ಬೆಂಗಳೂರು: ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಐದು ಕೋಟಿ ರೂ.ವಂಚಿಸಿದ ಚೈತ್ರಾ ವಂಚನೆ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಪೂರ್ಣಗೊಳಿಸಿ ಆರೋಪ ಪಟ್ಟಿ(ಚಾರ್ಜ್ ಶೀಟ್)ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ವಂಚನೆ ಸಂಬಂಧ 68 ಸಾಕ್ಷ್ಯಗಳನ್ನು ಕಲೆ ಹಾಕಿರುವ ಸಿಸಿಬಿ ತಂಡವು ತನಿಖೆ ಪೂರ್ಣಗೊಳಿಸಿ ಚಾರ್ಜ್‌ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದು ಬಹುತೇಕ ಮುಂದಿನ ವಾರ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲು ಮುಂದಾಗಿದೆ.
ಚೈತ್ರಾ ವಂಚನೆ ಪ್ರಕರಣದಲ್ಲಿ ಈಗಾಗಲೇ 4 ಕೋಟಿ 11 ಲಕ್ಷ ರೂ.ಗಳನ್ನು ಸಿಸಿಬಿ ಜಪ್ತಿ ಮಾಡಿದೆ. ವಂಚನೆ ಪ್ರಕರಣದಲ್ಲಿ ದೊಡ್ಡ ಮಟ್ಟದ ಜಪ್ತಿ ಆಗಿದ್ದರಿಂದ ಚೈತ್ರಾ ಮತ್ತು ತಂಡಕ್ಕೆ ಸಂಕಷ್ಟ ಎದುರಾಗಿದೆ. ಈ ಪ್ರಕರಣದಲ್ಲಿ 7 ಮಂದಿ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್‌ಶೀಟ್ ಅನ್ನು ಸಿದ್ಧಪಡಿಸಿದ್ದಾರೆ.
ಪ್ರಮುಖ ಆರೋಪಿ ಚೈತ್ರಾ, ಶ್ರೀಕಾಂತ್, ಗಗನ್ ಕಡೂರ್, ಹಾಲಶ್ರೀ, ಧನರಾಜ್ ಸೇರಿದಂತೆ 7 ಮಂದಿ ವಿರುದ್ಧ ಚಾರ್ಜ್‌ಶೀಟ್‌ಗೆ ತಯಾರಿ ಮಾಡಿಕೊಳ್ಳಲಾಗಿದೆ.
ಇನ್ನು ದೂರುದಾರ ಗೋವಿಂದ ಬಾಬು ಪೂಜಾರಿ ಬಳಿ ಎಲ್ಲ ಆಡಿಯೊ, ವಿಡಿಯೊವನ್ನು ಸಿಸಿಬಿ ಪಡೆದುಕೊಂಡಿದೆ. ಈ ಆಡಿಯೊ ಮತ್ತು ವಿಡಿಯೊಗಳ ಬಗ್ಗೆಯೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಗೋವಿಂದ ಪೂಜಾರಿ ಬಳಿ ಡೀಲ್ ಸಂಬಂಧ 10 ವಿಡಿಯೊವನ್ನು ಸಿಸಿಬಿ ಪೊಲೀಸರು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿಗಳ ಮೊಬೈಲ್‌ಗಳ ಡೇಟಾ ರಿಟ್ರೀವ್ ವರದಿ ಕೂಡ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗುತ್ತದೆ. ಆರೋಪಿಗಳ ಮೊಬೈಲ್ ಚಾಟ್, ಕರೆಗಳ ಸಂಬಂಧ ಡೇಟಾ ರಿಟ್ರೀವ್ ಆಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯಗಳನ್ನು ಸಿಸಿಬಿ ಪೊಲೀಸರು ಸಂಗ್ರಹಿಸಿದಂತೆ ಆಗಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಲ್ಲ ಆರೋಪಿಗಳು ಇದ್ದಾರೆ. ಇನ್ನೂ ಕೂಡ ಯಾವ ಆರೋಪಿಗಳಿಗೂ ಜಾಮೀನು ಸಿಗುತ್ತಿಲ್ಲ.
ವಜ್ರದೇಹಿ ಸ್ವಾಮೀಜಿ: ವಜ್ರದೇಹಿ ಸ್ವಾಮೀಜಿ ಅವರು ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಚೈತ್ರಾ ಜತೆಗೆ ಮಾತನಾಡಿದ್ದಾಗಿ ತಿಳಿದುಬಂದಿದ್ದು ಚೈತ್ರಾ ಬರೆದಿದ್ದ ಒಂದು ಪತ್ರದ ಮೂಲಕ. ಚೈತ್ರಾ ಕುಂದಾಪುರ ಬಂಧನಕ್ಕೆ ಒಳಗಾಗುವ ಕೆಲವು ದಿನಗಳ ಮೊದಲು ಆದಾಯ ತೆರಿಗೆ ಇಲಾಖೆಗೆ ಒಂದು ಪತ್ರವನ್ನು ಬರೆದಿದ್ದಳು. ಇದರಲ್ಲಿ ಗೋವಿಂದ ಪೂಜಾರಿ ಅವರನ್ನು ಟಿಕೆಟ್‌ಗಾಗಿ ಹಣ ನೀಡಿದ ಒಬ್ಬ ಆರೋಪಿಯಾಗಿ ಗುರುತಿಸಲಾಗಿತ್ತು.
ಚೈತ್ರಾ ತಾನೊಬ್ಬ ಪತ್ರಕರ್ತೆ ಎಂದೂ ಗೋವಿಂದ ಪೂಜಾರಿ ಈ ರೀತಿ ಹಣ ನೀಡಿ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಬರೆದಿದ್ದಳು. ಈ ಪತ್ರವನ್ನು ಆಕೆ ಆದಾಯ ತೆರಿಗೆ ಇಲಾಖೆಗೆ ಪೋಸ್ಟ್ ಮಾಡಿದ್ದಳೋ ಇಲ್ಲವೋ ಎಂಬುದು ತಿಳಿದುಬಂದಿಲ್ಲ. ಆದರೆ, ಆ ಪತ್ರವು ಸಿಸಿಬಿ ಕೈಗೆ ಸಿಕ್ಕಿತ್ತು. ಆ ಪತ್ರದಲ್ಲಿ ರಾಜಶೇಖರಾನಂದ ಸ್ವಾಮೀಜಿ ಬಗ್ಗೆ ಪ್ರಸ್ತಾಪವಿತ್ತು.
ಆದರೆ ನಾನು ಜುಲೈ 29ರಂದು ನಾನು ಚೈತ್ರಾ ಕುಂದಾಪುರಗೆ ಕಾಲ್ ಮಾಡಿದ್ದು ಹೌದು. ಆದರೆ, ಈ ಪ್ರಕರಣದಲ್ಲಿ ನಾನು ಯಾವುದೇ ರೀತಿಯಲ್ಲೂ ಶಾಮೀಲಾಗಿಲ್ಲ. ನನ್ನ ಹೆಸರು ಥಳುಕುಹಾಕಿಕೊಂಡಿದೆ ಎಂದು ಕೆಲವರು ಈ ಹಿಂದೆ ಹೇಳಿದ್ದರು. ಅವರಿಗೆಲ್ಲ ನಾನು ಬೈದು ಫೋನ್ ಇಟ್ಟಿದ್ದೇನೆ. ನಾನು ಇಂಥ ಬೇನಾಮಿ ವ್ಯವಹಾರ ಮಾಡುವವನಲ್ಲ. ನನ್ನದು ಏನಿದ್ದರೂ ನೇರಾನೇರ ಎಂದು ಸ್ವಾಮೀಜಿ ಹೇಳಿದ್ದಾರೆ.
ಈ ಸಂಗತಿಯ ಕೆಲವೊಂದು ಒಳಸುಳಿಗಳು ಹಿಂದಿನಿಂದಲೇ ತನಗೆ ಗೊತ್ತೆಂದೂ, ಅದರ ಬಗ್ಗೆ ತಾನು ಹಾಲಶ್ರೀ ಸ್ವಾಮೀಜಿ, ಚಕ್ರವರ್ತಿ ಸೂಲಿಬೆಲೆ ಜತೆ ಚರ್ಚೆ ಮಾಡಿದ್ದಾಗಿಯೂ ಹೇಳಿದ್ದಾರೆ.




