ಬೆಂಗಳೂರು: ಪ್ರಾಣ ಉಳಿಸಿಕೊಳ್ಳುವ ಆಸೆಯೊಂದಿಗೆ ಜೀರೋ ಟ್ರಾಫಿಕ್ ನಲ್ಲಿ ಹಾಸನದಿಂದ ಬೆಂಗಳೂರಿಗೆ ಕರೆತಂದರೂ, ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ ಎಂದು ನಿರ್ಲಕ್ಷಿಸಿದ ನಿಮ್ಹಾನ್ಸ್ ಸಿಬ್ಬಂದಿ ಧೋರಣೆಯಿಂದ ಮಗು ಬಲಿಯಾಗಿದೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿಯಾಗಿದೆ ಎಂದು ಆಕ್ರೋಶಗೊಂಡ ಮಗುವಿನ ಕುಟುಂಬ ಸದಸ್ಯರು ನಿಮ್ಹಾನ್ಸ್ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಟವಾಡುತ್ತಿದ್ದ ಒಂದು ವರ್ಷದ ಮಗು ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ತಲೆಗೆ ತೀವ್ರವಾಗಿ ಗಾಯಗೊಂಡು, ಅಸ್ವಸ್ಥಗೊಂಡಿತ್ತು. ತಕ್ಷಣ ಪೋಷಕರು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿನ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್ ಗೆ ಹೋಗುವಂತೆ ಸೂಚನೆ ನೀಡಿದ್ದರು.
ಮಗುವಿನ ಪರಿಸ್ಥಿತಿ ಅವಲೋಕಿಸಿದ ಹಾಸನ ಆಸ್ಪತ್ರೆ ವೈದ್ಯರು ಪೊಲೀಸರೊಂದಿಗೆ ಮಾತನಾಡಿ ಮಗು ಇದ್ದ ಆಂಬುಲೆನ್ಸ್ ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಜೊತೆಗೆ, ಝೀರೋ ಟ್ರಾಫಿಕ್ ನಲ್ಲಿ ರೋಗಿ ಬರುತ್ತಿದ್ದ ಹಿನ್ನೆಲೆಯಲ್ಲಿ ಬೆಡ್ ಕಾಯ್ದಿರಿಸುವಿಕೆಗಾಗಿ ನಿಮಾನ್ಸ್ ಆಡಳಿತ ಮಂಡಳಿಗೆ ತಿಳಿಸಿದ್ದರು. ಅದರಂತೆ ಹಾಸನದಿಂದ ನಿಮಾನ್ಸ್ ಗೆ ಕೇವಲ 1.40 ಗಂಟೆಯಲ್ಲಿ ಆಂಬ್ಯುಲೆನ್ಸ್ ಶರವೇಗದಲ್ಲಿ ತಲುಪಿತ್ತು.
ಆದರೆ ನಿಮ್ಹಾನ್ಸ್ ಸಿಬ್ಬಂದಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಮಗುವಿಗೆ ಬೆಡ್ ಖಾಲಿಯಿಲ್ಲ ಎಂದು ಆಸ್ಪತ್ರೆಯ ಆವರಣದಲ್ಲಿಯೇ ಸುಮಾರು 90 ನಿಮಿಷ ನಿಲ್ಲಿಸಿದ್ದಾರೆ. ಗಾಯಗೊಂಡ ಬಾಲಕನನ್ನು ಬೆಂಗಳೂರಿಗೆ ಸ್ಥಳಾಂತರಿಸಲು ತ್ವರಿತ ಪೊಲೀಸ್ ನೆರವಿನ ಹೊರತಾಗಿಯೂ, ನಿಮ್ಹಾನ್ಸ್ ಸಿಬ್ಬಂದಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಹಾಸಿಗೆಗಳು ಲಭ್ಯವಿಲ್ಲ ಎಂದು ಹೇಳಿದರು.
ಬಾಲಕನಿಗೆ ಹಾಸಿಗೆಯನ್ನು ಮೀಸಲಿಡುವಂತೆ ಹಾಸನ ಆಸ್ಪತ್ರೆ ವೈದ್ಯರು ನಿಮ್ಹಾನ್ಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಎನ್ನಲಾಗಿದೆ. ಆದಾಗ್ಯೂ, ಬಾಲಕನನ್ನು ದಾಖಲಿಸಿಕೊಳ್ಳಲು ನಿಮ್ಹಾನ್ಸ್ನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಕಾಯುವಂತೆ ಮಾಡಲಾಗಿತ್ತು. ಬಾಲಕನನ್ನು ತುರ್ತು ಚಿಕಿತ್ಸಾ ವಿಭಾಗದೊಳಗೆ ಕರೆದೊಯ್ದರೂ ವೈದ್ಯರು ತಕ್ಷಣ ಚಿಕಿತ್ಸೆ ಆರಂಭಿಸಿಲ್ಲ ಎಂದು ಆಂಬ್ಯುಲೆನ್ಸ್ ಚಾಲಕರು ಆರೋಪಿಸಿದ್ದಾರೆ. ಇದು ಬಾಲಕನ ಸಾವಿಗೆ ಕಾರಣವಾಯಿತು ಎಂಬುದು ಅವರ ಅಭಿಪ್ರಾಯವಾಗಿದೆ.
ಸುದ್ದಿ ತಿಳಿದ ಮಗುವಿನ ಪೋಷಕರು ಮತ್ತು ಕುಟುಂಬ ಸದಸ್ಯರು ಆಸ್ಪತ್ರೆ ಮುಂದೆ ಗೋಳಾಡುತ್ತಲೇ ಪ್ರತಿಭಟಿಸಿದರು. ಸುದ್ದಿ ತಿಳಿದ ಸಿದ್ದಾಪುರ ಪೊಲೀಸರು ಆಸ್ಪತ್ರೆಗೆ ಧಾವಿಸಿ ನಿಮ್ಹಾನ್ಸ್ ಅಧಿಕಾರಿಗಳು ಮತ್ತು ವೈದ್ಯರ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಬಾಲಕನ ಪೋಷಕರನ್ನು ಸಮಾಧಾನಪಡಿಸಿದರು.
ಈ ನಡುವೆ ಬಾಲಕನನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿತ್ತು. ತಲೆಬುರುಡೆ ಹಲವು ಕಡೆ ಮುರಿದಿತ್ತು. ಹೀಗಾಗಿ ಆತನ ಸ್ಥಿತಿ ಗಂಭೀರವಾಗಿತ್ತು. ಸಿಟಿ ಸ್ಕ್ಯಾನ್ ಮಾಡಿ ಬಾಲಕನನ್ನು ಉಳಿಸಲು ಪ್ರಯತ್ನಿಸಿದರೂ, ಗಾಯಗೊಂಡ 2 ಗಂಟೆಗಳ ನಂತರ ಸಾವನ್ನಪ್ಪಿದ್ದಾನೆ ಎಂದು ನಿಮ್ಹಾನ್ಸ್ ವೈದ್ಯಾಧಿಕಾರಿ ಡಾ.ಎಚ್.ಎಸ್.ಶಶಿಧರ್ ಹೇಳಿದ್ದಾರೆ.
ನಿಮ್ಹಾನ್ಸ್ ಪ್ರಮುಖ ಆರೋಗ್ಯ ಸಂಸ್ಥೆಗಳಲ್ಲಿ ಒಂದಾಗಿದೆ. ಹಾಸಿಗೆಗಳು ಯಾವಾಗಲೂ ತುಂಬಿರುತ್ತವೆ. ಮಗು ಸಾವನ್ನಪ್ಪಿರುವುದು ದುರದೃಷ್ಟಕರ. ಮಗುವಿನ ದಾಖಲಾತಿಯಲ್ಲಿ ಏನಾದರೂ ವಿಳಂಬವಾಗಿದ್ದರೆ ನಾನು ನಿಮ್ಹಾನ್ಸ್ ಅಧಿಕಾರಿಗಳೊಂದಿಗೆ ಪರಿಶೀಲಿಸುತ್ತೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.




