ಅನಂತ ನಾಗ್ -75 : ಬೆಳ್ಳಿ ತೆರೆ-50 ಸಂಭ್ರಮ, ಸನ್ಮಾನ, ಚಿತ್ರೋತ್ಸವ

3 years ago

#Anantnag75 #Silverscreen50 #celebration #honor #filmfestival

ಬೆಂಗಳೂರು: ಕನ್ನಡದ ವಿಸ್ಮಯ ಎಂದೇ ವರ್ಣಿತರಾಗಿರುವ ಹೆಮ್ಮೆಯ ನಟ ಅನಂತ ನಾಗ್ ಅವರು 75 ವರ್ಷಗಳನ್ನು ಪೂರೈಸುತ್ತಿದ್ದು ಬೆಳ್ಳಿತೆರೆಗೆ ಬಂದು ಐವತ್ತು ವರ್ಷಗಳೂ, ಇದೇ ಸಂದರ್ಭದಲ್ಲಿ ಕಳೆದಿರುವುದು ಕಾಕತಾಳೀಯವಾದರೂ ಅರ್ಥಪೂರ್ಣವಾಗಿದೆ ಎಂದು ಭಾರತೀಯ ವಿದ್ಯಾಭವನದ ಪರವಾಗಿ ಎನ್.ಎಸ್.ಶ್ರೀಧರ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದಿಗೂ ಬಹು ಬೇಡಿಕೆಯ ನಟರಾಗಿರುವ ಅನಂತ್ ನಾಗ್ ಸದಾ ಸುದ್ದಿಯಿಂದ ದೂರವಿದ್ದು ತಮ್ಮಷ್ಟಕ್ಕೆ ತಾವು ಕರ್ತವ್ಯದಲ್ಲಿ ನಿರತರಾಗಿರುವವರು. ಇವರ ಕುರಿತ ಚಲನಚಿತ್ರೋತ್ಸವ, ವಿಚಾರ ಸಂಕಿರಣ ಮತ್ತು ಅಭಿನಂದಾನಾ ಕಾರ್ಯಕ್ರಮವನ್ನು ಭಾರತೀಯ ವಿದ್ಯಾ ಭವನವು ಸುಚಿತ್ರಾ ಫಿಲಂ ಸೊಸೈಟಿಯ ಸಹಕಾರದೊಂದಿಗೆ ಅಯೋಜಿಸಿದೆ. ಭಾರತೀಯ ವಿದ್ಯಾ ಭವನದ ಹಳೆಯ ವಿದ್ಯಾರ್ಥಿಯಾಗಿರುವ ಡಾ. ಅನಂತ ನಾಗ್ ತಾವು ಓದಿದ ಸಂಸ್ಥೆಯ ಮೇಲಿನ ಗೌರವದಿಂದ ಈ ಕಾರ್ಯಕ್ರಮವನ್ನು ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸೆಪ್ಟಂಬರ್ 13, 14 ಮತ್ತು 15ರ ಬುಧವಾರ, ಗುರುವಾರ ಮತ್ತು ಶುಕ್ರವಾರಗಳಂದು ಈ ಕಾರ್ಯಕ್ರಮ ನಡೆಯಲಿದೆ. ಸೆಪ್ಟಂಬರ್ 13ರಂದು ಭಾರತೀಯ ವಿದ್ಯಾಭವನದ ಕೆ.ಆರ್.ಜೆ ಸಭಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದ್ದು ಸುಚಿತ್ರ ಫಿಲಂ ಅಂಡ್ ಕಲ್ಚರಲ್ ಅಕಾಡಮಿಯ ಅಧ್ಯಕ್ಷ ಪ್ರಕಾಶ ಬೆಳವಾಡಿ ಮತ್ತು ಭಾರತೀಯ ವಿದ್ಯಾ ಭವನದ ನಿರ್ದೇಶಕ ಎಚ್.ಎನ್.ಸುರೇಶ್ ಮೂರು ದಿನಗಳ ಉತ್ಸವವನ್ನು ಉದ್ಘಾಟಿಸಲಿದ್ದಾರೆ.

ಬೆಳಗಿನ ಹನ್ನೊಂದು ಗಂಟೆಗೆ ಅನಂತ ನಾಗ್ ಅವರ ಕುರಿತ ವಿಚಾರ ಸಂಕಿರಣವು ನಡೆಯಲಿದೆ. ಕರ್ನಾಟಕ ಮಾಧ್ಯಮ ಅಕಾಡಮಿಯ ಮಾಜಿ ಅಧ್ಯಕ್ಷ ಸದಾಶಿವ ಶೆಣ್ಯೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಸುಂದರ ರಾಜ್, ಖ್ಯಾತ ನಟರಾದ ರಮೇಶ್ ಭಟ್ ಅವರು ಅನಂತ ನಾಗ್ ಅವರ ಕೊಡುಗೆಗಳ ಕುರಿತ ತಮ್ಮ ಚಿಂತನೆಗಳನ್ನು ಹಂಚಿ ಕೊಳ್ಳಲಿದ್ದಾರೆ. ಸುಚಿತ್ರಾ ಫಿಲಂ ಸೊಸೈಟಿಯ ಅಧ್ಯಕ್ಷರಾದ ಎನ್. ನರಹರಿ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಸೆಪ್ಟಂಬರ್ 13, 14 ಮತ್ತು 15ರಂದು ಮೂರೂ ದಿನವೂ ಭಾರತೀಯ ವಿದ್ಯಾ ಭವನ ಮತ್ತು ಸುಚಿತ್ರ ಫಿಲಂ ಸೊಸೈಟಿ ಎರಡೂ ಕಡೆಯಲ್ಲಿ ಅನಂತ್ ನಾಗ್ ಅವರು ಅಭಿನಯಿಸಿದ ಚಿತ್ರಗಳ ಉತ್ಸವ ನಡೆಯಲಿದೆ.

ಸೆಪ್ಟಂಬರ್ 15ರ ಗುರುವಾರ ಸಂಜೆ 4 ಗಂಟೆಗೆ ಭಾರತೀಯ ವಿದ್ಯಾ ಭವನದ ಇ.ಎಸ್.ವಿ ಹಾಲ್ನಲ್ಲಿ ಸ್ಮಿತಾ ಕಾರ್ತಿಕ್ ಮತ್ತು ತಂಡದವರಿಂದ ಡಾ. ಅನಂತ್ ನಾಗ್ ಅಭಿನಯಿಸಿದ ಆಯ್ದ ಚಿತ್ರಗೀತೆಗಳ ಕಾರ್ಯಕ್ರಮವಿದ್ದು ಅದರ ನಂತರ ಅನಂತ್ ನಾಗ್ ಅವರ ಅಭಿನಂದನಾ ಕಾರ್ಯಕ್ರಮವು ನೆರವೇರಲಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮ.ಹರೀಶ್ ಅಧ್ಯಕ್ಷತೆಯನ್ನು ವಹಿಸಲಿದ್ದು ಪ್ರಜಾವಾಣಿ ದಿನ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್ ಮುಖ್ಯ ಅತಿಥಿಗಳಾಗಿರುತ್ತಾರೆ. ಭಾರತೀಯ ವಿದ್ಯಾ ಭವನದ ಉಪಾಧ್ಯಕ್ಷ ಮತ್ತು ಯುನೆಸ್ಕೋ ಮಾಜಿ ರಾಯಭಾರಿ ಚಿರಂಜೀವಿ ಸಿಂಗ್ ಈ ಸನ್ಮಾನ ಕಾರ್ಯಕ್ರಮವನ್ನು ನಡೆಸಿ ಕೊಡಲಿದ್ದು ಭಾರತೀಯ ವಿದ್ಯಾ ಭವನದ ಮಾಧ್ಯಮ ಭಾರತಿ ನಿರ್ದೇಶಕ ಪ್ರೊ.ಎನ್.ಎಸ್. ಶ್ರೀಧರ ಮೂರ್ತಿಯವರು ಅಭಿನಂದನಾ ನುಡಿಗಳನ್ನು ಆಡಲಿದ್ದಾರೆ. ಬಹು ನಿರೀಕ್ಷಿತ ಅನಂತ ನಾಗ್ ಅವರ ಮಾತುಗಳೂ ಇರುತ್ತವೆ.

Leave a Reply