ಬೆಂಗಳೂರು: ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಜೈನಮುನಿ ನಂದಿ ಕಾಮಕುಮಾರ ಸ್ವಾಮೀಜಿ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪ್ರಕಟಿಸಿದರು.
ವಿಪಕ್ಷಗಳ ಧರಣಿ ನಡುವೆಯೇ ಜೈನಮುನಿಗಳ ಹತ್ಯೆ ಪ್ರಕರಣದ ಬಗ್ಗೆ ಹೇಳಿಕೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜೈನ ಮುನಿಗಳು ನಾಪತ್ತೆಯಾಗಿ ಕೊಲೆಯಾದ ಪ್ರಕರಣದ ಬಗ್ಗೆ ವಿವರ ನೀಡಿದರು.
ಕಳೆದ ಜುಲೈ 6ರಂದು ಬೆಳಗ್ಗೆಯಿಂದ ನಂದಿ ಕಾಮಕುಮಾರ ಸ್ವಾಮಿಗಳು ಆಶ್ರಮದಲ್ಲಿ ಕಾಣಸಿಗಲಿಲ್ಲ. ಆಗ ಆತಂಕಗೊಂಡ ಭಕ್ತರು ಎಲ್ಲ ಕಡೆ ಹುಡುಕಿದರೂ ಮುನಿಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಚಿಕ್ಕೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದರು. ಶುಕ್ರವಾರ ರಾತ್ರಿ ಪೊಲೀಸರು ಶಂಕಿತ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಆರೋಪಿಗಳು ರಾಯಬಾಗ ತಾಲೂಕಿನ ಕಟಕಬಾವಿ ಗ್ರಾಮದ ಹೊರವಲಯದ ಬೋರ್‌ವೆಲ್‌ನಲ್ಲಿ ಜೈನ ಮುನಿಗಳ ಶವ ಎಸೆದಿರುವುದಾಗಿ ಮಾಹಿತಿ ನೀಡಿದ್ದರು. ಹೀಗಾಗಿ ಪೊಲೀಸರು ರಾತ್ರಿಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದರು. ಜೈನ ಮುನಿಗಳ ದೇಹದ ತುಂಡುಗಳನ್ನು ಬಟ್ಟೆಯಲ್ಲಿ ಕಟ್ಟಿ ತೆರೆದ ಕೊಳವೆ ಬಾವಿಯಲ್ಲಿ ಆರೋಪಿಗಳು ಎಸೆದಿದ್ದರು. 20 ಅಡಿ ಆಳದಲ್ಲಿ ಶವದ ಭಾಗಗಳು ಪತ್ತೆಯಾಗಿತ್ತು. ಜೈನ ಮುನಿಯನ್ನು ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ತಿಳಿಸಿದರು.
ಆದರೆ ಹತ್ಯೆ ಪ್ರಕರಣದಲ್ಲಿ ಬೇರೆ ಆಯಾಮ ಇದೆ. ಈ ಹಿನ್ನೆಲೆಯಲ್ಲಿ ಇದನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿತ್ತು. ಆದರೆ ಇದೀಗ ಸರ್ಕಾರ ಸಿಐಡಿ ತನಿಖೆಗೆ ನೀಡಲು ನಿರ್ಧಾರ ಮಾಡಿದೆ ಎಂದು ತಿಳಿಸಿದರು.



