ದೆಹಲಿ: ದೇಶದ ಅತ್ಯಂತ ಹಿರಿಯ ಪಕ್ಷ ಕಾಂಗ್ರೆಸ್ ನ ಅಧಿಕೃತ ಟ್ವಿಟ್ಟರ್ ಖಾತೆ ಮತ್ತು ಪಕ್ಷದ ಬಹುತೇಕ ನಾಯಕರು ಮತ್ತು ಕಾರ್ಯಕರ್ತರ ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಅತ್ಯಾಚಾರಕ್ಕೆ ಈಡಾದ 9 ವರ್ಷದ ಬಾಲಕಿಯನ್ನು ಕೊಲೆಗೈಯಲಾಗಿತ್ತು. ಈ ಘಟನೆಯನ್ನು ಖಂಡಿಸಿದ್ದ ರಾಹುಲ್ ಗಾಂಧಿ ಬಾಲಕಿಯ ಕುಟುಂಬದವರ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಈ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ ಎಂಬ ಕಾರಣ ನೀಡಿ ರಾಹುಲ್ ಟ್ವಿಟರ್ ಖಾತೆಯನ್ನು ಒಂದು ವಾರದವರೆಗೆ ಬ್ಲಾಕ್ ಮಾಡಲಾಗಿತ್ತು. ಇದೀಗ ಪಕ್ಷದ ಹಲವು ನಾಯಕರ ಮತ್ತು ಪಕ್ಷದ ಅಧಿಕೃತ ಟ್ವಿಟರ್ ಖಾತೆಯನ್ನು ಕೂಡ ಟ್ವಿಟರ್ ಬ್ಲಾಕ್ ಮಾಡಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥ ರೋಹನ್ ಗುಪ್ತ, ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆ ಮತ್ತು ಸುಮಾರು 50 ಸಾವಿರ ಮೇಲ್ಮಟ್ಟದ ನಾಯಕರು ಮತ್ತು ಕಾರ್ಯಕರ್ತರ ಟ್ವಿಟರ್ ಖಾತೆಗಳನ್ನು ತಡೆಹಿಡಿಯಲಾಗಿದೆ. ಸರ್ಕಾರದ ಒತ್ತಡದಿಂದ ಕಾಂಗ್ರೆಸ್ ನಾಯಕರ ವಿರುದ್ಧ ಟ್ವಿಟರ್ ಈ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದ್ದಾರೆ.
ಟ್ವಿಟ್ಟರ್ ಸರ್ಕಾರದ ಒತ್ತಡದಲ್ಲಿ ಕೆಲಸ ಮಾಡುತ್ತಿರುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಕೆಲ ದಿನಗಳ ಹಿಂದೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಇದೇ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿತ್ತು. ಆದರೆ ಆಯೋಗ ಆ ಫೋಟೋ ತೆಗೆದಿರಲಿಲ್ಲ ಎಂದಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ಕೆ.ಸಿ.ವೇಣುಗೋಪಾಲ್, ಅಜಯ್ ಮಾಕೇನ್, ಮಣಿಕ್ಕಮ್ ಠಾಕೋರ್, ಅಸ್ಸಾಂ ಕಾಂಗ್ರೆಸ್ ಉಸ್ತುವಾರಿ ಜಿತೇಂದ್ರ ಸಿಂಗ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಅವರ ಟ್ವಿಟರ್ ಖಾತೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.
ಈ ಕುರಿತು ಪಕ್ಷದ ಸಂವಹನ ವಿಭಾಗದ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಪ್ರಣವ್ ಜಾ ಟ್ವೀಟ್ ಮಾಡಿದ್ದರು. ಇದೀಗ ಅವರ ಖಾತೆಯನ್ನೂ ಸ್ಥಗಿತಗೊಳಿಸಲಾಗಿದೆ.




