ಬೆಳಗಾವಿ: ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ವಿರುದ್ಧ ಬೆಳಗಾವಿ ನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಘಟನೆಯನ್ನು ಆರಂಭದಲ್ಲಿ ತಳ್ಳಿಹಾಕಲಾಗಿತ್ತು. ಬೆಳಗಾವಿ ನಗರದ ಹೊರವಲಯದ ಹಿಂಡಲಗಾ ನಿವಾಸದ ಬಳಿ ಬಿಜೆಪಿ ಮುಖಂಡನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಮಧ್ಯಪ್ರವೇಶಿಸಿದ ನಂತರ ಎಫ್.ಐ.ಆರ್ ದಾಖಲಾದಂತಾಗಿದೆ.
ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಮೇಲಿನ ಹಲ್ಲೆ ನಡೆದ ನಂತರ ಬೆಳಗಾವಿ ನಗರ ಪೊಲೀಸರ ನಡೆ ಅನುಮಾನಕ್ಕೆ ಕಾರಣವಾಗಿತ್ತು. ಹಟ್ಟಿಹೊಳಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಎಂಬ ಕಾರಣದಿಂದ ಈ ಘಟನೆ ಗಮನಾರ್ಹ ಗಮನಸೆಳೆದಿತ್ತು.
ಅಲ್ಲದೆ, ಇದು ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಮೊದಲ ದಿನವೇ ಈ ಘಟನೆ ನಡೆದಿತ್ತು. ಕಡೆಗೂ ಪೊಲೀಸರು ಹಟ್ಟಿಹೊಳಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಪೃಥ್ವಿ ಸಿಂಗ್ ಅವರು ಇತರ ನಾಲ್ವರೊಂದಿಗೆ ಸೇರಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಇದೀಗ ಬಲ ಸಿಕ್ಕಂತಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳು ಹಟ್ಟಿಹೊಳಿ ಅವರ ಇಬ್ಬರು ಗನ್ ಮ್ಯಾನ್ ಗಳು ಮತ್ತು ಅವರ ಸಹಾಯಕರಾದ ಸದಾಮ್ ಮತ್ತು ಸುಜಿತ್ ಜಾಧವ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೃಥ್ವಿ ಸಿಂಗ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರ ಆಪ್ತ. ಬಿಜೆಪಿ ಮುಖಂಡನ ಮೇಲೆ ಹಲ್ಲೆ ನಡೆದ ಬೆನ್ನಲ್ಲೇ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, ರಮೇಶ್ ಜಾರಕಿಹೊಳಿ, ಆರ್.ಅಶೋಕ್ ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬುವ ಕೆಲಸ ಮಾಡಿದ್ದರು.
ವಿಜಯೇಂದ್ರ ಯಡಿಯೂರಪ್ಪ ಅವರು ಪೃಥ್ವಿ ಸಿಂಗ್ ಮೇಲೆ ಹಟ್ಟಿಹೊಳಿ ಮತ್ತು ಅವರ ಸಹಚರರು ಈ ಹೇಯ ದಾಳಿ ನಡೆಸಿದ್ದಾರೆ ಎಂದು ಕಿಡಿಕಾರಿದ್ದರು. ಜೊತೆಗೆ ಆರ್.ಅಶೋಕ್ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತದೆ ಎಂದು ಆರೋಪಿಸಿದ್ದರು. ಜೊತೆಗೆ ಸದನದ ಹೊರಗೆ ಮತ್ತು ಒಳಗೆ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಎಚ್ಚರಿಕೆ ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಇದೀಗ ಎಫ್.ಐ.ಆರ್. ದಾಖಲಾಗಿದೆ.




