ಅಪರಾಧ ಚಟುವಟಿಕೆ ಹತ್ತಿಕ್ಕಲು ಮಾಹಿತಿ, ಸಂಪನ್ಮೂಲ ಹಾಗೂ ತಂತ್ರಗಾರಿಕೆ ವಿನಿಮಯ ಅನಿವಾರ್ಯ: ಸಿದ್ದರಾಮಯ್ಯ

3 years ago

#information #resources #strategies #essential #curb #criminal #activity #Siddaramaiah #cm

ಬೆಂಗಳೂರು: ಅಪರಾಧ ಚಟುವಟಿಕೆಗಳನ್ನು ಸಮರ್ಪಕವಾಗಿ ಹತ್ತಿಕ್ಕಲು ರಾಜ್ಯ-ರಾಜ್ಯಗಳ ನಡುವೆ ಮಾಹಿತಿ, ಸಂಪನ್ಮೂಲ ಹಾಗೂ ತಂತ್ರಗಾರಿಕೆಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ  ದಕ್ಷಿಣ ರಾಜ್ಯಗಳ ಪೊಲೀಸ್ ಮಹಾ ನಿರ್ದೇಶಕ(ಡಿಜಿಪಿ)ರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಪರಾಧ ಜಗತ್ತಿಗೆ ಗಡಿಗಳು ಇಲ್ಲದಿರುವಾಗ ಇದನ್ನು ನಿಗ್ರಹಿಸುವುದರಲ್ಲೂ ಭದ್ರತಾ ಪಡೆಗಳು ತನಿಖಾ ಸಂಸ್ಥೆಗಳ ನಡುವೆ ಗಡಿಗಳು ಇರಬಾರದು ಎಂದು ಹೇಳಿದರು.

ಅಪರಾಧ ಪತ್ತೆ ಮತ್ತು ಅಪರಾಧ ನಿಯಂತ್ರಣದಲ್ಲಿ ದಕ್ಷಿಣ ಭಾರತ ರಾಜ್ಯಗಳ ನಡುವೆ ಇನ್ನಷ್ಟು ಹೆಚ್ಚಿನ ಸಹಕಾರ ಮತ್ತು ಸಮನ್ವಯ ಏರ್ಪಡಿಸಿಕೊಳ್ಳಲು ಈ ಸಮ್ಮೇಳನ ನೆರವಾಗುತ್ತದೆ ಎನ್ನುವ ನಂಬಿಕೆ ನನಗಿದೆ ಎಂದರು.

ದಕ್ಷಿಣ ಭಾರತ ತನ್ನ ಸಾಂಸ್ಕೃತಿಕ ವೈವಿಧ್ಯತೆ, ಭಿನ್ನ ಭಾಷೆಗಳು ಮತ್ತು ಭೌಗೋಳಿಕತೆ ಕಾರಣದಿಂದ ಅಪರಾಧ ನಿಗ್ರಹದಲ್ಲಿ ಹಲವು ಸವಾಲುಗಳನ್ನು ಮುಂದಿಡುತ್ತಿದೆ. ಮಾದಕ ವಸ್ತು ಕಳ್ಳಸಾಗಣೆ, ಮಾನವ ಕಳ್ಳ ಸಾಗಣೆ, ಸಂಘಟಿತ ಅಪರಾಧ, ಸೈಬರ್ ಕ್ರೈಂ ಸಮಾಜದ ಮತ್ತು ಸಮುದಾಯದ ಶಾಂತಿ ಮತ್ತು ಸುರಕ್ಷತೆಗೆ ಅಪಾಯವನ್ನು ತಂದೊಡ್ಡುತ್ತಿದೆ. ಈ ಅಪರಾಧಗಳೆಲ್ಲಾ ರಾಜ್ಯಗಳ ಗಡಿ ದಾಟಿಯೂ ಕಾರ್ಯಾಚರಣೆ ಮಾಡುತ್ತಿರುವುದರಿಂದ ಇವುಗಳ ನಿಗ್ರಹದಲ್ಲೂ ಅಂತರ ರಾಜ್ಯ ಪೊಲೀಸ್ ತಂಡಗಳ ನಡುವೆ ಸಮನ್ವಯ ಮತ್ತು ಸಹಕಾರ ಅಗತ್ಯ ಎಂದು ತಿಳಿಸಿದರು.

ಜಂಟಿ ಕಾರ್ಯಾಚರಣೆಗಳು ಅಪರಾಧಿಗಳ ಬಲಕುಂದಿಸಲು ಸಹಕಾರಿಯಾಗಬಹುದು ಯ. ವಿವಿಧ ಕಾನೂನು ರಕ್ಷಣೆಯ ಸಂಸ್ಥೆಗಳು ನಿರಂತರವಾಗಿ ಅಪರಾಧಿಗಳನ್ನು ಮಟ್ಟಹಾಕಲು ಜೊತೆಯಾಗಿ ಕೆಲಸ ಮಾಡುತ್ತಿವೆ ಎಂಬ ವಿಷಯವೇ ಅವರನ್ನು ಎದೆಗುಂದಿಸಬಹುದು ಎಂದು ಹೇಳಿದರು.

ಇದರೊಂದಿಗೆ ಅಂತರರಾಜ್ಯ ಸಮನ್ವಯವು ಅಪರಾಧ ತಡೆಗಟ್ಟುವಲ್ಲಿನ ಉತ್ತಮ ಹಾಗೂ ವಿನೂತನ ಮಾದರಿಗಳನ್ನು ಹಂಚಿಕೊಳ್ಳಲು ಸಮಾವೇಶವು ವೇದಿಕೆಯಾಗಲಿದೆ ಎಂದು ತಿಳಿಸಿದರು.

ಪ್ರತಿ ರಾಜ್ಯವೂ ನಿರ್ದಿಷ್ಟ ಅಪರಾಧವನ್ನು ತಡೆಗಟ್ಟಲು ಒಂದು ಯಶಸ್ವಿ ಮಾದರಿಯ ಕಾರ್ಯತಂತ್ರವನ್ನು ರೂಪಿಸಿರಬಹುದು. ಈ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ನಾವು ಪರಸ್ಪರರಿಂದ ಹಲವು ವಿಚಾರಗಳನ್ನು ಅರಿತುಕೊಳ್ಳಬಹುದಾಗಿದೆ ಹಾಗೂ ಇತರೆಡೆಗಳಲ್ಲಿ ಯಶಸ್ವಿಯಾದ ಕ್ರಮಗಳನ್ನು ಅನುಸರಿಸಲು ಸಾಧ್ಯವಾಗುತ್ತದೆ ಎಂದರು.

ಈ ತಿಳಿವಳಿಕೆಯ ಹಂಚಿಕೆಯು ಅಪರಾಧಿಗಳ ಕಾರ್ಯತಂತ್ರವನ್ನು ಭೇದಿಸಲು ಸಹಕಾರಿಯಾಗಲಿದೆ, ಆದರೆ ಅಪರಾಧ ತಡೆಗಟ್ಟಲು ಅಂತರರಾಜ್ಯ ಸಮನ್ವಯ ಸಾಧಿಸಲು ಸದೃಢ ನಾಯಕತ್ವ, ಪರಿಣಾಮಕಾರಿ ಸಂವಹನ ಮತ್ತು ಬದ್ಧತೆ ಅತಿ ಅಗತ್ಯವಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರಗಳು ಜಂಟಿ ಕಾರ್ಯಾಚರಣೆಗಾಗಿ ಟಾಸ್ಕ್‌ಫೋರ್ಸ್‌ಗಳು, ಜಂಟಿ ತರಬೇತಿ ಕಾರ್ಯಕ್ರಮಗಳು ಹಾಗೂ ಕಾನೂನು ರಕ್ಷಣೆಯ ಸಂಸ್ಥೆಗಳ ನಡುವೆ ಸಭೆಗಳನ್ನು ನಡೆಸುವ ಮೂಲಕ ಸಮನ್ವಯವನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕಾಗಿದೆ. ಇಂತಹ ಸಂಕಲ್ಪದೊಂದಿಗೆ ಈ ಸಮ್ಮೇಳನವು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದರು.

ಜನರಿಗೆ ಸುರಕ್ಷಿತ ಪರಿಸರ ನಿರ್ಮಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಲಿದೆ ಎಂಬ ವಿಶ್ವಾಸ ನನಗಿದೆ. ನಾವೆಲ್ಲರೂ ಸೀಮಾತೀತವಾಗಿ ಜೊತೆಯಾಗಿ ಕೆಲಸ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿ ಅಪರಾಧಗಳನ್ನು ಯಶಸ್ವಿಯಾಗಿ ಮಟ್ಟ ಹಾಕುವುದರೊಂದಿಗೆ ಪ್ರತಿಯೊಬ್ಬ ನಾಗರಿಕನ ಹಿತರಕ್ಷಣೆ ಮಾಡೋಣ ಎಂದು ಹೇಳಿದರು.

ಸಮಾವೇಶದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ‌ಮೋಹನ್, ದಕ್ಷಿಣ ರಾಜ್ಯಗಳ ಎಲ್ಲಾ ಪೊಲೀಸ್ ಮಹಾನಿರ್ದೇಶಕರು ಹಾಗೂ ಕೇಂದ್ರ ಪೊಲೀಸ್ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply