ಸರ್ಕಾರಿ ಶಾಲೆಗಳ ಸಮವಸ್ತ್ರಗಳಲ್ಲಿ ಗುಣಮಟ್ಟಕ್ಕೆ ಆದ್ಯತೆ: ಮಧು ಬಂಗಾರಪ್ಪ

2 years ago

ಬೆಳಗಾವಿ: ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸಮವಸ್ತ್ರಗಳಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದ್ದು, ಯಾವುದೇ ಕಾರಣಕ್ಕೂ ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನ ಸರ್ಕಾರ ಕಡಿಮೆ ಗುಣಮಟ್ಟದ ಸಮವಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿತ್ತು. ಇದಕ್ಕೆ ಕಾರಣ ಏನು ಇದರ ಹಿಂದಿನ ಉದ್ದೇಶವೇನು ಎಂಬುದನ್ನು ಬಹಿರಂಗಪಡಿಸುವುದಿಲ್ಲ. ಆದರೆ ನಮ್ಮ ಸರ್ಕಾರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸಮವಸ್ತ್ರವನ್ನು ವಿತರಿಸಲಿದೆ. ಎಲ್ಲಾ ಪ್ರಕ್ರಿಯೆಗಳು ಕೂಡ ಟೆಂಡರ್ ಮೂಲಕವೇ ನಡೆಯುತ್ತಿವೆ ಎಂದರು.

ಹಿಂದಿನ ಸರ್ಕಾರ ಅತ್ಯಂತ ಕಡಿಮೆ ಗುಣಮಟ್ಟದ ಸಮವಸ್ತ್ರ ವಿತರಣೆ ಮಾಡಿರುವ ಬಗ್ಗೆ ದೂರುಗಳು ಬಂದಿದ್ದವು. ಇದನ್ನು ನಾವು ತನಿಖೆ ನಡೆಸಿ ಇದರಲ್ಲಿ ಶಾಮೀಲಾಗಿದ್ದ ಕೆಲವು ಅಧಿಕಾರಿಗಳನ್ನು ಅಮಾನತುಪಡಿಸಿದ್ದೇವೆ. ಅಲ್ಲದೆ ಕರ್ನಾಟಕ ಕೈಮಗ್ಗಕ್ಕೆ ನೀಡಬೇಕಾಗಿದ್ದ ಹಣವನ್ನು ಸಹ ಕೊಟ್ಟಿಲ್ಲ. ಇದರಲ್ಲಿ ಯಾರೇ ಭಾಗಿಯಾಗಿದ್ದರು. ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದರು.

8ನೇ ತರಗತಿ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಲು ಹಣಕಾಸಿನ ತೊಂದರೆ ಇಲ್ಲ. ಆದರೆ ಏಕಕಾಲಕ್ಕೆ ಇದನ್ನು ಉತ್ಪಾದನೆ ಮಾಡಿಕೊಡಲು ವಿಳಂಬವಾಗುತ್ತದೆ. ಬರುವ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡುವುದಾಗಿ ಮಾಹಿತಿ ನೀಡಿದರು.

ಮಕ್ಕಳಿಗೆ ಸೈಕಲ್ ಕೊಡಬೇಕೆಂಬುದರಲ್ಲಿ ಎರಡು ಮಾತಿಲ್ಲ. ಒಂದೇ ಹಂತದಲ್ಲಿ ಒಂದೇ ಕಂಪನಿಗೆ ನೀಡಿದರೆ ಉತ್ಪಾದನೆ ಮಾಡುವುದು ಕಷ್ಟವಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚಿಸಿ ಬರುವ ಶೈಕ್ಷಣಿಕ ವರ್ಷದಿಂದ ವಿಳಂಬವಾಗದಂತೆ ಸಕಾಲಕ್ಕೆ ಸರಿಯಾಗಿ ವಿತರಣೆ ಮಾಡುತ್ತೇವೆ ಎಂದರು.

ಅಲ್ಲದೆ ನಮ್ಮ ಸರ್ಕಾರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸಮವಸ್ತ್ರ ನೀಡುವುದರ ಜೊತೆಗೆ ಅವರ ಪೌಷ್ಟಿಕಾಂಶದ ಕಡೆಯೂ ಗಮನಹರಿಸಿದೆ. ಈವರೆಗೆ ವಾರಕ್ಕೆ ಒಂದು ಮೊಟ್ಟೆಯನ್ನು ವಿತರಿಸಲಾಗುತ್ತಿತು. ಇದೀಗ ಇದರ ಸಂಖ್ಯೆಯನ್ನು ಎರಡಕ್ಕೆ ಹೆಚ್ಚಳ ಮಾಡಲಾಗಿದೆ. ಇದರಿಂದ ಶೈಕ್ಷಣಿಕ ಚಟುವಟಿಕೆಗಳು ಉತ್ತೇಜನಗೊಳ್ಳುತ್ತವೆ ಎಂದು ಸದನಕ್ಕೆ ಮಾಹಿತಿ ನೀಡಿದರು.

Leave a Reply