ಗ್ರಾಮ ಪಂಚಾಯತ್ ಮುಖ್ಯ ಪುಸ್ತಕ ಬರಹಗಾರರಿಂದ ಪ್ರತಿಭಟನೆ

2 years ago

#Protest #grampanchayat #chief #bookwriter #Mangalore

ಮಂಗಳೂರು: ಗ್ರಾಮ ಪಂಚಾಯತ್ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಬ್ರಹತ್ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.

ದ.ಕ. ಜಿಲ್ಲಾ ಗ್ರಾಮ ಪಂಚಾಯತ್ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಮಹಾ ಒಕ್ಕೂಟದ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಹೋರಾಟದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಸುಮಾರು 500ಕ್ಕೂ ಮಿಕ್ಕಿದ ಪ್ರತಿಭಟನಾಕಾರರು ಸೇರಿದ್ದರು.

ಪ್ರತಿಭಟನೆಯಲ್ಲಿ ಜಿಲ್ಲೆಯ ಕಾರ್ಮಿಕ ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಸರಕಾರದ ಎಲ್ಲಾ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಹಾಗೂ ಸರಕಾರದ ಪರವಾಗಿ ಬಹಳ ನಿಷ್ಠೆಯಿಂದ ದುಡಿಯುವ ಗ್ರಾಮ ಪಂಚಾಯತ್ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಕಳೆದ 5 ವರ್ಷಗಳಿಂದ ಪ್ರಾಮಾಣಿಕವಾಗಿ ದುಡಿಯುತ್ತಿದ್ದರೂ, ಸರಕಾರ ಮಾತ್ರ ಅವರ ಬಗ್ಗೆ ಎಳ್ಳಷ್ಟೂ ಕಾಳಜಿಯನ್ನು ವಹಿಸುತ್ತಿಲ್ಲ ಎಂದರು.

ಗೌರವಧನದ ಹೆಸರಿನಲ್ಲಿ 5000, 2500 ರೂ. ನೀಡಿ ದುಡಿಯುವ ಜನತೆಗೆ ಅಗೌರವ ತೋರಿಸುತ್ತಿದೆ. ವಿವಿಧ ರೀತಿಯ ಗ್ಯಾರಂಟಿಗಳನ್ನು ನೀಡುವ ರಾಜ್ಯ ಸರಕಾರ ದುಡಿಯುವ ಜನತೆಗೆ ಬದುಕುವ ಗ್ಯಾರಂಟಿಯನ್ನು ನೀಡದಿರುವುದು ವಿಪರ್ಯಾಸವಾಗಿದೆ. ಎಲ್ಲಾ ನಮೂನೆಯ ಕೆಲಸಗಳನ್ನು ಮಾಡಿಸುವ ಈ ಸರಕಾರಗಳು ಯಾಕೆ ಇಂತಹ ನೌಕರರನ್ನು ಖಾಯಂಗೊಳಿಸುತ್ತಿಲ್ಲ, ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇವರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆ,ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್, ಮುತ್ತಿಗೆ ಚಳವಳಿಯಂತಹ ತೀವ್ರ ಹೋರಾಟಗಳನ್ನು ನಡೆಸಬೇಕಾದಿತು ಎಂದು ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯತ್ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಸೌಮ್ಯ ಯಶವಂತ ಮಾತನಾಡಿ, ಸರಕಾರದ ಎಲ್ಲಾ ಕೆಲಸಗಳನ್ನು ಮಾಡಿಸುವ ಸರಕಾರ ನಮ್ಮ ಹುದ್ದೆಗಳನ್ನು ಖಾಯಂಗೊಳಿಸಿ ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಮುಖ್ಯ ಪುಸ್ತಕ ಬರಹಗಾರರಿಗೆ ಮಾಸಿಕ ರೂ.20,000 ಹಾಗೂ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಮಾಸಿಕ ರೂ.15,000 ವೇತನ ನೀಡಬೇಕು. ಅದರ ಜೊತೆಗೆ ESI, PF, ಸಮವಸ್ತ್ರ, ಗುರುತುಚೀಟಿಗಳನ್ನು ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯಾದ್ಯಂತ ನಡೆಸುವ ಈ ಹೋರಾಟಕ್ಕೆ ರಾಜ್ಯ ಸರಕಾರದ ಕೂಡಲೇ ಸ್ಪಂದಿಸುವಂತಾಗಬೇಕು ಎಂದು ಒತ್ತಾಯಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕೂಟದ ಜಿಲ್ಲಾ ನಾಯಕರಾದ ಸಂಧ್ಯಾ ಪುತ್ತೂರು, ಮುಖ್ಯ ಪುಸ್ತಕ ಬರಹಗಾರರ ಮತ್ತು ಸಂಪನ್ಮೂಲ ವ್ಯಕ್ತಿಗಳ ದಿನನಿತ್ಯದ ನೋವಿನ ಘಟನೆಗಳನ್ನು ಮೆಲುಕು ಹಾಕುತ್ತಾ, ಬೇಡಿಕೆಗಳ ಈಡೇರಿಕೆಗೆ ಸರಕಾರ ಕೂಡಲೇ ಸ್ಪಂದಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಒಕ್ಕೂಟದ ಮುಖಂಡರಾದ ಗೀತಾ ಸುಳ್ಯ, ಶೋಭಾ, ಇಂದಿರಾ, ಜಯಂತಿ, ಗೀತಾಂಜಲಿ ಮೂಡಬಿದ್ರೆ, ನಳಿನಾಕ್ಷಿ ಮುನ್ನೂರು ಮುಂತಾದವರು ವಹಿಸಿದ್ದರು. ಪ್ರತಿಭಟನೆಯ ಕೊನೆಯಲ್ಲಿ ಜಿಲ್ಲಾ ಮಟ್ಟದ ನಿಯೋಗವೊಂದು ದ.ಕ.ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಿತು.

Leave a Reply