ಶಿಕ್ಷಣದಿಂದ ಹೊರಗಿಡಲಾಗಿದ್ದ ಶೂದ್ರರು, ಹೆಣ್ಣುಮಕ್ಕಳಿಗೆ ಸಂವಿಧಾನದಿಂದ ಶಿಕ್ಷಣ: ಸಿದ್ದರಾಮಯ್ಯ

3 years ago

#Education #Constitution #Shudras #girls #Siddaramaiah

ಬೆಂಗಳೂರು: ರಾಜ್ಯದಲ್ಲಿ ಶಿಕ್ಷಕರಿಗೆ ಒಂದೇ ರೀತಿಯ ಶಿಕ್ಷಣ, ತರಬೇತಿ ಇದ್ದಾಗ್ಯೂ ಪ್ರತಿಯೊಂದು ಜಿಲ್ಲೆಗಳಲ್ಲೂ ಬೇರೆ ಬೇರೆ ಫಲಿತಾಂಶ ಬರುತ್ತಿರುವುದೇಕೆ ಎಂಬುದು ಗಂಭೀರವಾದ ವಿಚಾರವಾಗಿದ್ದು ಈ ಬಗ್ಗೆ ಪರಿಶೀಲನೆ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರಶಸ್ತಿ ಪುರಸ್ಕೃತ ಪ್ರಾಥಮಿಕ, ಪ್ರೌಢ, ಪದವಿ ಶಿಕ್ಷಕರು, ಪದವಿ ಪೂರ್ವ ಉಪನ್ಯಾಸಕರನ್ನು ಸನ್ಮಾನಿಸಿ ಹಾಗೂ ಉನ್ನತ ಶಿಕ್ಷಣದಲ್ಲಿ ನ್ಯಾಕ್ ಶ್ರೇಣಿ ಪಡೆದ ಶಿಕ್ಷಣ ಸಂಸ್ಥೆಗಳನ್ನು ಅಭಿನಂದಿಸಿದ ಬಳಿಕ ಮಾತನಾಡಿದ ಅವರು, ಪರೀಕ್ಷೆಗಳು ಒಂದೇ ರೀತಿಯಾಗಿವೆ. ಆದರೂ,ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ಹೆಚ್ಚು ಫಲಿತಾಂಶ ಬರುತ್ತದೆ. ಅದೇ ಕಲ್ಯಾಣ ಕರ್ನಾಟಕದ ಕಲ್ಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ ಫಲಿತಾಂಶ ಹಿನ್ನಡೆಯಾಗಲು ಕಾರಣವೇನು ಎಂದು ಪ್ರಶ್ನಿಸಿದರು.

ಕರಾವಳಿ ಭಾಗಕ್ಕೆ ಸ್ವತಂತ್ರ್ಯ ಪೂರ್ವದಲ್ಲೇ ಕ್ರೈಸ್ತ ಮಿಶನರಿಗಳು ಬಂದು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ ಹಿನ್ನೆಲೆಯಿಂದಾಗಿ ಹೆಚ್ಚು ಫಲಿತಾಂಶ ಬರುತ್ತಿರಬಹುದು. ಆದರೆ, ಅನಂತರ ಸರ್ಕಾರ ನೇಮಕ ಮಾಡುವ ಶಿಕ್ಷಕರು ಒಂದೇ ರೀತಿಯ ವ್ಯಾಸಂಗ ಮತ್ತು ತರಬೇತಿ ಪಡೆದಿರುತ್ತಾರೆ. ಆದರೂ ಜಿಲ್ಲೆಗಳ ಫಲಿತಾಂಶದಲ್ಲಿ ವ್ಯತ್ಯಾಸವೇಕಿದೆ ಎಂದರು.

ವಿದ್ಯೆ ಕಲಿಸುವುದಷ್ಟೆ ಶಿಕ್ಷಣದ ಉದ್ದೇಶ ಅಲ್ಲ. ಮಕ್ಕಳನ್ನು ವಿಶ್ವ ಮಾನವರನ್ನಾಗಿ ರೂಪಿಸುವುದೂ ಶಿಕ್ಷಣದ ಗುರಿ. ರೈತರು, ಸೈನಿಕರು, ಶಿಕ್ಷಕರು ಆದರ್ಶ ಸಮಾಜದ ಆಧಾರ ಸ್ತಂಭಗಳು. ಇವರು ಸಮಾಜದ, ದೇಶದ ಭವಿಷ್ಯ ರೂಪಿಸುವ ಕಾಯಕ ಜೀವಿಗಳು ಎಂದರು.

ಡಿಗ್ರಿ ಪಡೆದು, ಡಾಕ್ಟರೇಟ್ ಪಡೆದರೂ ಅವರಲ್ಲಿ ವೈಜ್ಞಾನಿಕ ಮನೋಭಾವ, ವೈಚಾರಿಕತೆ ಬೆಳೆಯದಿದ್ದರೆ, ತಲೆಯೊಳಗೆ ಮೌಢ್ಯ ತುಂಬಿಕೊಂಡಿದ್ದರೆ ಅವರನ್ನು ಸುಶಿಕ್ಷಿತರು ಎಂದು ಕರೆಯಲು ಸಾಧ್ಯವಿಲ್ಲ. ಡಿಗ್ರಿ ಪಡೆದವರೇ ಹೆಚ್ಚೆಚ್ವು ಜಾತಿವಾದಿಗಳಾದರೆ ಈ ಚಂದಕ್ಕೆ ಶಿಕ್ಷಣ ಏಕೆ ಪಡೆಯಬೇಕು ಎಂದು ಪ್ರಶ್ನಿಸಿದರು.

ಶೂದ್ರರು ಮತ್ತು ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ಹೊರಗೆ ಇಡಲಾಗಿತ್ತು. ನಮ್ಮ ಸಂವಿಧಾನ ಎಲ್ಲರಿಗೂ ಶಿಕ್ಷಣದ ಅವಕಾಶವನ್ನು ಒದಗಿಸಿತು. ಈಗ ಈ ಸಂವಿಧಾನಕ್ಕೆ ಅಪಾಯ ಬಂದೊದಗಿದೆ. ಆದ್ದರಿಂದ ಸಂವಿಧಾನವನ್ನು ರಕ್ಷಿಸಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು

ಸ್ವಾತಂತ್ರ್ಯ ಬಂದು 76 ವರ್ಷವಾದರೂ ಶೇಕಡಾ ನೂರರಷ್ಟು ಸಾಕ್ಷರತೆ ಸಾಧ್ಯವಾಗಿಲ್ಲ. ಶಿಕ್ಷಣದಿಂದ ವಂಚಿತರಾದವರು ಅಸಮಾನತೆಗೆ ಬಲಿಯಾಗುತ್ತಾರೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸಾಗಬೇಕಾದರೆ ಎಲ್ಲರಿಗೂ ವೈಜ್ಞಾನಿಕ, ವೈಚಾರಿಕ ಶಿಕ್ಷಣ ದೊರೆತು ದೇಶ ಪ್ರಗತಿ ಪಥದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.

ನಮ್ಮ ಸರ್ಕಾರ ಬಂದ ಬಳಿಕ 10 ಸಾವಿರ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಿದ್ದೂ ಸೇರಿ ಹಲವು ಕಾರ್ಯಕ್ರಮ ಮಾಡಿದೆವು. ಪರಿಶಿಷ್ಟ ಜಾತಿ, ವರ್ಗದ ಮಕ್ಕಳಿಗೆ ನಾವು ನಮ್ಮ ಸರ್ಕಾರದ ಅವಧಿಯಲ್ಲಿ ಲ್ಯಾಪ್ಟಾಪ್ ನೀಡುವ ಕಾರ್ಯಕ್ರಮ ಆರಂಭಿಸಿದೆವು. ನಂತರ ಬಂದ ಸರ್ಕಾರ ಇದನ್ನು ಸ್ಥಗಿತಗೊಳಿಸಿತ್ತು. ಈಗ ಮತ್ತೆ ನಾವು ಅಧಿಕಾರಕ್ಕೆ ಬಂದು ಲ್ಯಾಪ್ಟಾಪ್ ಕೊಡುವುದನ್ನು ಮುಂದುವರೆಸಿದ್ದೇವೆ ಎಂದರು.

ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳಿಗೆ ಶೇ. 80ರಷ್ಟು ಮಕ್ಕಳು ತಳಸಮುದಾಯದಿಂದ ಬರುತ್ತಾರೆ. ಅವರ ಓದಿಗೆ ಅನುಕೂಲ ಆಗಲಿ ಎನ್ನುವ ಕಾರಣದಿಂದ ಕ್ಷೀರಭಾಗ್ಯ ಯೋಜನೆ ಜಾರಿ ಮಾಡಿದೆವು. ವಾರಕ್ಕೆರಡು ಮೊಟ್ಟೆ ಕೊಡುವುದನ್ನು 10 ನೇ ತರಗತಿವರೆಗೂ ಮುಂದುವರೆಸಿದೆವು. ಶೂ ಭಾಗ್ಯ ಕಲ್ಪಿಸಿದೆವು ಎಂದರು.

ಶಿಕ್ಷಕರು ನಿರಂತರ ಅಭ್ಯಾಸದ ಮೂಲಕ ಜ್ಞಾನಾರ್ಜನೆ ಮಾಡಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು. ವಿದ್ಯಾರ್ಥಿಗಳನ್ನು ಶಿಕ್ಷಕರು ನೆನಪಿನಲ್ಲಿಟ್ಟುಕೊಳ್ಳದೇ ಇದ್ದರೂ ವಿದ್ಯಾರ್ಥಿಗಳು ಮರೆಯುವುದಿಲ್ಲ. ತಮ್ಮ ಊರಿಗೆ ರಾಜಪ್ಪ ಅವರು ಮುಖ್ಯ ಶಿಕ್ಷಕರಾಗಿ ಬರದೇ ಇದ್ದರೆ ತಾವು ಶಾಲೆಗೆ ಸೇರಲಾಗುತ್ತಿರಲಿಲ್ಲ. ಓದಿ ವಿದ್ಯಾವಂತನಾಗಿ, ಈಗ ಮುಖ್ಯಮಂತ್ರಿಯಾಗಲೂ ಸಾಧ್ಯವಾಗುತ್ತಿರಲಿಲ್ಲ ಎಂದರು.

ಸಮಾನತೆ, ವೈಚಾರಿಕತೆ, ವೈಜ್ಞಾನಿಕ ಮನೋಭಾವ ಕಲಿಸುವ ಶಿಕ್ಷಣ ನೀಡುವ ಅಗತ್ಯವಿದೆ. ಮಕ್ಕಳಿಗೆ ಸಾಂವಿಧಾನದ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

Leave a Reply