ಬರ ಪರಿಹಾರಕ್ಕಾಗಿ ಹಣಕಾಸು ಸಚಿವರೊಂದಿಗೆ ಚರ್ಚೆ: ಚಲುವರಾಯಸ್ವಾಮಿ

2 years ago

#Discussion #FinanceMinister #drought #relief #Chaluvarayaswamy

ರಾಜ್ಯದ 223 ತಾಲ್ಲೂಕುಗಳಲ್ಲಿ ಬರ ಘೋಷಣೆ

18,000 ಕೋಟಿಗೂ ಅಧಿಕ ಪರಿಹಾರ ಕೋರಲಾಗಿದೆ

ಶೇ 100 ಆರ್ಥಿಕ, ಭೌತಿಕ ಗುರಿ ಸಾಧನೆ ಮಾಡಬೇಕು

30000 ಕ್ಕೂ ಅಧಿಕ ಕೃಷಿ ಹೊಂಡ ನಿರ್ಮಾಣ ಮಾಡಲಾಗುವುದು

ದಾವಣಗೆರೆ: ರಾಜ್ಯದ ಬರ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿಗಳಿಗೆ ನೆರವು ಕುರಿತು ನೀಡುವ ಕೇಂದ್ರ ಹಣಕಾಸು ಸಚಿವರೊಂದಿಗೆ ಚರ್ಚಿಸಲು ನಾಳೆ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ದೆಹಲಿಗೆ ತೆರಳುತ್ತಿರುವುದಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ದಾವಣಗೆರೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚಿತ್ರದುರ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಕೃಷಿ ಮತ್ತು ಜಲಾನಯನ ಇಲಾಖೆ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತಾಡಿದ ಅವರು, ರಾಜ್ಯದ 223 ತಾಲ್ಲೂಕುಗಳಲ್ಲಿ ಬರ ಘೋಷಣೆಯಾಗಿದೆ 18000 ಕೋಟಿಗೂ ಅಧಿಕ ಪರಿಹಾರ ಕೋರಲಾಗಿದೆ. ರಾಜ್ಯದ ನಿರಂತರ ಮನವಿಗಳ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವರು ಭೇಟಿಗೆ ಸಮಯ ನಿಗದಿಪಡಿಸಿದ್ದು ತಾವು ಸಚಿವರಾದ ಕೃಷ್ಣ ಬೈರೇಗೌಡ ಮತ್ತು ಪ್ರಿಯಾಂಕ್ ಖರ್ಗೆ ದೆಹಲಿಗೆ ತೆರಳುತ್ತಿರುವುದಾಗಿ ಮಾಹಿತಿ ನೀಡಿದರು.

ರೈತರ ಹಿತ ಸಂರಕ್ಷಣೆ ರಾಜ್ಯ ಸರ್ಕಾರದ ಆದ್ಯತೆ ಅದಕ್ಕೆ ನಾವು ಸದಾ ಬದ್ದರಿದ್ದೇವೆ. ಈ ವರ್ಷ ಕೃಷಿ ಭಾಗ್ಯ ಮರು ಜಾರಿಗೊಳಿಸಿದ್ದು 200 ಕೋಟಿ ರೂಪಾಯಿ ವೆಚ್ಚದಲ್ಲಿ 30000 ಕ್ಕೂ ಅಧಿಕ ಕೃಷಿ ಹೊಂಡ ನಿರ್ಮಾಣ ಮಾಡಲಾಗುವುದು. ಇದಕ್ಕೆ ಕ್ಯಾಬಿನೆಟ್ ಅನುಮೋದನೆ ಪಡೆಯಲಾಗಿದೆ ಎಂದರು.

ಬರಗಾಲ ಪೀಡಿತ ಪ್ರದೇಶದಲ್ಲಿ ಬೆಳೆಹಾನಿ ಕುರಿತು ನಡೆಯುತ್ತಿರುವ ಸಮೀಕ್ಷೆಯಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸುವುದಿಲ್ಲ. ಲೋಪ ಎಸಗಿದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದರು.

ಬೆಳೆ ಸಮೀಕ್ಷೆ ವೇಳೆ ಅಧಿಕಾರಿಗಳ ನಿರ್ಲಕ್ಷ್ಯ, ಲೋಪಗಳ ಬಗ್ಗೆ ಜನಪ್ರತಿಧಿಗಳು ,
ರೈತರು ದೂರು ಸಲ್ಲಿಸಿದ್ದಾರೆ. ರೈತರ ಹಿತ ಇಲಾಖೆ ಹಾಗೂ ಅಧಿಕಾರಿಗಳ ಮೊದಲ ಆದ್ಯತೆ.
ನಿರ್ಲಕ್ಷ್ಯ ಧೋರಣೆ ಮುಂದುವರೆಸಿದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದರು.

ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಅಧಿಕಾರಿಗಳ ಜವಾಬ್ದಾರಿ. ಈಗಾಗಲೇ ಕೃಷಿಕರು ನೊಂದಿದ್ದಾರೆ. ಅವರಿಗೆ ಬೆಂಬಲವಾಗಿ ನಿಲ್ಲಬೇಕು. ಬೆಳೆ ಸಮೀಕ್ಷೆ, ವಿಮೆ ಪಾವತಿ ವೇಳೆ ನಷ್ಟವಾಗದಂತೆ ಕಾಳಜಿ ವಹಿಸಬೇಕು ಎಂದು ಸೂಚನೆ ನೀಡಿದರು.

ಕೇಂದ್ರ ಸರ್ಕಾರದ ಎನ್ .ಡಿ.ಆರ್ ಎಫ್ ಮಾನದಂಡಗಳ ಅನ್ವಯ ಬರ ಘೋಷಣೆ ಮಾಡಲಾಗಿದೆ. ಬೆಳೆ ಹಾನಿ ಪರಿಹಾರ ವಿತರಿಸುವಾಗ ರೈತರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು. ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ತಲುಪಿಸಬೇಕು. ಕೃಷಿಕರಿಗೆ ತಾಂತ್ರಿಕ ನೆರವು ಮಾರ್ಗದರ್ಶನ ನೀಡಬೇಕು. ಜಲ ಸಂರಕ್ಷಣೆಗೆ ಗಮನ ಹರಿಸಬೇಕು ಎಂದರು.

ಎಲ್ಲಾ ಜಿಲ್ಲೆಗಳಲ್ಲಿ ಕೆವೈಸಿ, ಫ್ರೂಟ್ ಐಡಿ ನೋದಣಿ ಶೇ 100 ರಷ್ಟು ಪೂರ್ಣ ಆಗಬೇಕು. ಎಲ್ಲಾ ಆರ್.ಟಿ.ಸಿ ಗಳ ದಾಖಲೆಯಾಗಬೇಕು. ಇದನ್ನು ಆಂದೋಲನದ ಸ್ವರೂಪದಲ್ಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆರ್ಥಿಕ ವರ್ಷ ಮುಗಿಯುತ್ತಾ ಬಂದಿದ್ದು ಎಲ್ಲಾ ಜಿಲ್ಲೆಗಳಲ್ಲಿ ಶೇ 100 ಆರ್ಥಿಕ, ಭೌತಿಕ ಗುರಿ ಸಾಧನೆ ಮಾಡಬೇಕು. ಅನುದಾನ ವ್ಯರ್ಥವಾಗಬಾರದು ಹಾಗೂ ಗುಣಮಟ್ಟದೊಂದಿಗೆ ಯೋಜನೆಗಳ ಅನುಷ್ಠಾನವಾಬೇಕು ಎಂದು ಹೇಳಿದರು.

Leave a Reply