ವಿಜಯಪುರ: ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವುದು ಕಾಂಗ್ರೆಸ್ ನ ಆದ್ಯತೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಮೂಲಕ ನುಡಿದಂತೆ ನಡೆದ ಹೆಗ್ಗಳಿಕೆ ನಮ್ಮದಾಗಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ವಿಜಯಪುರದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ 4.60 ಲಕ್ಷ ಕುಟುಂಬಗಳಲ್ಲಿ 4.34 ಲಕ್ಷ ಕುಟುಂಬಗಳಿಗೆ ಈ ಯೋಜನೆಯ ಲಾಭ ಸಿಕ್ಕುತ್ತಿದೆ. ಅಂದರೆ, ಒಟ್ಟು ಶೇಕಡ 99.5ರಷ್ಟು ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆ ತಲುಪುತ್ತಿದೆ. ಜಿಲ್ಲೆಯಲ್ಲಿ ಕೇವಲ 24 ಸಾವಿರ ಕುಟುಂಬಗಳು ಮಾತ್ರ ಈ ಯೋಜನೆಯ ವ್ಯಾಪ್ತಿಗೆ ಬರುತ್ತಿಲ್ಲ. ಇದರಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಕುಟುಂಬಗಳು ಎರಡು ಸಾವಿರ ಮಾತ್ರ ಎಂದು ಅಂಕಿಅಂಶ ನೀಡಿದರು.
ಹಿಂದೆ ಮನಮೋಹನ್ ಸಿಂಗ್ ಅವರ ಸರಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇದ್ದ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿತು. ಆದರೆ ಬಿಜೆಪಿ ಸರಕಾರ ಬಂದಮೇಲೆ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ದಿನಸಿ ಪದಾರ್ಥಗಳ ಬೆಲೆ ಎಲ್ಲವೂ ದುಪ್ಪಟ್ಟಾಗಿದೆ ಎಂದರು.
ಕಾಂಗ್ರೆಸ್ ಮಾತ್ರ ಯಾವಾಗಲೂ ಬಡವರ ಪರವಾಗಿ ಕೆಲಸ ಮಾಡುತ್ತ ಬಂದಿದೆ. ಚುನಾವಣೆಗೆ ಮೊದಲು ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ಮೂರು ಯೋಜನೆಗಳು ಜಾರಿಗೆ ಬಂದಿವೆ. ಗೃಹಲಕ್ಷ್ಮಿ ಯೋಜನೆಗೆ ಆ.15ರಂದು ಚಾಲನೆ ನೀಡಲಾಗುವುದು. ಯುವನಿಧಿ ಗ್ಯಾರಂಟಿ ಕೂಡ ಇನ್ನು ಕೆಲವೇ ತಿಂಗಳಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂದರು.
ಗ್ಯಾರಂಟಿಗಳ ಜಾರಿಯಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ರಾಜಕೀಯ ವಿರೋಧಿಗಳು ಟೀಕಿಸುತ್ತಿದ್ದಾರೆ. ಹಿಂದೆ ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ 10 ಎಚ್ಪಿವರೆಗಿನ ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಕೊಡಲಾಗುತ್ತಿತ್ತು. ಆದರೆ ಕೇಂದ್ರದ ಬಿಜೆಪಿ ಸರಕಾರ ಕೆಲವೇ ಕೆಲವು ಉದ್ಯಮಿಗಳ 23 ಲಕ್ಷ ಕೋಟಿ ರೂ. ಸಾಲವನ್ನು ಮನ್ನ ಮಾಡಿವೆಯಷ್ಟೆ. ಇದರಿಂದ ದೇಶ ದಿವಾಳಿಯಾಗುವುದಿಲ್ಲವೇ? ಎಂದು ಕೇಳಿದರು.
ಮೋದಿ ಅಚ್ಛೇ ದಿನ್ ಬಗ್ಗೆ ಮಾತನಾಡುತ್ತಿದ್ದರು. ಆದರೆ ಜನರ ಬದುಕು ದುಸ್ತರವಾಗುತ್ತಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು. ಆದರೆ ಅದು ಕನಸಾಗಿಯೇ ಉಳಿದಿದೆ. ಸ್ವಿಟ್ಜರ್ಲೆಂಡ್ನಿಂದ ಕಪ್ಪು ಹಣ ತರುವುದಾಗಿ ಹೇಳಿದ್ದರು. ದೇಶದ ಜನರಿಗೆ ಪಡಿತರ ಕಾರ್ಡು, ಪಿಂಚಣಿ, ವೃದ್ಧಾಪ್ಯ ವೇತನ ಜಾರಿಗೆ ತಂದ ಕೀರ್ತಿ ನೆಹರು, ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿ ಅವರಿಗೆ ಸಲ್ಲುತ್ತದೆ. ಗ್ಯಾರಂಟಿಗಳ ಜಾರಿಗೆ ಈ ವರ್ಷ ಅಗತ್ಯವಾಗಿರುವ 37 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಒಟ್ಟಿನಲ್ಲಿ ನಾವು ನುಡಿದಂತೆ ನಡೆದಿದ್ದೇವೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವೃಥಾ ವರ್ಗಾವಣೆ ದಂಧೆಯ ಆರೋಪ ನಡೆಸುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗಲೂ ವರ್ಗಾವಣೆಗಳಾಗುತ್ತಿದ್ದವು. ಎಷ್ಟೋ ಸಲ ಅವಕ್ಕೆ ತಡೆಯೂ ಬೀಳುತ್ತಿತ್ತು. ಅವರ ಸರಕಾರದಲ್ಲಿ ನಾನೇ ಗೃಹ ಸಚಿವನಾಗಿದ್ದೆ. ಇವೆಲ್ಲ ಆಡಳಿತಾತ್ಮಕ ವಿಷಯಗಳಾಗಿವೆ. ಅವರು ತಮ್ಮ ಬಳಿ ಪೆನ್ಡ್ರೈವ್ ಇವೆ ಎಂದರು. ಆದರೆ ಆಮೇಲೆ ಏನಾಯಿತು. ಕಾಂಗ್ರೆಸ್ ಸರಕಾರವನ್ನು ಅಲುಗಾಡಿಸಲು ಯಾರಿಗೂ ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಅಶೋಕ ಮನಗೂಳಿ ಮುಂತಾದವರು ಉಪಸ್ಥಿತರಿದ್ದರು.




