ್ತೆಯ ಟೊಯೋಟಾ ಶೋರೂಂ ಬಳಿ ನಡೆದಿದೆ.
ಕಲಬುರಗಿಯಲ್ಲಿರುವ ಮಗಳನ್ನು ನೋಡಲು ಬೀದರ್ ನಿಂದ ಬಂದ ಅರವಿಂದ ಕುಮಾರ್ ಅರಳಿ ಅವರ ತಾಯಿ ಸುಮಿತ್ರಾಬಾಯಿ (75) ಅವರು ಟೊಯೋಟಾ ಶೋರೂಂ ಬಳಿ ರಸ್ತೆ ದಾಟುವಾಗ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅವರು ಕಾಲವಶರಾಗಿದ್ದಾರೆ.
ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಉರುಳಿ ಬಿದ್ದ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಡಿಸಿಪಿ ಕನ್ನಿಕಾ, ಇನ್ಸ್ಪೆಪಕ್ಟರ್ ಖಾಜಾ ಹುಸೇನ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಇನ್ನು ಈ ಸಂಬಂಧ ಕಲಬುರಗಿ ಸಂಚಾರಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ನಂತರ ಬೈಕ್ ಸವಾರ ಪರಾರಿಯಾಗಿದ್ದಾನೆ. ರಸ್ತೆಯಲ್ಲಿನ ಸಿಸಿಟಿವಿ ಪರಿಶೀಲಿಸಿ ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




