ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ ನಿಭಾಯಿಸಲು ಮತ್ತು ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಹಣವಿಲ್ಲ. ನಮಗೆ ಯೋಗ್ಯತೆ ಇಲ್ಲ. ಪಾಪರ್ ಚೀಟಿ ತೆಗೆದುಕೊಂಡಿದ್ದೇವೆ ಎಂದು ಭಿಕ್ಷಾ ಪಾತ್ರೆ ಹಿಡಿದುಕೊಳ್ಳಿ. ಆಗ ಅಯ್ಯೊ ಪಾಪ ಎನ್ನುತ್ತಾರೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬರ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬರ ಪರಿಹಾರಕ್ಕೆ 17 ಸಾವಿರ ಕೋಟಿ ಕೊಡಿ ಎಂದು ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಕೋರಿದೆ. ಬಿಜೆಪಿಯವರು ಬರ ಅಧ್ಯಯನ ಪ್ರವಾಸಕ್ಕೆ ಹೊರಟ ನಂತರ ರಾಜ್ಯ ಸರ್ಕಾರ ಬರ ಪರಿಹಾರಕ್ಕೆ 324 ಕೋಟಿ ಬಿಡುಗಡೆ ಮಾಡಿದೆ. 324 ಕೋಟಿ ಅಂದರೆ ಒಂದು ತಾಲ್ಲೂಕಿಗೆ ಒಂದೂವರೆ ಕೋಟಿಯೂ ಬರುವುದಿಲ್ಲ. ಬರದ ಗಂಭೀರತೆಗೆ ಕನಿಷ್ಠ ನಾಲ್ಕೈದು ಸಾವಿರ ಕೋಟಿಯನ್ನಾದರೂ ಬಿಡುಗಡೆ ಮಾಡಬೇಕು ಅಲ್ಲವೇ. ನಿಮ್ಮ ಬೊಕ್ಕಸ ಖಾಲಿ ಆಗಿದೆ ಎಂದು ಒಪ್ಪಿಕೊಳ್ಳಿ ಎಂದರು.
ನಮ್ಮ ಖಜಾನೆ ಖಾಲಿ ಆಗಿದೆ ಎಂದು ಘೋಷಿಸಿ. ಖಜಾನೆ ಖಾಲಿಯಾದ ಕಾರಣ ಅನಿವಾರ್ಯವಾಗಿ ನೆರವು ಕೊಡಿ ಎಂದು ಕೇಂದ್ರವನ್ನು ಕೇಳೋಣ. ನಿಮ್ಮ ತಪ್ಪು ಮುಚ್ಚಿ ಹಾಕಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದೀರಿ ಎಂದು ಕಿಡಿ ಕಾರಿದರು.
2004 ರಿಂದ 2013ರವರೆಗೆ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ರಾಜ್ಯಕ್ಕೆ 2,976.27 ಕೋಟಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್ಡಿಆರ್ಎಫ್) ನೀಡಿದ್ದಾರೆ. 2014ರಿಂದ 2023ರವರೆಗೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ರಾಜ್ಯಕ್ಕೆ 12,788.7 ಕೋಟಿ ಎನ್ಡಿಆರ್ಎಫ್ ನಿಧಿ ನೀಡಿದೆ. ಹೀಗಿದ್ದ ಮೇಲೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆಯಾ? ಎಂದು ಪ್ರಶ್ನಿಸಿದರು.




