ಮೈಸೂರು: ಚುನಾವಣೆಗೆ ಮುನ್ನ ಜನರಿಗೆ ನೀಡಿದ ಪ್ರಣಾಳಿಕೆಗಳ ಭರವಸೆ ಈಡೇರಿಸುವುದು ರಾಜ್ಯಧರ್ಮ. ಅದನ್ನು ನಾವು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ನಾವು ಈ ಹಿಂದೆಯೂ ನುಡಿದಂತೆ ನಡೆದಿದ್ದೇವೆ. ಈಗಲೂ ಅದನ್ನು ಮಾಡುತ್ತಿದ್ದೇವೆ. ಮುಂದೆಯೂ ಎಲ್ಲ ಭರವಸೆಗಳನ್ನೂ ಈಡೇರಿಸುವ ವಿಶ್ವಾಸ ನಮಗಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಎಲ್ಲವನ್ನೂ ಈಡೇರಿಸುತ್ತೇವೆ ಎಂದರು.
ಗ್ಯಾರಂಟಿಗಳನ್ನು ಜಾರಿ ಮಾಡಲಾಗಲ್ಲ, ಮಾಡಿದರೆ ಕರ್ನಾಟಕ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಹೇಳಿದ್ದರು. ಈಗ ನಾವು ನಾಲ್ಕು ಗ್ಯಾರಂಟಿ ಜಾರಿ ಮಾಡಿದ್ದೇವೆ. ಯುವನಿಧಿ ಡಿಸೆಂಬರ್ ಅಥವಾ ಜನವರಿಗೆ ಜಾರಿ ಆಗಲಿದೆ ಎಂದು ತಿಳಿಸಿದರು.
ಗ್ಯಾರಂಟಿಗಳನ್ನು ಜಾರಿ ಮಾಡಲಾಗಲ್ಲ, ಮಾಡಿದರೆ ಕರ್ನಾಟಕ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಹೇಳಿದ್ದರು. ಈಗ ನಾವು ನಾಲ್ಕು ಗ್ಯಾರಂಟಿ ಜಾರಿ ಮಾಡಿದ್ದೇವೆ. ಗ್ಯಾರಂಟಿಗಳಿಗೆ ವರ್ಷಕ್ಕೆ ₹ 56 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಕಾಂಗ್ರೆಸ್ ಬಡವರು, ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಪರವಾಗಿರುವ ಪಕ್ಷ ಎಂಬುದನ್ನು ಸಾಬೀತು ಮಾಡಿದ್ದೇವೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ 1.26 ಕೋಟಿ ಕುಟುಂಬಗಳಿವೆ. ಆ ಕುಟುಂಬಗಳ ಯಜಮಾನಿಯಾರಿಗೆ 2000 ರೂ.ಗಳನ್ನು ಅವರ ಖಾತೆಗೆ ಇಂದು ಜಮಾ ಮಾಡಲಾಗಿದೆ. ಈ ಯೋಜನೆಗೆ 1.10 ಕೋಟಿ ಜನ ನೋಂದಾಯಿಸಿಕೊಂಡಿದ್ದಾರೆ. ಇಡೀ ಭಾರತದಲ್ಲಿ ಯಾವ ರಾಜ್ಯವೂ ತೊಂದರೆಯಲ್ಲಿರುವ ಜನರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಂದರೆ ವರ್ಷಕ್ಕೆ 24 ಸಾವಿರ ಹಣವನ್ನು ಬಡವರಿಗೆ ವರ್ಗಾಯಿಸಿಲ್ಲ ಎನ್ನುವುದು ಕಟುಸತ್ಯ ಎಂದು ಹೇಳಿದರು.
ಜೂನ್ 11 ರಂದು ಶಕ್ತಿ ಯೋಜನೆ ಜಾರಿಯಾಗಿದ್ದು, 48,500 ಕೋಟಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಕಾರ್ಯಕ್ರಮವನ್ನು ಜುಲೈ 10 ರಂದು ಜಾರಿಗೆ ತಂದೆವು. ಕೇಂದ್ರ ಸರ್ಕಾರ ಅಕ್ಕಿಯನ್ನು ನೀಡದೇ ಹೋದರೂ ನಾವು 170 ರೂ.ಗಳನ್ನು ಅಕ್ಕಿ ಸಿಗುವವರೆಗೂ ಪ್ರತಿ ಬಿಪಿಎಲ್, ಅಂತ್ಯೋದಯ ಕಾರ್ಡುದಾರರ ಖಾತೆಗೆ ಜಮಾ ಮಾಡಿದ್ದೇವೆ ಎಂದರು.




