ಬೆಂಗಳೂರು: ರಾಜಧಾನಿ ಬೆಂಗಳೂರು ನಗರದ ಸುಮಾರು 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆಯ ಇಮೇಲ್ ಪ್ರಕರಣದ ಬೆನ್ನು ಹತ್ತಿರುವ ಬೆಂಗಳೂರು ಪೊಲೀಸರು ತನಿಖೆಗೆ ನೆರವು ನೀಡುವಂತೆ ಸಿಬಿಐ, ಇಂಟರ್ ಪೋಲ್ ಹಾಗೂ ಎನ್.ಐ.ಎ. ನೆರವು ಕೇಳಿದ್ದಾರೆ.
ಬೆದರಿಕೆ ಇಮೇಲ್ ಗೆ ಸಂಬಂಧಿಸಿದಂತೆ ಒಟ್ಟು 27 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಕಳೆದ ವರ್ಷ ಏಪ್ರಿಲ್ನಲ್ಲಿ ಇದೇ ರೀತಿ 6 ಪ್ರಕರಣಗಳು ದಾಖಲಾಗಿದ್ದವು. ಈ ಬಗ್ಗೆ ತನಿಖಾಧಿಕಾರಿಗಳ ಸಭೆ ನಡೆಸಿ ಪ್ರಕರಣಗಳ ನಡುವಿನ ಸಾಮ್ಯತೆ, ತನಿಖೆ ಪ್ರಗತಿ ಕುರಿತು ಚರ್ಚಿಸಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಮಾಹಿತಿ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಮೇಲ್ ರವಾನೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಆಯಾ ಸರ್ವಿಸ್ ಪ್ರೊವೈಡರ್ ಕಂಪನಿಗಳಿಂದ ಮಾಹಿತಿ ಕೇಳಲಿದ್ದೇವೆ ಎಂದರು.
ಬಾಂಬ್ ಬೆದರಿಕೆಯ ಇಮೇಲ್ ಸಂಬಂಧ ಸಿಬಿಐ, ಇಂಟರ್ಪೋಲ್ ಗೂ ಮಾಹಿತಿ ನೀಡಲಾಗುವುದು. ಬೆದರಿಕೆ ಸಂದೇಶ ಭಾರತದ ಒಳಗೆ ಅಥವಾ ಬಾಹ್ಯವಾಗಿ ರವಾನೆಯಾಗಿರುವುದರ ಕುರಿತು ಈಗಲೇ ಖಚಿತಪಡಿಸಲು ಕಷ್ಟ. ಆದ್ದರಿಂದ ಇಮೇಲ್ ಸಾರಾಂಶವನ್ನು ತಜ್ಞರ ಮೂಲಕ ವಿಶ್ಲೇಷಣೆ ಮಾಡಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ ಇಂಥ ಬೆದರಿಕೆ ಪ್ರಕರಣಗಳು ಯುನೈಟೆಡ್ ಸ್ಟೇಟ್ಸ್, ಜರ್ಮನಿ, ಜಮೈಕಾ, ಮಲೇಷ್ಯಾ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ವರದಿಯಾಗಿವೆ. ಈ ರೀತಿಯ ಬೆದರಿಕೆ ಇಮೇಲ್ ರವಾನಿಸಲು ಕಾರಣಗಳ ಕುರಿತು ತಿಳಿದುಕೊಳ್ಳುವ ಕೆಲಸ ಮಾಡುತ್ತಿದ್ದೇವೆ ಎಂದರು.



