ಎಲ್ಲಾ ಜಿಲ್ಲೆಗಳಲ್ಲಿ ರೈತ ಸಾಂತ್ವನ ಯಾತ್ರೆ: ಎಚ್.ಡಿ.ಕುಮಾರಸ್ವಾಮಿ

2 years ago

#Farmer #Consolation #Yatra #districts #HDKumaraswamy #drought

ಬೆಂಗಳೂರು: ರಾಜ್ಯದಲ್ಲಿ ಕಾಣಿಸಿಕೊಂಡಿರುವ ಬರ, ವಿದ್ಯುತ್ ಕ್ಷಾಮ ಸೇರಿ ಅನೇಕ ಗಂಭೀರ ಸಮಸ್ಯೆಗಳಿಂದ ಬಸವಳಿದಿರುವ ರೈತ ಸಮುದಾಯಕ್ಕೆ ಧೈರ್ಯ ತುಂಬುವ ಸಲುವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರೈತ ಸಾಂತ್ವನ ಯಾತ್ರೆ ಕೈಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನ ಮಂಡಲ ಅಧಿವೇಶನ ಮುಗಿದ ಕೂಡಲೇ ನಮ್ಮ ಪಕ್ಷದ ಎಲ್ಲಾ ಶಾಸಕರು ಹಾಗೂ ಸ್ಥಳೀಯ ಮುಖಂಡರ ಜತೆಗೂಡಿ ಎಲ್ಲಾ ಜಿಲ್ಲೆಗಳಲ್ಲಿ ರೈತ ಸಾಂತ್ವನ ಯಾತ್ರೆ ಮಾಡುತ್ತೇನೆ. ಅವರ ನೋವಿಗೆ ದನಿ ಆಗುತ್ತೇನೆ ಎಂದರು.

ರಾಜ್ಯದಲ್ಲಿ ಈ ವರ್ಷ ಮಳೆ ಕೈಕೊಟ್ಟಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಂತ್ರಿಗಳು ಜಿಲ್ಲಾ ಪ್ರವಾಸ ಮಾಡಿ ವರದಿ ಕೊಟ್ಟಿದ್ದಾರೆ. ಕೇಂದ್ರಕ್ಕೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ತೀವ್ರ ಬರಗಾಲ ನೋಡಿರಲಿಲ್ಲ ಅಂತ ಸರಕಾರವೇ ಹೇಳಿದೆ. ಮಳೆ ಅಭಾವದಿಂದ 65 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೆಳೆ ನಾಶ ಆಗಿದೆ ಅಂತ ಕೇಂದ್ರ ಸರಕಾರಕ್ಕೆ ವರದಿಯನ್ನೂ ನೀಡಿದೆ. ಆದರೆ, ರೈತರಿಗೆ ಸಹಾಯ ಹಸ್ತ ಚಾಚುವಲ್ಲಿ ಸೋತಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ಕಳೆದ ಐದು ತಿಂಗಳಿನಿಂದ ವೈಫಲ್ಯಗಳ ಕೂಪದಲ್ಲಿ ಸಿಲುಕಿದೆ. ಈ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಎಲ್ಲದಕ್ಕೂ ಕೇಂದ್ರದ ಕಡೆಗೇ ಬೊಟ್ಟು ಮಾಡುವ ಪ್ರವೃತ್ತಿಯನ್ನು ರೂಢಿಸಿಕೊಂಡಿದೆ. ಇದು ಸರಿಯಲ್ಲ. ಕೇಂದ್ರ ಸರಕಾರ ಅನ್ನಭಾಗ್ಯಕ್ಕೆ ಅಕ್ಕಿ ಕೊಡುತ್ತಿಲ್ಲ ಎನ್ನುತ್ತಾರೆ. ವಿದ್ಯುತ್ ಕೊರತೆ ಆದಾಗ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಅಂತಾರೆ. ಎಲ್ಲದಕ್ಕೂ ಕೇಂದ್ರದ ಕಡೆಗೇ ಕೈ ತೋರಿಸುತ್ತಾರೆ. ಹಾಗಾದರೆ, ರಾಜ್ಯ ಸರಕಾರ ಎನ್ನುವುದು ಏತಕ್ಕೆ? ಇಲ್ಲಿ ಕೂತು ಇವರು ಏನು ಮಾಡುತ್ತಿದ್ದಾರೆ? ಎಂದು ಅವರು ಪ್ರಶ್ನಿಸಿದರು.

Leave a Reply