ದಲಿತ ಮಹಿಳೆಗೆ‌ ಬೆದರಿಕೆ ಆರೋಪ: ತನಿಖೆಯಲ್ಲಿ ಯಾವುದೇ ರೀತಿಯ ಹಸ್ತಕ್ಷೇಪವಿಲ್ಲ: ಡಾ.ಜಿ.ಪರಮೇಶ್ವರ್

3 years ago

#Dalit #assault #dsudhakar #Nointerference investigation #GParameshwar

ಬೆಂಗಳೂರು: ಜಮೀನು ವಿವಾದವೊಂದರಲ್ಲಿ ದಲಿತ ಮಹಿಳೆಗೆ‌ ಬೆದರಿಕೆ ಹಾಕಿದ ಆರೋಪದ ಸುಳಿಯಲ್ಲಿ ಸಿಲುಕಿರುವ ಯೋಜನಾ ಸಚಿವ ಡಿ.ಸುಧಾಕರ್ ಪ್ರಕರಣದ ತನಿಖೆಯಲ್ಲಿ ತಾವು ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆ ತಾವು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದ್ದೇನೆ. ಯಾವ ಸಂದರ್ಭದಲ್ಲಿ ಘಟನೆಯಾಗಿದೆ, ಏನೆಲ್ಲಾ ನಡೆದಿದೆ ಎಂಬ ಮಾಹಿತಿ ನೀಡುವಂತೆ ತಿಳಿಸಿರುವುದಾಗಿ ಹೇಳಿದರು.

ಸಚಿವ ಡಿ.ಸುಧಾಕರ್ ಅವರು ತಮ್ಮನ್ನು ಭೇಟಿ ಮಾಡಿ ಹತ್ತು ವರ್ಷದ ಹಿಂದೆ ತಾವು ಆಸ್ತಿಯನ್ನು ಒಂದು ಕಂಪನಿಗೆ ಖರೀದಿಸಿದ್ದು, ಇದು ತಮ್ಮ ವೈಯಕ್ತಿಕವಾಗಿ  ಖರೀದಿ ಅಲ್ಲ. ಸದರಿ ಕಂಪನಿಗೆ ತಾವೂ ಕೂಡ ನಿರ್ದೇಶಕ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ತಾವು ಯಾರ ವಿರುದ್ಧವೂ ಅವಹೇಳನಕಾರಿಯಾಗಿ ಮಾತನಾಡಿಲ್ಲ ಮತ್ತು ಗೂಂಡಾಗಿರಿಯನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅದರ ಹೊರತಾಗಿಯೂ ತಾವು ಇಲಾಖೆಯ ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ಅವರು ವಾಸ್ತವಾಂಶ ಹಾಗೂ ಸತ್ಯಾಂಶದ ವರದಿ ನೀಡುತ್ತಾರೆ. ಅದರ ಬಳಿಕ ಹೇಳಿಕೆ ನೀಡುತ್ತೇನೆ ಎಂದಿದ್ದಾರೆ.

ಯಾವುದೇ ಹಂತದಲ್ಲೂ ಪೊಲೀಸರ ತನಿಖೆಯಲ್ಲಿ ತಾವು ಹಸ್ತಕ್ಷೇಪ ಮಾಡುವುದಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಚಿವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿರುವುದು ತತ್‌ಕ್ಷಣದ ಪ್ರತಿಕ್ರಿಯೆ ಆಗಿರಬಹುದು ಎಂದು ಸ್ಪಷ್ಟನೆ ನೀಡಿದರು.

ಇದು ಸೂಕ್ಷ್ಮ ಪ್ರಕರಣ. ಒಬ್ಬ ಸಚಿವರು ಭಾಗಿಯಾದ ಕುರಿತಂತೆ ಚರ್ಚೆಗಳಿವೆ. ವಿರೋಧಪಕ್ಷಗಳು ಸಹಜವಾಗಿಯೇ ರಾಜೀನಾಮೆ ಕೇಳುತ್ತಿವೆ. ಅದರಲ್ಲಿ ವಿಶೇಷ ಏನೂ ಇಲ್ಲ. ಅದು ಅವರ ಕೆಲಸ ಎಂದರು.

Leave a Reply