ಬೆಂಗಳೂರು: ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾದರ್ಶನ ನಡೆಸುವ ಮೂಲಕ ಸಾವಿರಾರು ಜನರ ದೂರುಗಳಿಗೆ ಸ್ಪಂದಿಸಿದರು. ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನಡೆಸುತ್ತಿದ್ದ ಜನತಾ ದರ್ಶನದಷ್ಟೇ ವಿಶ್ವಾಸರ್ಹತೆಯನ್ನು 2ನೇ ಅಧಿಕಾರಾವಧಿಯ ಜನತಾ ದರ್ಶನವೂ ಉಳಿಸಿಕೊಂಡಿದ್ದು, ಸಮಸ್ಯೆಗೆ ಸ್ಪಂದಿಸಲು ಈ ಮೊದಲಿಗಿಂತ ಕ್ರಮಬದ್ಧ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿತ್ತು.
ಜನತಾದರ್ಶನಕ್ಕೆ ರಾಜ್ಯದ ನಾನಾ ದಿಕ್ಕುಗಳಿಂದಲ ಜನಸಾಮಾನ್ಯರು ಆಗಮಿಸಿದ್ದು, ಎಲ್ಲರ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸಿ ಜನಸಂಪರ್ಕ ಇಲಾಖೆಯ ತಂತ್ರಾಂಶದಲ್ಲಿ ದಾಖಲಿಸಿ ಕ್ರಮ ಸಂಖ್ಯೆ ನೀಡಿದರು. ಬಳಿಕ ಸಿದ್ದರಾಮಯ್ಯ ಪ್ರತಿಯೊಬ್ಬರ ಅರ್ಜಿಗಳನ್ನು ಪಡೆದು ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಮೂಲಕ ಪರಿಹಾರ ದೊರಕಿಸುವ ಯತ್ನ ನಡೆಸಿದರು.
ಜನತಾ ದರ್ಶನಕ್ಕಾಗಿ ಸಾವಿರಾರು ಜನ ಸಾಲುಗಟ್ಟಿ ಬಂದಿದ್ದರು. ದೂರದ ಊರುಗಳಿಂದ ಬಂದವರಿಗೆ ಸ್ಥಳದಲ್ಲಿ ಕುಡಿಯುವ ನೀರು ಸೇರಿದಂತೆ ಹಲವು ರೀತಿಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಪಾರ್ಕಿಂಗ್ ಸೇರಿದಂತೆ ನಾನಾ ರೀತಿಯ ವ್ಯವಸ್ಥೆಗಳಿಗೆ ಕುಮಾರಕೃಪ ಹಾಗೂ ಇತರ ಸ್ಥಳಗಳನ್ನು ಬಳಸಿಕೊಳ್ಳಲಾಗಿತ್ತು. ಸಾವಿರಾರು ಜನ ಆಗಮಿಸಿದ್ದರಿಂದ ಜನದಟ್ಟಣೆ ಹೆಚ್ಚಾಗಿತ್ತು. ಅರ್ಜಿದಾರರ ಸಾಲು ಕುಮಾರಕೃಪ ಅತಿಥಿಗೃಹದವರೆಗೂ ಮುಂದುವರೆದಿತ್ತು.
ಸಿದ್ದರಾಮಯ್ಯನವರು ತಾಳ್ಮೆಯಿಂದ ಪ್ರತಿಯೊಬ್ಬರ ಅಹವಾಲನ್ನು ಸ್ವೀಕರಿಸಿ ಪರಿಹಾರ ದೊರಕಿಸುವ ಪ್ರಯತ್ನ ಮಾಡಿದರು.




