ವಿಪಕ್ಷಗಳ ನಾಯಕರ ಆತಿಥ್ಯ ವಿವಾದ: ಸದನದಲ್ಲಿ ಕೋಲಾಹಲ

3 years ago

#Leaders #Opposition #Hospitality #Controversy #Uproar #House

ಬೆಂಗಳೂರು: ಪ್ರತಿಪಕ್ಷ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ನಾಯಕರ ಆತಿಥ್ಯ ಉಸ್ತುವಾರಿಗೆ ಐಎಎಸ್‌ ಅಧಿಕಾರಿಗಳನ್ನು ನಿಯೋಜಿಸಿದ್ದ ವಿಷಯ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಜಟಾಪಟಿ ನಡೆದು ಕೋಲಾಹಲಕ್ಕೆ ಕಾರಣವಾಯಿತು.

ರಾಜಕೀಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರಿಗೆ ಐಎಎಸ್ ಅಧಿಕಾರಿಗಳಿಗೆ ಆತಿಥ್ಯ ನೀಡಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿ ಧರಣಿ ನಡೆಸಿದರೆ, ಹೊರರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯರಿಗೆ ಶಿಷ್ಟಾಚಾರದ ಪ್ರಕಾರ ರಾಜ್ಯದ ಆತಿಥ್ಯ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿದರು.

ಕಲಾಪ ಆರಂಭವಾಗುತ್ತಿದ್ದಂತೆ ಈ ವಿಷಯ ಪ್ರಸ್ತಾಪಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿಷ್ಟಾಚಾರದ ಹೆಸರಲ್ಲಿ ರಾಜ್ಯ ಸರ್ಕಾರ ಉನ್ನತ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ, ಸರ್ಕಾರ ಕ್ಷಮೆ ಕೇಳಬೇಕೆಂದು  ಒತ್ತಾಯಿಸಿದರು.

ಬೆಂಗಳೂರಿನಲ್ಲಿ ರಾಜಕೀಯ ಕಾರ್ಯಕ್ರಮ ನಡೆದಿರುವುದು ಮೊದಲ ಬಾರಿಯಲ್ಲ. ಆದರೂ ಯಾವುದೇ ಕಾರ್ಯಕ್ರಮಕ್ಕೆ ಐಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿ ದುರ್ಬಳಕೆ ಮಾಡಿಕೊಂಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಪ್ರಧಾನ ಕಾರ್ಯದರ್ಶಿ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿದರು.

ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೊರರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯರಿಗೆ ಶಿಷ್ಟಾಚಾರದ ಪ್ರಕಾರ ರಾಜ್ಯದ ಆತಿಥ್ಯ ನೀಡಿದ್ದೇವೆ ಎಂದು ಸಮರ್ಥಿಸಿದರು. ರಾಜಕೀಯಕ್ಕಾಗಿ ಬಿಜೆಪಿ, ಜೆಡಿಎಸ್ ಶಾಸಕರು ಧರಣಿ ಮಾಡುತ್ತಿದ್ದಾರೆ. ಇದಕ್ಕೆ ನಾವು ಸೊಪ್ಪು ಹಾಕುವುದಿಲ್ಲ. ಮೊದಲಿನಿಂದಲೂ ಶಿಷ್ಟಾಚಾರದ ಪ್ರಕಾರ ರಾಜ್ಯದ ಆತಿಥ್ಯ ನಡೆದುಕೊಂಡು ಬಂದಿದೆ. ಆದರೂ ಐಎಎಸ್ ಅಧಿಕಾರಿಗಳನ್ನು ಆತಿಥ್ಯಕ್ಕೆ ನಿಯೋಜಿಸಿದ್ದಾರೆ ಎಂದು ಆರೋಪಿಸಿ ಸದನದಲ್ಲಿ ಗದ್ದಲ ಎಬ್ಬಿಸುತ್ತಿದ್ದಾರೆ. ಈ ಬೆದರಿಕೆಗೆ ನಾವು ಹೆದರುವುದಿಲ್ಲ ಎಂದರು.

ಉತ್ತಮ ಬಜೆಟ್‍ ಅನ್ನು ಮಂಡನೆ ಮಾಡಿದ್ದು, ಅದರ ಬಗ್ಗೆ ಚರ್ಚೆ ಮಾಡಲು ವಿರೋಧ ಪಕ್ಷಗಳಿಗೆ ಏನೂ ಉಳಿದಿಲ್ಲ. ರಾಜಕೀಯಕ್ಕಾಗಿ ಗದ್ದಲ ಎಬ್ಬಿಸುತ್ತಿದ್ದಾರೆ. ಇವರಿಗೆ ಮಾನ-ಮರ್ಯಾದೆ ಇಲ್ಲ ಎಂದಾಗ, ಏರಿದ ದನಿಯಲ್ಲಿ ಪ್ರತಿಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಆಡಳಿತ ಪಕ್ಷದ ಸದಸ್ಯರು ಆಕ್ಷೇಪಿಸಿ ಮಾತನಾಡಿದ ಸದನದಲ್ಲಿ ಗದ್ದಲ, ಗೊಂದಲ ಉಂಟಾಯಿತು.

ಇದರ ನಡುವೆ ಮಾತನಾಡಿದ ಬೊಮ್ಮಾಯಿ, ಶಿಷ್ಟಾಚಾರದ ಪ್ರಕಾರ ಸಂಸದರು, ಶಾಸಕರಿಗೆ ಆತಿಥ್ಯ ನೀಡಲು ಅಧಿಕಾರಿಗಳನ್ನು ನಿಯೋಜಿಸಬಹುದು. ಆದರೆ, ಸಂಜಯ್ ಯಾದವ್, ಖಾದರ್ ಮೊಹಿದ್ದೀನ್, ರೇಣುಕಾ ದೇವಿ, ದೇವರಾಜನ್, ಪಿ.ಜೆ.ಜೋಸೆಫ್, ಕೃಷ್ಣ ಪಟೇಲ್ ಇವರಾರೂ ಕೂಡ ಶಾಸಕರು, ಸಂಸದರಲ್ಲ. ಅವರ ರಾಜ್ಯಗಳಲ್ಲೇ ಕೇಳುವವರಿಲ್ಲ. ಪುಡಿ ಪಾರ್ಟಿ ಅಧ್ಯಕ್ಷರಿಗೆ ರಾಜ ಆತಿಥ್ಯ ನೀಡಲಾಗಿದೆ. ರಾಜ್ಯದ ಮಾನಮರ್ಯಾದೆ ಹರಾಜಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ತಾರಕಕ್ಕೇರಿದ ಪರಿಣಾಮ ಸಭಾಧ್ಯಕ್ಷ ಖಾದರ್ ಕಲಾಪವನ್ನು ಅಲ್ಪಕಾಲಾವಧಿಗೆ ಮುಂದೂಡಿದರು. ಮತ್ತೆ ಸದನ ಸಮಾವೇಶಗೊಂಡಾಗ ಪ್ರತಿಪಕ್ಷ ಸದಸ್ಯರ ಧರಣಿ ಮುಂದುವರೆಯಿತು. ಗದ್ದಲದ ಮಧ್ಯದಲ್ಲೇ ಐದು ಮಸೂದೆಗಳನ್ನು ಅಂಗೀಕರಿಸಲಾಯಿತು. ಶಂಕಿತ ಉಗ್ರರನ್ನು ಬಂಧಿಸಿರುವ ಕುರಿತು ಗೃಹ ಸಚಿವ ಜಿ.ಪರಮೇಶ್ವರ ಹೇಳಿಕೆಯನ್ನೂ ನೀಡಿದರು. ನಂತರ ಪೀಠದಿಂದ ಎದ್ದ ಸಭಾಧ್ಯಕ್ಷ ಯು.ಟಿ. ಖಾದರ್, ಕಲಾಪ ನಡೆಸುವಂತೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರಿಗೆ ಸೂಚಿಸಿದರು.

ಉಪ‌ ಸಭಾಧ್ಯಕ್ಷರು ಪೀಠದಲ್ಲಿದ್ದಾಗ ಕಾಂಗ್ರೆಸ್ ನ ಪಿ.ಎಂ. ನರೇಂದ್ರಸ್ವಾಮಿ ಬಜೆಟ್ ಮೇಲೆ ಚರ್ಚೆ ಆರಂಭಿಸಿದರು. ಕಾಂಗ್ರೆಸ್ ಇಚ್ಛೆಯಂತೆ ಕಲಾಪ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಬಿಜೆಪಿ ಸದಸ್ಯರು ಮಸೂದೆಗಳ ಪ್ರತಿಗಳನ್ನು ಹರಿದು ಸಭಾಧ್ಯಕ್ಷರ ಪೀಠದತ್ತ ತೂರಿದರು. ಪೀಠದಲ್ಲಿದ್ದ ಉಪ ಸಭಾಧ್ಯಕ್ಷರ ಮುಖ, ಮೈ ಮೇಲೂ ಹಾಳೆಗಳು ಬಿದ್ದವು.

ಬಿಜೆಪಿ ಸದಸ್ಯರ ವರ್ತನೆಯನ್ನು ಕಾಂಗ್ರೆಸ್ ಸದಸ್ಯರು ವಿರೋಧಿಸಿದರು. ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಧರಣಿನಿರತ ಬಿಜೆಪಿ ಸದಸ್ಯರನ್ನು ಸದನದಿಂದ ಹೊರ ಹಾಕುವಂತೆ ಉಪ ಸಭಾಧ್ಯಕ್ಷರು ಮಾರ್ಷಲ್ ಗಳಿಗೆ ಸೂಚಿಸಿದರು. ಗದ್ದಲ ಇನ್ನೂ ಜೋರಾಯಿತು. ಬಿಜೆಪಿ ಸದಸ್ಯರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಉಪ ಸಭಾಧ್ಯಕ್ಷರು ಕಲಾಪವನ್ನು ಕೆಲ ಕಾಲ ಮುಂದೂಡಿದರು.

Leave a Reply