ಬಂಜಾರರ ಗುಳೆ ತಪ್ಪಿಸಲು ಮುಂದಾಗುವರೇ ಆಳುವ ವರ್ಗದವರು?

5 years ago

ಸಾವು, ನೋವು, ಮಕ್ಕಳ ಮೇಲೆ ದೌರ್ಜನ್ಯ, ಲೈಂಗಿಕ ಕಿರುಕುಳ, ಅಪಾಯಕಾರಿ ಸ್ಥಳಗಳಲ್ಲಿ ಜೀವನ ದೂಡುವುದು; ಇವು ಬಂಜಾರ ಸಮುದಾಯದವರು ಹೊಟ್ಟೆ ಪಾಡಿಗಾಗಿ ಗುಳೆಹೋದೆಡೆಯಲ್ಲೆಲ್ಲ ಎದುರಿಸುವ ಸಮಸ್ಯೆಗಳು.

ಇಷ್ಟೆಲ್ಲಾ ಸಮಸ್ಯೆಗಳು ಎದುರಾದರೂ ಬಂಜಾರರು ಗುಳೆಹೋಗುವುದನ್ನು ತಪ್ಪಿಸುವುದಿಲ್ಲ. ಕಳೆದೆರಡು ವರ್ಷಗಳಿಂದ ಕೊರೋನಾ ಸಂಕಷ್ಟದಿಂದಾಗಿ ಶಾಲೆಗಳು ಇಲ್ಲ  ಋತುಮಾನ  ಶಾಲೆಗಳೂ ಇಲ್ಲದ ಕಾರಣ ಮಕ್ಕಳನ್ನೂ ಹೆಚ್ಚಾಗಿ ಕರೆದುಕೊಂಡು ಹೋಗುತ್ತಿದ್ದಾರೆ.

ಕಳೆದ ವರ್ಷ ಮರಿಯಮ್ಮನಹಳ್ಳಿ ತಾಂಡಾ ನಾಗಲಾಪುರ ತಾಂಡ ತಾಳೆಬಸಾಪುರ ತಾಂಡಾದ ಬಂಜಾರ ಕುಟುಂಬಗಳು ಗುಳೆ ಹೋದ ಕಡೆಯಲ್ಲಿ  ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕೊಲೆ, ನೀರಿನ ಹೊಂಡಗಳಲ್ಲಿ  ಬಿದ್ದು ಹಸುಗೂಸುಗಳ ಸಾವು, ಯುವಕನೋರ್ವನ ಆತ್ಮಹತ್ಯೆ ಮುಂತಾದ ಕಹಿಘಟನೆಗಳು  ಇನ್ನೂ  ಮಾಸಿಲ್ಲ. ಮತ್ತೆ ಈ  ಬಂಜಾರ ಕುಟುಂಬಗಳು ಹೊಟ್ಟೆಪಾಡಿಗಾಗಿ ದುಡಿಮೆ ಅರಸಿ ಗುಳೆ ಹೊರಟಿವೆ.

ತಾಳೆ ಬಸಾಪುರ ತಾಂಡಾದಲ್ಲಿ  ಕಳೆದೆರಡು ದಿನಗಳಲ್ಲಿ ಐದಾರು ನೂರು ಜನ ರಾತ್ರೋರಾತ್ರಿ ಗುಳೆ ಹೊರಟಿದ್ದಾರೆ. ಲಾರಿಗಳಲ್ಲಿ ಕುರಿಮಂದೆಯನ್ನು ತುಂಬಿಕೊಂಡು ಹೋಗುವ ಹಾಗೆ ಜನರನ್ನು ತುಂಬಿಕೊಂಡು ಹೋಗಲಾಗುತ್ತಿದೆ. ಗುಳೆ ಹೋಗುವುದನ್ನು ತಪ್ಪಿಸಲು ಬಂಜಾರ ಸಮುದಾಯದ ವಿವಿಧ ಸಂಘಟನೆಗಳು ಜನರೊಂದಿಗೆ ಸಭೆ ನಡೆಸಿ ಜಾಗೃತಿ ಮೂಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಜಿಲ್ಲಾಡಳಿತ ನರೇಗಾ ಕಾಮಗಾರಿಯಲ್ಲಿ ಉದ್ಯೋಗ ಮಾಡಿ ಜೀವನ ಮಾಡಬಹುದೆಂದು ಹೇಳುತ್ತದೆಯಾದರೂ ಅಲ್ಲಿನ ತಾಂತ್ರಿಕ ಸಂಕಷ್ಟಗಳಿಂದಾಗಿ ಸರಿಯಾಗಿ ಕೆಲಸವೂ ಸಿಗದೇ ಮಾಡಿದ ಕೆಲಸಕ್ಕೆ ಸರಿಯಾಗಿ ಸಕಾಲಕ್ಕೆ ಕೂಲಿಯೂ ಸಿಗುತ್ತಿಲ್ಲ. ಹಾಗಾಗಿ ರಾಜ್ಯಾದ್ಯಾಂತ  ಈ ಸಮುದಾಯ  ಬಹುದೊಡ್ಡ ಸಂಖ್ಯೆಯಲ್ಲಿ ಗುಳೆ ಹೋಗುತ್ತಿದೆ. ಗಂಡ, ಹೆಂಡತಿ, ಸಹೋದರ, ಸಹೋದರಿಯರು, ಅಪ್ಪ, ಮಕ್ಕಳು ಹೀಗೆ ಒಟ್ಟಿಗೆ ಹೋಗಿ ದುಡಿಯುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಗಳಿಸಬಹುದಾಗಿದೆ.

ಇದೇ ಗುಳೆ ನಿರಂತರವಾಗುವುದರಿಂದ ಈ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ವಯೋಮಾನಕ್ಕೆ ಬರುತ್ತಿದ್ದಂತೆ ಕುಡಿತ ಜೂಜಾಟದಲ್ಲಿ ತೊಡಗಿಕೊಂಡು ಜೀವನ ವ್ಯರ್ಥಗೊಳಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಹದಿಹರೆಯಕ್ಕೆ ಕಾಲಿಟ್ಟ ಯುವಕರು ಅನೇಕ ಅಪಾಯಕಾರಿ ಕೆಲಸಗಳಲ್ಲಿ ಬದುಕನ್ನು ಕಳೆದುಕೊಳ್ಳುವ ಘಟನೆಗಳೂ ಹೆಚ್ಚಾಗುತ್ತಿವೆ.

ಇಂತಹ ಕುಟುಂಬಗಳಲ್ಲಿ ಹೆಣ್ಣಿನ ಮೇಲೆ ಹಲವಾರು ರೀತಿಯ ದೌರ್ಜನ್ಯಗಳು, ಶೋಷಣೆಗಳು ನಡೆಯುತ್ತಲೇ ಇರುತ್ತವೆ. ಬಂಜಾರ ಸಮುದಾಯದ ತಾಯಂದಿರು, ಗಂಡಸರ ದೌರ್ಜನ್ಯ, ದರ್ಪಗಳಿಂದಾಗಿ  ನಲುಗಿ ಹೋಗುತ್ತಿದ್ದಾರೆ. ಗುಳೆ ಹೋಗುವುದನ್ನು ಎಂದಿಗೂ ತಪ್ಪಿಸಲು ಸಾಧ್ಯವಿಲ್ಲವೆನ್ನುವಷ್ಟು  ಇವರ ಜೀವನಕ್ರಮ ಹಳಿತಪ್ಪಿ ವೇಗವಾಗಿ ಸಾಗುತ್ತಿದೆ.

ಗುಳೆ ಹೋಗುವುದನ್ನು ಎಂದಿಗೂ ತಪ್ಪಿಸಲು ಸಾಧ್ಯವಿಲ್ಲವೆನ್ನುವಷ್ಟು  ಇವರ ಜೀವನಕ್ರಮ ಹಳಿತಪ್ಪಿ ವೇಗವಾಗಿ ಸಾಗುತ್ತಿದೆ. ಇಂತಹ ಸಂಕಷ್ಟದ ಬದುಕು ನಮಗೇ ಏಕೆ ಎಂದು ಈ ಸಮುದಾಯದ ಮಕ್ಕಳು ಕೇಳುತ್ತಿದ್ದಾರೆ. ಆದರೂ ಕೇಳಿಸಿಕೊಳ್ಳುವ ಕಿವಿಗಳು ತೆರೆಯುತ್ತಿಲ್ಲ. ಸಹಾಯಕ್ಕೆ  ಕೈ ಚಾಚುತ್ತಿಲ್ಲ.

ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ. ರಾಜ್ಯದಲ್ಲಿ  ಬಂಜಾರ ಸಮುದಾಯಕ್ಕೆ ಸೇರಿದವರು ಶಾಸಕರು, ಸಚಿವರೂ ಆಗಿದ್ದರೂ ಈ ಸಮುದಾಯದ ಗುಳೆ ಹೋಗುವ ಸಮಸ್ಯೆಗೆ ಒಂದು ಪೂರ್ಣವಿರಾಮವಿಡಲು ಸಾಧ್ಯವಾಗಿಲ್ಲ.

ಬಂಜಾರರು ಬೇರೆ ಸಮುದಾಯಗಳಿಂದ ಹೊರಗೆ ಇರುವುದರಿಂದ‌ ಬೇರೆ ಸಮುದಾಯಗಳು ಬದುಕನ್ನು ಕಟ್ಟಿಕೊಂಡ ಹಾಗೇ ಈ ಸಮುದಾಯ ಕಟ್ಟಿಕೊಳ್ಳಲಾಗುತ್ತಿಲ್ಲ. ಸಾಮಾಜಿಕ ಸಮಾನತೆಗಾಗಿ ಇರುವ ಸಂವಿಧಾನ ಕಾನೂನುಗಳನ್ನು ಸೂತ್ರವಾಗಿಟ್ಟುಕೊಂಡು ನಮ್ಮನ್ನಾಳುವ ಸರ್ಕಾರಗಳು ಜವಾಬ್ದಾರಿಯುತವಾಗಿ ಆಡಳಿತ ನಡೆಸಿದರೆ, ಈ ಸಮಸ್ಯೆಗಳು ಬಗೆಹರಿಯಲು ಸಾಧ್ಯ.

  • ಸೋಮೇಶ್ ಉಪ್ಪಾರ್, ಸಂಶೋಧಕರು

Leave a Reply