ಬೆಂಗಳೂರು: ಇದು ರಕ್ಷಣೆ ನೀಡಬೇಕಾದವರೆ ಸುಲಿಗೆಗೆ ಮುಂದಾದ ಕತೆ. ಹೌದು. ಪೊಲೀಸರನ್ನು ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆ ಜಾರಿ ಹಾಗೂ ಜನರ ರಕ್ಷಣೆಗಾಗಿ ನೇಮಕ ಮಾಡಿಕೊಂಡು ನಿಯೋಜಿಸುತ್ತದೆ. ಆದರೆ, ಇದೇ ಪೊಲೀಸರು ನಾಗರಿಕರನ್ನು ಸುಲಿದ ಪ್ರಕರಣ ವರದಿಯಾಗಿದ್ದವು.
ಹೀಗೆ ಅಮಾಯಕರನ್ನು ವಿವಿಧ ಪ್ರಕರಣಗಳ ಹೆಸರಲ್ಲಿ ವಶಕ್ಕೆ ಪಡೆದು ಅಕ್ರಮ ಬಂಧನದಲ್ಲಿಟ್ಟು, ಹಲ್ಲೆ ನಡೆಸಿದ ಆರೋಪ ಬೆಂಗಳೂರು ನಗರದ ಪೊಲೀಸರ ವಿರುದ್ಧ ಕೇಳಿಬಂದಿತ್ತು. ಈ ಸಮಬಂಧ ನಗರದ ವಿವಿಧ ಠಾಣೆಗಳ 18 ಪೊಲೀಸ್ ಇನ್ಸ್ ಪೆಕ್ಟರ್ ಗಳಿಗೆ ನೋಟಿಸ್ ನೀಡಲು ರಾಜ್ಯ ಮಾನವ ಹಕ್ಕುಗಳ ಆಯೋಗ ಮುಂದಾಗಿದೆ.
18 ಪೊಲೀಸ್ ಇನ್ಸ್ ಪೆಕ್ಟರ್ ಗಳಿಗೆ ನೋಟಿಸ್ ನೀಡಿ, ಇವರ ವಿರುದ್ಧದ ಆರೋಪಗಳ ಬಗ್ಗೆ ವಿಚಾರಣೆ ನಡೆಸಿ, ವರದಿ ನೀಡುವಂತೆ ಮೇಲಧಿಕಾರಿಗಳಿಗೆ ಆಯೋಗ ಸೂಚನೆ ನೀಡಿದೆ. ಮಾನವ ಹಕ್ಕುಗಳ ಉಲ್ಲಂಘನೆ ಸಂಬಂಧಿಸಿದಂತೆ ಈ ವರ್ಷ ಮಾನವ ಹಕ್ಕುಗಳ ಆಯೋಗದಲ್ಲಿ 4,500ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಇದರಲ್ಲಿ ಪೊಲೀಸ್ ದೌರ್ಜನ್ಯ ಕುರಿತು ಹೆಚ್ಚು ದೂರುಗಳು ಇವೆ.
ಇದುವರೆಗೆ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷ ಮತ್ತು ಸದಸ್ಯರು ಇಲ್ಲದ ಕಾರಣ ಯಾವ ಪ್ರಕರಣದ ಕುರಿತು ಕೂಡ ತನಿಖೆ ನಡೆದಿರಲಿಲ್ಲ. ಈಗ ಹೊಸದಾಗಿ ಅಧ್ಯಕ್ಷ ಹಾಗೂ ಸದಸ್ಯರು ನೇಮಕವಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು, ಪ್ರಾಥಮಿಕವಾಗಿ 150 ಪ್ರಕರಣಗಳನ್ನು ತಕ್ಷಣ ತನಿಖೆ ನಡೆಸಲು ನಿರ್ಧರಿಸಿದ್ದಾರೆ. ಜೊತೆಗೆ ರಾಜ್ಯದಲ್ಲಿ ನಡೆದ 39 ಲಾಕಪ್ ಡೆತ್ ಪ್ರಕರಣಗಳನ್ನೂ ತನಿಖೆ ನಡೆಸಲು ಆಯೋಗ ತೀರ್ಮಾಮ ಮಾಡಿದೆ.
150 ಪ್ರಕರಣಗಳಲ್ಲಿ ಶೇ.90 ರಷ್ಟು ಪೊಲೀಸರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಅಕ್ರಮ ಬಂಧನ, ಸಾಕ್ಷ್ಯಾಧಾರಗಳ ನಾಶ, ಸುಳ್ಳು ಪ್ರಕರಣ ದಾಖಲು, ಅಕ್ರಮವಾಗಿ ಬಂಧಿಸಿ ಹಲ್ಲೆ ಆರೋಪ, ಅಕ್ರಮವಾಗಿ ಬಂಧಿಸಿ ಹಣ ಪಡೆದು ಬಿಟ್ಟಿರುವ ಆರೋಪ ಸೇರಿದಂತೆ ಪೊಲೀಸರ ಮೇಲೆ ಸುಮಾರು 135 ದೂರುಗಳು ದಾಖಲಾಗಿವೆ. ಈ ಎಲ್ಲ ಪ್ರಕರಣಗಳನ್ನು ಜನವರಿ ಅಂತ್ಯದ ಒಳಗೆ ತನಿಖೆ ನಡೆಸಿ, ವರದಿ ನೀಡುವಂತೆ ಆಯೋಗ ಅಧಿಕಾರಿಗಳಿಗೆ ಸೂಚನೆ ನೀಡಿದೆ.




