ಬೆಂಗಳೂರು: ದೇಶದ ವಿವಿಧ ಕಡೆ ಭಯೋತ್ಪಾದಕ ಚಟುವಟಿಕೆ ನಡೆಸುವ ಶಂಕಿತ ಉಗ್ರರ ಸಂಚಿನ ವಿರುದ್ಧ ಸಮರ ಸಾರಿರುವ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಅಧಿಕಾರಿಗಳು ಬೆಂಗಳೂರು ಸೇರಿದಂತೆ ಮಹಾರಾಷ್ಟ್ರ ಹಲವು ಕಡೆ ನಡೆಸಿದ ದಾಳಿಯಲ್ಲಿ ಹಲವು ಸ್ಪೋಟಕ ಸಂಗತಿಗಳು ಬಹಿರಂಗವಾಗಿವೆ. ಶಂಕಿತರ ಅಡಗುದಾಣಗಳ ಮೇಲೆ ಎನ್.ಐ.ಎ. ನಡೆಸಿದ ದಾಳಿಯಲ್ಲಿ ಹಮಾಸ್ ಉಗ್ರರಿಗೆ ಸಂಬಂಧಿಸಿದ ಧ್ವಜ, ಗನ್, ಲ್ಯಾಪ್ಟಾಪ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ.
ಬೆಂಗಳೂರಿನ ಪುಲಿಕೇಶಿನಗರದಲ್ಲಿ ದಾಳಿ ಮುಂದುವರೆದಿದ್ದು, ಶಂಕಿತ ಉಗ್ರ ಅಲಿ ಅಬ್ಬಾಸ್ ನೆಲೆಸಿದ್ದ ಫ್ಲಾಟ್ ಹಾಗೂ ಆತನ ಉರ್ದು ಶಾಲೆಯಲ್ಲಿ ಶೋಧಕಾರ್ಯ ಮುಂದುವರೆದಿದೆ. ಆದರೆ ಇಲ್ಲಿಯವರೆಗೆ ಅಲ್ಲಿ ದೊರಕಿರುವ ವಸ್ತುಗಳ ಬಗ್ಗೆ ಪ್ರತ್ಯೇಕ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ಮಹಾರಾಷ್ಟ್ರದ ಹಲವೆಡೆ ಶೋಧ ನಡೆಸಿದ ವೇಳೆ 51 ಹಮಾಸ್ ಧ್ವಜ ಪತ್ತೆಯಾಗಿವೆ. ದಾಳಿ ವೇಳೆಲ್ಲಿ 68.03 ಲಕ್ಷ ನಗದು, ಒಂದು ಪಿಸ್ತೂಲ್, ಎರಡು ಏರ್ ಗನ್, ಎಂಟು ಚಾಕುಗಳು, ಎರಡು ಲ್ಯಾಪ್ಟಾಪ್, ಆರು ಹಾರ್ಡ್ ಡಿಸ್ಕ್, ಮೂರು ಸಿಡಿಗಳು, 38 ಮೊಬೈಲ್, ಹತ್ತು ಮ್ಯಾಗಜೀನ್ ಬುಕ್ಸ್ ಹಾಗೂ 51 ಹಮಾಸ್ ಧ್ವಜಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಪುಲಿಕೇಶಿನಗರ, ಮಹಾರಾಷ್ಟ್ರದ ಪಡ್ಗಾ, ಬೊರಿವಲಿ, ಠಾಣೆ, ಮೀರಾ ರಸ್ತೆ ಹಾಗೂ ಪುಣೆ ಸೇರಿ ಒಟ್ಟು 44 ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು, 15 ಶಂಕಿತರನ್ನು ಬಂಧಿಸಿದ್ದರು. ಶಂಕಿತರ ವಿಚಾರಣೆ ವೇಳೆ ಆದಿಲ್ ಖೋತ್ ಮನೆಯಲ್ಲಿ ಧ್ವಜಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಫಿರೋಜ್ ದಸ್ತಗೀರ್ ಖುವಾನ್, ರಾಜೀಲ್ ಅಬ್ದುಲ್, ಜಿಶಾನದ ಅಝಾಜ್, ಮುಕ್ಬುಲ್ ನಚಾಮ್ ಮನೆಯಲ್ಲಿ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳು ಪತ್ತೆಯಾಗಿವೆ. ಸೈಫ್ ಅತೀಕ್ ನಚಾಮ್, ರೇಹಾನದ ಅಶ್ಫಾಕ್ ಸೂಸೆ ಹಾಗೂ ಅತೀಫ್ ನಾಸಿರ್ ಮುಲ್ಲಾ ಮನೆಯಲ್ಲಿ ನಗದು ಸಿಕ್ಕಿದೆ. ಇಲ್ಲಿ ದೊರಕಿದ ನಂಟಿನ ಮೇಲೆ ಪುಲಿಕೇಶಿನಗರದಲ್ಲಿ ಅಲಿ ಅಬ್ಬಾಸ್ ಎಂಬಾತನ ಮನೆ ಮೇಲೆ ದಾಳಿ ನಡೆಸಿ ಶೋಧಕಾರ್ಯಾಚರಣೆ ನಡೆದಿದೆ.
ದಾಳಿ ವೇಳೆ ಮನೆಯಲ್ಲಿದ್ದ ಮೊಬೈಲ್, ಲ್ಯಾಪ್ಟಾಪ್ ಪರಿಶೀಲನೆ ನಡೆಸಿದ್ದು, ಅಲಿ ಅಬ್ಬಾಸ್ ಮನೆಯಲ್ಲಿ ಹಣ ಮಾತ್ರ ಸಿಕ್ಕಿದೆ. ಅಬ್ಬಾಸ್ ವಿಚಾರಣೆ ನಡೆಸಿದ ಅಧಿಕಾರಿಗಳು ಮಹತ್ವದ ಮಾಹಿತಿಯನ್ನು ಕಲೆಹಾಕಿ ತನಿಖೆ ಮುಂದುವರೆಸಿದ್ದಾರೆ.
ಪುಲಿಕೇಶಿನಗರದಲ್ಲಿ ದಾಳಿಗೆ ಒಳಗಾದ ಅಬ್ಬಾಸ್ ಅಲಿ ಮುಂಬೈ ಮೂಲದ ವ್ಯಕ್ತಿ. ಆತ ಪುಲಿಕೇಶಿನಗರ ವ್ಯಾಪ್ತಿಯಲ್ಲಿ ಉರ್ದು ಶಾಲೆ ನಡೆಸುತ್ತಿದ್ದ ಎಂದು ಗೊತ್ತಾಗಿದೆ. ಎನ್ಐಎ ಈತನನ್ನು ವಶಕ್ಕೆ ಪಡೆದು ಕರೆದೊಯ್ದಿದ್ದು, ಹೆಚ್ಚಿನ ವಿವರಗಳು ಸಿಗಬೇಕಿದೆ.
ಅಧಿಕಾರಿಗಳು ನಕಲಿ ನೋಟು ಜಾಲದ ಮೇಲೆ ಕಣ್ಣಿಟ್ಟು ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಈ ಪೈಕಿ ಕರ್ನಾಟಕದ ಬಳ್ಳಾರಿಯಲ್ಲೂ ಒಬ್ಬನನ್ನು ಬಂಧಿಸಿದ್ದರು. ಬಳ್ಳಾರಿಯಲ್ಲಿ ಬಂಧಿತ ಆರೋಪಿಯನ್ನು ಮಹೇಂದ್ರ ಎಂದು ಗುರುತಿಸಲಾಗಿದ್ದು, ಆತನಿಂದ ಭಾರಿ ಪ್ರಮಾಣದ ನಕಲಿ ನೋಟು, ನೋಟು ತಯಾರಿಸುವ ಪೇಪರ್, ಪ್ರಿಂಟಿಂಗ್ ಮೆಷಿನ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ವ್ಯಕ್ತಿ 500, 200, ಹಾಗೂ 100 ರೂ ಮುಖಬೆಲೆಯ ನೋಟು ತಯಾರಿಸುತ್ತಿರುವುದು ಬಯಲಾಗಿತ್ತು. ಅದರ ಜಾಲ ಹಿಡಿದು ತನಿಖೆ ಮುಂದುವರಿಸಿದಾಗ ಈ ಬೃಹತ್ ಜಾಲ ಬೆಳಕಿಗೆ ಬಂದಿದೆ.




