ಮಳೆಗಾಲದಲ್ಲಿ ವಾಡಿಕೆಯಂತೆ ಮಳೆ ಬಂದು ನಮ್ಮ ರಾಜ್ಯದ ನದಿಗಳು ತುಂಬಿ ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಹೋದಾಗ ಯಾವ ಸಮಸ್ಯೆಯು ಇರುವುದಿಲ್ಲ. ಮಳೆ ಕಡಿಮೆಯಾಗಿ ನದಿಪಾತ್ರದಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿ ಬರಗಾಲ ಆವರಿಸಿದ ಸಂದರ್ಭದಲ್ಲಿ ತಮಿಳುನಾಡು ತನ್ನ ಪಾಲಿನ ನೀರಿಗಾಗಿ ನ್ಯಾಯಾಲಯದ ಮೊರೆಹೋಗುವುದು, ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದು ಮಾಮೂಲಿಯಾಗಿದೆ.
ತಮಿಳುನಾಡು ಸರ್ಕಾರ ತನ್ನ ಪಾಲಿನ ನೀರನ್ನು ಬಳಸಿಕೊಂಡು ಹೊಗೆನಕಲ್ನಲ್ಲಿ ಡ್ಯಾಂ ಕಟ್ಟಿಕೊಂಡು ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ರೂಪಿಸಿದೆ. ಅದೇ ರೀತಿಯಲ್ಲಿ ಕರ್ನಾಟಕ ಮೇಕೆದಾಟು ಅಣೆಕಟ್ಟನ್ನು ನಿರ್ಮಾಣ ಮಾಡಿ ಹೆಚ್ಚಿನ ಮಳೆಯಾದ ಸಂದರ್ಭದಲ್ಲಿ ಸಮುದ್ರದ ಪಾಲಾಗುವ ನೀರನ್ನು ಸಂಗ್ರಹಿಸಿಟ್ಟುಕೊಂಡು ಕುಡಿಯುವ ನೀರಿಗೆ ಬಳಸಿಕೊಳ್ಳಲು ಅನುಮತಿಯನ್ನು ಕೇಳಿದೆ.
ತಮಿಳುನಾಡು ಸರ್ಕಾರ ಈ ವಿಚಾರದಲ್ಲಿ ಅನಗತ್ಯವಾದ ತಕರಾರು ತೆಗೆದಿರುತ್ತದೆ. ಮೇಕೆದಾಟು ಯೋಜನೆ ಅನುಷ್ಠಾನವಾದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹ ಮಾಡಿ ಸಂಕಷ್ಟದ ಸಮಯದಲ್ಲಿ ತಮಿಳುನಾಡಿಗೆ ಕೊಡಬಹುದಾದ ನೀರನ್ನು ಕೊಡಬಹುದು. ಬೆಂಗಳೂರು ಸೇರಿದ ಅನೇಕ ಭಾಗಗಳ ಕುಡಿಯುವ ನೀರಿನ ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳಬಹುದು. ಸದ್ಯದ ಕಾವೇರಿ ಸಮಸ್ಯೆಗೆ ಇದೊಂದೆ ಶಾಶ್ವತ ಪರಿಹಾರವಾಗಿರುತ್ತದೆ.
ಮಳೆ ಅಧಿಕವಾದ ಸಂದರ್ಭದಲ್ಲಿ ಯಾರಿಗೂ ಉಪಯೋಗವಿಲ್ಲದೆ ಸಮುದ್ರದ ಪಾಲಾಗುವ ನೀರನ್ನು ಸಂಗ್ರಹಿಸಲು ಕರ್ನಾಟಕ ರೂಪಿಸಿರುವ ಯೋಜನೆಗೆ ತಮಿಳುನಾಡು ಸಹಮತವನ್ನು ನೀಡಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ರೀತಿಯಲ್ಲಿ ದೊಡ್ಡತನ ತೋರಿಸಿಬೇಕು. ಪ್ರಕೃತಿ ಮುನಿಸಿಕೊಂಡರೆ ಯಾರು ತಾನೆ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿದೆ?
ಕರ್ನಾಟಕ ರೈತರ ಬದುಕು ಮುಖ್ಯವಾಗುತ್ತದೆ. ಆ ಹಿನ್ನಲೆಯಲ್ಲಿ ಅನಿರ್ವಾಯವಾಗಿ ಕರ್ನಾಟಕ ತನ್ನ ಹಿತವನ್ನು ಕಾಪಾಡಿಕೊಳ್ಳಲೇಬೇಕಾಗಿದೆ. ಸುಪ್ರೀಂಕೋರ್ಟ್ ಸಹ ಕಾವೇರಿ ನೀರಿನ ಸಮಸ್ಯೆಗೆ ಪರಿಹಾರದ ಮಾರ್ಗಗಳಲ್ಲಿ ಒಂದಾಗಿರುವ ಮೇಕೆದಾಟು ಯೋಜನೆಗೆ ಅನುಮತಿಯನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶವನ್ನು ನೀಡಿ ತಮಿಳುನಾಡಿಗೆ ಮೇಕೆದಾಟು ಯೋಜನೆಯ ಅನುಷ್ಠಾನದಿಂದಾಗುವ ಸಕರಾತ್ಮಕವಾದ ಪರಿಣಾಮಗಳ ಬಗ್ಗೆ ತಿಳಿಹೇಳಲಿ.
- ಕೆ.ಎಸ್.ನಾಗರಾಜು, ಬೆಂಗಳೂರು




