ವಿಶ್ವದ 4ನೇ ರಾಷ್ಟ್ರವಾಗಿ ನಡೆಸಿದ ಯಶಸ್ವಿ ಚಂದ್ರಯಾನ ಭಾರತ ದೇಶದ ಹೆಮ್ಮೆ: ಸಿ.ಎಂ.ನರಸಿಂಹಮೂರ್ತಿ

3 years ago

#4thcountry #world #successfully #carry #out #lunar #mission #India #pride #CMNarasimhamurthy

ಚಾಮರಾಜನಗರ: ವಿಶ್ವದ 4ನೇ ರಾಷ್ಟ್ರವಾಗಿ ನಡೆಸಿದ ಯಶಸ್ವಿ ಚಂದ್ರಯಾನ ಭಾರತ ದೇಶದ ಹೆಮ್ಮೆ. ಇದಕ್ಕೆ ಶ್ರಮಿಸಿದ ಇಸ್ರೋ ವಿಜ್ಞಾನಿಗಳು ಮತ್ತು ತಂತ್ರಜ್ಞ ರನ್ನು ಭಾರತ ಸೇವಾದಳ ಅಭಿನಂದಿಸುತ್ತದೆ ಎಂದು ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಹೇಳಿದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಆವರಣದಲ್ಲಿ ಭಾರತ ಸೇವಾದಳ ಶಿಕ್ಷಣ ಇಲಾಖೆ ಸಹಾಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಶಿಕ್ಷಕ ಶಿಕ್ಷಕಿಯರ ಪುನಶ್ಚೇತನ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೇವಾದಳ ಎಂದರೆ ದೇಶಪ್ರೇಮ, ರಾಷ್ಟ್ರಭಕ್ತಿ, ಶಿಸ್ತು, ತ್ಯಾಗ ಎಂದೇ ಅರ್ಥ. ಸೇವಾದಳದ ಚಟುವಟಿಕೆಗಳು ಹೆಚ್ಚುತ್ತಾ ಹೋಗಬೇಕು. ಇದರಿಂದ ಸಮಾಜದಲ್ಲಿ ಭಾವೈಕ್ಯತೆ ಮೂಡುತ್ತದೆ. ಮಕ್ಕಳಲ್ಲಿ ಸಮಾನತೆ, ಸಹಬಾಳ್ವೆಯನ್ನು ಸೇವಾದಳ ಕಲಿಸುತ್ತದೆ ಎಂದರು.

ನವೆಂಬರ್ ತಿಂಗಳಿನಲ್ಲಿ ಮಕ್ಕಳ ಹಬ್ಬ ಅಂಗವಾಗಿ ಚಾಮರಾಜನಗರದಲ್ಲಿ ಭಾರತ ಸೇವಾದಳದ ಮಕ್ಕಳ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪ ನಿರ್ದೇಶಕ ಕಾಶೀನಾಥ್ ಮಾತನಾಡಿ, ಡಾ.ನಾ.ಸು.ಹರಡೀಕರ್ ಸ್ಥಾಪಿಸಿದ ಭಾರತ ಸೇವಾದಳವು ಸೇವೆಗಾಗಿ ಬಾಳು ಧ್ಯೇಯ ವಾಕ್ಯದೊಂದಿಗೆ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಮತ್ತು ಮಾನವೀಯತೆ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ. ಎಳೆಯ ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯತೆಯ ಸಂದೇಶವನ್ನು ತುಂಬಿ ಅವರನ್ನು ಭಾರತದ ಆದರ್ಶ ನಾಗರಿಕರನ್ನಾಗಿ ಪರಿವರ್ತಿಸುವಲ್ಲಿ ಭಾರತ ಸೇವಾದಳದ ಕಾರ್ಯ ಅನುಪಮವಾದದ್ದು ಎಂದರು.

ಕಾರ್ಯಾಗಾರದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮೋಹನ್ ಕುಮಾರ, ಭಾರತ ಸೇವಾದಳದ ತಾಲೂಕು ಕಾರ್ಯದರ್ಶಿ ನಾಗರಾಜ್, ಕೋಶಾಧ್ಯಕ್ಷ ಪ್ರಸಾದ್ ಅಧಿನಾಯಕ ನಾಗಣ್ಣ, ಶಾಖಾ ನಾಯಕಿ ಜ್ಯೋತಿ, ಜಿಲ್ಲಾ ಸಂಘಟಕ ಈ.ಅರುಣ್ ಹಾಗೂ ತಾಲೂಕಿನ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು.

ಕಾರ್ಯಾಗಾರದಲ್ಲಿ ಹಲವು ವಿಚಾರಗಳ ಬಗ್ಗೆ ಶಿಕ್ಷಕ ಶಿಕ್ಷಕಿಯರು ಚರ್ಚಿಸಿದರು. ಮೊದಲಿಗೆ ಭಾರತ ಸೇವಾದಳದ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಗಾರ ಆರಂಭವಾಗಿ ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.

Leave a Reply