ಪ್ರಗತಿಪರ ದೃಷ್ಟಿಕೋನವೇ ಅಂಬೇಡ್ಕರ್ ಅವರ ಕನಸು

2 years ago

#Ambedkar #dream #progressive #vision

ಬಳ್ಳಾರಿ: ದೇಶದ ಭವಿಷ್ಯವನ್ನು ಪ್ರಗತಿಪರ ದೃಷ್ಡಿಕೋನದಿಂದ ನಿರ್ಮಿಸುವಲ್ಲಿ ಡಾ.ಬಿ.ಆರ್ ಅಂಬೇಡ್ಕರ್ರವರ ಕೊಡುಗೆ ಅಪಾರ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರೊ.ಸಾಹೇಬ್ ಅಲಿ ನಿರಗುಡಿ ಹೇಳಿದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿಶೇಷ ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ಡಾ.ಬಿ.ಆರ್ ಅಂಬೇಡ್ಕರ್ 67ನೇ ‘ಮಹಾ ಪರಿನಿಬ್ಬಾಣ ದಿನ’ಕಾರ್ಯಕ್ರಮವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಕೆಲಸ ಮತ್ತು ಆದರ್ಶಗಳು ದೇಶದ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಭಾರತವು ರಾಜಕೀಯವಾಗಿ ಮಾತ್ರವಲ್ಲದೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪ್ರಜೆಗಳಿಗೆ ಸ್ವಾತಂತ್ರ್ಯ ಸಿಗಬೇಕೆಂದು ಡಾ.ಬಿ.ಆರ್. ಅಂಬೇಡ್ಕರ್ರವರು ಶ್ರಮಿಸಿದರು. ಇಂದಿನ ಭಾರತವನ್ನು ರೂಪಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮಾಜ ವಿಜ್ಞಾನ ನಿಕಾಯದ ಡೀನ್ ಡಾ.ಅನಂತ್ ಎಲ್ ಝಂಡೇಕರ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಶೋಷಿತರು ಮತ್ತು ವಂಚಿತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಕಠಿಣ ಮತ್ತು ಜಾತಿ ವ್ಯವಸ್ಥೆಯ ಸಂಕೋಲೆಯಿಂದ ಮುಕ್ತವಾದ ಸಮಾಜವನ್ನು ನಿರ್ಮಿಸಲು ಪ್ರಜಾಪ್ರಭುತ್ವದ ಅಡಿಪಾಯವಾದ ಸಂವಿಧಾನವನ್ನು ರಚಿಸಲು ಸತತವಾಗಿ 9 ತಿಂಗಳು ಶ್ರಮಿಸಿ 25 ಸಾವಿರ ಪುಟಗಳ ಸಂವಿಧಾನ ಬರೆದರು. ‘ಅಂಬೇಡ್ಕರ್’ಎಂಬುದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ ‘ಮಹಾನ್ ದೇವರು’ಎಂದರು.

ವಿಶ್ವವಿದ್ಯಾಲಯದ ಕುಲಸಚಿವ ರುದ್ರೇಶ್ ಎಸ್.ಎನ್ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ್ರವರು ಅಸ್ಪೃಶ್ಯತೆ ನಿವಾರಣೆ , ಭಾರತೀಯ ಸಂವಿಧಾನ ರಚನೆ ಮತ್ತು ಬೌದ್ಧ ಧರ್ಮದ ಪುನರುಜ್ಜೀವನಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಮಾಜ ಸುಧಾರಣೆಯ ವೈಚಾರಿಕತೆಗಳಿಂದ ಅವರು ವಿಶ್ವದ ಗಮನ ಸೆಳೆದರು ಎಂದರು.

ವಿತ್ತಾಧಿಕಾರಿ ಪ್ರೊ. ಸದ್ಯೋಜಾಥಪ್ಪ ಮಾತನಾಡಿ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತಗೊಳಿಸದೆ ಎಲ್ಲರೂ ಅವರ ಪ್ರಗತಿ ಕೇಂದ್ರಿತ ಚಿಂತನೆಗಳ ಅಡಿಪಾಯದಲ್ಲಿ ಮುನ್ನಡೆದರೆ ಉತ್ತಮ ಸಮಾಜ ನಿರ್ಮಿಸಬಹುದು ಎಂದರು.

ಈ ಸಂದರ್ಭದಲ್ಲಿ ಎಸ್ಸಿ-ಎಸ್ಟಿ ಘಟಕದ ನಿರ್ದೇಶಕರಾದ ಪ್ರೊ.ಗೌರಿ ಮಾಣಿಕ ಮಾನಸ್, ಅಣ್ಣೋಜಿ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.

Leave a Reply