ಒನಕೆ ಓಬವ್ವ ಹೈದರ್ ಸೈನಿಕನಿಗೆ ಬಲಿಯಾಗಿರುವುದು ತಪ್ಪು ಕಲ್ಪನೆ: ಡಾ.ನೆಲ್ಲಿಕಟ್ಟೆ ಸಿದ್ದೇಶ್

2 years ago

#misconception #Onake #Obavva #victim #Haider #Sainik #NellikatteSiddesh

ಶಿವಮೊಗ್ಗ: ಚಿತ್ರದುರ್ಗ ಕೋಟೆ ಮತ್ತು ಜನರನ್ನು ಬಹು ಅಪಾಯದಿಂದ ಕಾಪಾಡಿ, ಕರ್ತವ್ಯದ ಮೂಲಕವೇ ಜೀವ-ಜೀವನದ ಶಕ್ತಿಯನ್ನು ತಿಳಿಸಿರುವವಳು ವೀರವನಿತೆ ಓಬವ್ವ ಎಂದು ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಛಲವಾದಿ ಮಹಾಸಭಾ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಳ್ಳಾರಿ ಜಿಲ್ಲೆ, ಕೂಡ್ಲಿಗಿ ತಾಲ್ಲೂಕಿನ ಛಲವಾದಿ ಚಿನ್ನಪ್ಪನ ಮಗಳಾದ ಓಬವ್ವ, ಪ್ರಾಮಾಣಿಕತೆ, ಶಿಸ್ತು, ದಕ್ಷತೆ, ಪ್ರೀತಿ-ವಿಶ್ವಾಸಕ್ಕೆ ಹೆಸರುವಾಸಿಯಾಗಿದ್ದಳು. ಪತಿ ಭಕ್ತಿ ಮತ್ತು ದೇಶ ಭಕ್ತಿಯನ್ನು ಲೋಕಕ್ಕೆ ಪರಿಚಯಿಸಿದ ದಿಟ್ಟ ಮಹಿಳೆ. ಹೈದರಾಲಿಯು 1766ರಲ್ಲಿ ಚಿತ್ರದುರ್ಗದ ಕೋಟೆಯ ಮೇಲೆ ಅಕ್ರಮಣ ಮಾಡುತ್ತಿರುವುದನ್ನು ತಿಳಿದ ಓಬವ್ವ, ಒನಕೆಯನ್ನು ಅಸ್ತ್ರವಾಗಿಟ್ಟುಕೊಂಡು ರಣಚಂಡಿಯಂತೆ ಶತ್ರು ಸೈನಿಕರನ್ನು ಕೊಂದು ಹಾಕುತ್ತಾಳೆ ಎಂದರು.

ನಂತರ ಆತನ ಗಂಡ ಹೆಣದ ರಾಶಿಗಳನ್ನು ಮತ್ತು ಹರಿಯುತ್ತಿದ್ದ ರಕ್ತದ ಕಾಲುವೆಯನ್ನು ಕಂಡು ಆಶ್ಚರ್ಯಚಕಿತನಾಗಿ ರಣ ಕಹಳೆಯನ್ನು ಊದುತ್ತಾನೆ. ಎಚ್ಚರಿಕೆ ದನಿಯನ್ನು ಕೇಳಿದ ಮದಕರಿನಾಯಕನ ಸೈನಿಕರು ಶತ್ರು ಸೈನಿಕರೊಂದಿಗೆ ಯುದ್ಧಕ್ಕೆ ಸಿದ್ಧರಾಗುತ್ತಾರೆ. ಅಂದಿನಿಂದ ಓಬವ್ವಳಿಗೆ ವೀರವನಿತೆ ಒನಕೆ ಓಬವ್ವ ಎಂದು ಮತ್ತು ಆ ಕಳ್ಳಕಿಂಡಿಗೆ ಒನಕೆ ಓಬವ್ವನ ಕಿಂಡಿ ಎಂದು ಬಿರುದು ಬಂದಿತು ಎಂದರು.

ಕೊನೆಯದಾಗಿ ಕಳ್ಳಕಿಂಡಿಯಿಂದ ಬಂದ ಶತ್ರು ಸೈನಿಕನೊಬ್ಬ ಓಬವ್ವನ ಬೆನ್ನಿಗೆ ಚೂರಿ ಹಾಕುವುದರಿಂದ ಓಬವ್ವ ಅಲ್ಲಿ ಮರಣ ಹೊಂದುತ್ತಾಳೆ ಎಂಬುದು ಪುಟ್ಟಣ್ಣ ಕಣಗಾಲ್ ಇತಿಹಾಸಕ್ಕೆ ಮಾಡಿರುವ ಒಂದು ತಪ್ಪು ಕಲ್ಪನೆ. ಓಬವ್ವ ಯುದ್ಧ ನಡೆದ ಮೂರು ವರ್ಷಗಳ ನಂತರ ಅಂದರೆ 1769ರಲ್ಲಿ ಮರಣ ಹೊಂದುತ್ತಾಳೆ. ಸಮಯಪ್ರಜ್ಞೆಯಿಂದ ದುರ್ಗಕ್ಕೆ ಮತ್ತು ದುರ್ಗದ ಜನತೆಗೆ ಒದಗಿದ ಅಪಾಯವನ್ನು ನಿಸ್ವಾರ್ಥ ಸೇವೆಯಿಂದ ತಪ್ಪಿಸಿರುವ ಕಾರಣ ಒನಕೆ ಓಬವ್ವಳನ್ನು ಮನುಕುಲದ ಸಾಂಸ್ಕೃತಿಕ ಲೋಕದ ಧೃವತಾರೆ ಎಂದು ಹೇಳಿದರು.

ತಹಶೀಲ್ದಾರ್ ನಾಗರಾಜ್ ಮಾತನಾಡಿ, ಚರಿತೆಯ ಮಹಾಪುರುಷರನ್ನು ಮತ್ತು ವೀರವನಿತೆಯರನ್ನು ಕೇವಲ ವೇದಿಕೆಯಲ್ಲಿ ಹೇಳಿ ಮುಗಿಸುವಂತಾಗಬಾರದು ಎಂದು ಹೇಳಿ ಎಲ್ಲರಿಗೂ ವೀರವನಿತೆ ಒನಕೆ ಓಬವ್ವ ಜಯಂತಿಯ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಛಲವಾದಿ ಸಮುದಾಯದ ಮುಖಂಡರು, ಪದಾಧಿಕಾರಿಗಳು ಮತ್ತಿತ್ತರರು ಉಪಸ್ಥಿತರಿದ್ದರು.

Leave a Reply