ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ: ಜಿ.ಪರಮೇಶ್ವರ್

2 years ago

ಬೆಳಗಾವಿ: ರಾಜ್ಯದಲ್ಲಿ ಪೊಲೀಸ್ ಆಡಳಿತ ‌ಸಂಪೂರ್ಣ ಸಮರ್ಥವಾಗಿದ್ದು, ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಇದಕ್ಕೆ ಲಭ್ಯವಿರುವ ಅಂಕಿ-ಅಂಶಗಳೇ ಸಾಕ್ಷಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನ ಪರಿಷತ್ ನಲ್ಲಿ ಹೇಳಿದರು.

ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಮುನಿರಾಜುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ವ್ಯಾಪಿ ಎಲ್ಲಿಯೂ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಇತ್ತೀಚಿಗೆ ನಡೆದ 57 ಕೊಲೆ ಪ್ರಕರಣಗಳ ಪೈಕಿ 56 ಪ್ರಕರಣಗಳಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆ ಪೊಲೀಸರು ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಆಡಳಿತ ಬಿಗಿಯಿಂದ ಕೂಡಿದೆ ಎಂದರು.

ಯಾವುದೇ ಅಂಕಿ-ಅಂಶಗಳು ಇಲ್ಲದೆ ನಮ್ಮ ಸರ್ಕಾರದ ವಿರುದ್ಧ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಅಲ್ಲದೆ, ಕೋಮು ಗಲಭೆಗಳು ನಿಯಂತ್ರಣದಲ್ಲಿವೆ. ಹಿಂದಿನ ಬಿಜೆಪಿ ಸರ್ಕಾರದ ಅವಯಲ್ಲಿ ಕೋಲಾರ, ಉಪ್ಪಿನ ಅಂಗಡಿ, ನರಗುಂದ, ಹಿಜಾಬ್ ಕಡೆ ಗಲಾಟೆ, ಶಿವಮೊಗ್ಗದಲ್ಲಿ ಸಾರ್ವಕರ್ ಫೋಟೋ, ಹೀಗೆ ಸಣ್ಣ ಸಣ್ಣ ವಿಚಾರಗಳಿಗೂ ಗಲಭೆ ನಡೆಸಲಾಗುತ್ತಿತ್ತು ಎಂದು ಮಾಹಿತಿ ನೀಡಿದರು.

ಹಿಂದೆ 2011ರಿಂದ 2013ರವರೆಗೆ ಎರಡು ವರ್ಷ ನಾಲ್ಕು ತಿಂಗಳು ಬಿಜೆಪಿಯ ಆರ್.ಅಶೋಕ್ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಬರೋಬ್ಬರಿ 4121 ಕೊಲೆ ಪ್ರರಕಣಗಳು ನಡೆದಿವೆ. ಅದರಲ್ಲೂ ಅತ್ಯಾಚಾರ ಪ್ರರಕಣಗಳು 1639ರಷ್ಟಿದ್ದವು. 234 ಪೋಕ್ಸೋ ಕಾಯ್ದೆ ಅಡಿಯೂ ಮೊಕದ್ದಮೆ ದಾಖಲಾಗಿವೆ. ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿಯೂ 2254 ಕೊಲೆಗಳು, 915ರಷ್ಟು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಆರಗ ಜ್ಞಾನೇಂದ್ರ ಗೃಹ ಮಂತ್ರಿಯಾಗಿದ್ದ ವೇಳೆಯೂ 2417 ಕೊಲೆಗಳು, 949 ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಹಿಂದಿನ ಸರ್ಕಾರ ಮತ್ತು ಗೃಹ ಸಚಿವರ ಅವಧಿಯ ಮಾಹಿತಿಯನ್ನು ಸದನಕ್ಕೆ ನೀಡಿದರು.

ಇನ್ನೂ, ಕಾಂಗ್ರೆಸ್ ಸರ್ಕಾರ ಆಡಳಿತದ ಆರಂಭದಿಂದ ಇದುವರೆಗೂ 616 ಕೊಲೆಗಳು, 310 ಅತ್ಯಾಚಾರ ಪ್ರಕರಣಗಳು ಮಾತ್ರ ವರದಿಯಾಗಿದೆ ಎಂದರು.

ಬಿಜೆಪಿಯ ಭಾರತಿ ಶೆಟ್ಟಿ ಅವರ ಮತ್ತೊಂದು‌ಪ್ರಶ್ನೆಗೆ ಉತ್ತರಿಸಿದ ಅವರು, ರಾಜಧಾನಿ ಬೆಂಗಳೂರಿನಲ್ಲಿ ನಾಗರಿಕರ ಸುರಕ್ಷತೆಗೆ ಹೆಚ್ಚುವರಿ 2500 ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಈಗಾಗಲೇ ಬೆಂಗಳೂರು ವ್ಯಾಪ್ತಿಯಲ್ಲಿ 7500 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆಯಡಿಯಲ್ಲಿ ಹೆಚ್ಚುವರಿಯಾಗಿ 2500 ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗುವುದು. ಇವುಗಳ ಜತೆಗೆ ಕಮಾಂಡ್ ಕಂಟ್ರೋಲ್ ಸೆಂಟರ್ ನಲ್ಲಿ ಇವುಗಳ ಕಾರ್ಯಾಚರಣೆಯನ್ನು ವೀಕ್ಷಣೆ ಮಾಡಲಾಗುತ್ತಿದೆ ಎಂದರು.

ಕ್ಯಾಮೆರಾಗಳು ಹೆಚ್ಚು ಗುಣಮಟ್ಟದ್ದು ಆಗಿದ್ದು, ವ್ಯಕ್ತಿಗಳ ಕೈಯಲ್ಲಿರುವ ಗಡಿಯಾರದ ಸಮಯವನ್ನು ನೋಡಬಹುದಾಗಿದೆ. ಇನ್ನೂ, ಹೆಚ್ಚಿನ ಕ್ಯಾಮೆರಾಗಳನ್ನು ವಾಣಿಜ್ಯ ಕಟ್ಟಡ, ಪ್ರದೇಶ, ಶಾಲಾ ಕಾಲೇಜು, ಸರ್ಕಾರಿ ಕಟ್ಟಡ, ಬಸ್ ನಿಲ್ದಾಣಗಳಲ್ಲಿ ಅಳವಡಿಸಿ ವಿಶೇಷ ನಿಗಾ ಇರಿಸಲಾಗಿದೆ ಎಂದರು.

Leave a Reply