ಧಾರವಾಡ: ಧಾರವಾಡ ಜಿಲ್ಲೆಯ ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ಕೃಷಿ ಇಲಾಖೆ ಧಾರವಾಡ 2023-24 ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ನಿಗದಿಪಡಿಸಿದ ವಿವಿಧ ಬೆಳೆಗಳಲ್ಲಿ ಬೆಳೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಆಸಕ್ತಿಯುಳ್ಳ ರೈತರು ನಿಗದಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿಗಳೊಂದಿಗೆ ಸಂಬಂಧಿಸಿದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯಕ್ಕೆ ನವೆಂಬರ್ 30 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ನಮೂನೆ, ಪ್ರವೇಶ ಶುಲ್ಕ ಭರಣಾ ಮಾಡುವುದು. ಬೆಳೆ ಕಟಾವು ಮಾಡುವ ವಿಧಾನ, ಸ್ಪರ್ಧಾತ್ಮಕ ಇಳುವರಿಯ ಮಾಹಿತಿ ಇತ್ಯಾದಿಗಳ ಬಗ್ಗೆ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ, ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಮಾನ್ಯ ವರ್ಗದ ರೈತರಿಗೆ 100/- ರೂ.ಶುಲ್ಕ ಇದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟಪಂಗಡ ವರ್ಗದ ರೈತರಿಗೆ ರೂ.25/-ಶುಲ್ಕ ಇರುತ್ತದೆ. ರಾಜ್ಯ ಮಟ್ಟದ ಬೆಳೆ ಸ್ಪರ್ಧೆಗೆ ಹಿಂಗಾರು ಹಂಗಾಮಿಗೆ ಜೋಳ (ಮಳೆ ಆಶ್ರಿತ) ಮತ್ತು ಕಡಲೆ (ಮಳೆ ಆಶ್ರಿತ) ಬೆಳೆಗಳನ್ನು ಮತ್ತು ಜಿಲ್ಲಾಮಟ್ಟದ ಬೆಳೆ ಸ್ಪರ್ಧೆಗೆ ಹಿಂಗಾರು ಹಂಗಾಮಿಗೆ ಕಡಲೆ (ಮಳೆ ಆಶ್ರಿತ) ನಿಗದಿಪಡಿಸಲಾಗಿದೆ.
ತಾಲ್ಲೂಕು ಮಟ್ಟದ ಬೆಳೆ ಸ್ಪರ್ಧೆಗೆ ಸಂಬಂಧಿಸಿದಂತೆ ಧಾರವಾಡ, ಹುಬ್ಬಳ್ಳಿ, ಹುಬ್ಬಳ್ಳಿ ನಗರ, ನವಲಗುಂದ, ಅಣ್ಣಿಗೇರಿ ಹಾಗೂ ಕುಂದಗೋಳ ತಾಲ್ಲೂಕುಗಳಿಗೆ ಕಡಲೆ (ಮಳೆಆಶ್ರಿತ) ಬೆಳೆ ನಿಗದಿಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು.
2023-24 ನೇ ಸಾಲಿನಲ್ಲಿ ಕೃಷಿಯಲ್ಲಿ ರೈತ ಮಹಿಳೆಯರನ್ನು ಪ್ರೋತ್ಸಾಹಿಸುವ ಹಾಗೂ ಇತರೆ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಲು ಪ್ರತ್ಯೇಕವಾಗಿ ಮಹಿಳೆಯರಿಗೆ ಕೃಷಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು, ರೈತ ಮಹಿಳೆಯರು ನವೆಂಬರ್ 30 ರೊಳಗಾಗಿ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಿಗೆ ಅರ್ಜಿ ಸಲ್ಲಿಸಬಹುದು.




