ಬೆಂಗಳೂರು: ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಹೊಸದಾಗಿ 14,163 ಮಂದಿಯನ್ನು ರೌಡಿ ಶೀಟರ್ ಪಟ್ಟಿಗೆ ಸೇರಿಸಿರುವುದು ಸೇರಿದಂತೆ ಒಟ್ಟಾರೆ 45,149 ರೌಡಿ ಶೀಟರ್ಗಳಿದ್ದಾರೆ. ಇವರ ಮಾಹಿತಿ ಗೌಪ್ಯ ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಬಿಜೆಪಿಯ ಅರವಿಂದಕುಮಾರ್ ಅರಳಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರೌಡಿಶೀಟರ್ಗಳ ಪಟ್ಟಿಯನ್ನು ತೆಗೆಯುವುದು ಮತ್ತು ಅಳಿಸಿ ಹಾಕುವ ಪ್ರಕ್ರಿಯೆ ಕಾಲ ಕಾಲಕ್ಕೆ ನಡೆಯುತ್ತಲೇ ಇರುತ್ತದೆ. ರೌಡಿಶೀಟರ್ ಪಟ್ಟಿ ತೆರೆಯುವಾಗ ಯಾವುದೇ ಜಾತಿ, ಧರ್ಮ ನೋಡುವುದಿಲ್ಲ. ರೌಡಿ ಆಗಿದ್ದರೆ ರೌಡಿಶೀಟರ್ ಪಟ್ಟಿ ತೆರೆಯಲಾಗುವುದು ಎಂದರು.
ರೌಡಿ ಹಿನ್ನೆಲೆ ಇರುವವರು 65 ವರ್ಷಕ್ಕಿಂತ ಹೆಚ್ಚಿನ ವಯಸ್ಸಾಗಿದ್ದವರು ಅಥವಾ ಮರಣ ಹೊಂದಿದ್ದರೆ, ಅಂಗವಿಕಲ ಅಥವಾ ಮಾನಸಿಕ ಅಸ್ವಸ್ಥರಾಗಿದ್ದರೆ ಅವರನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಡಲಾಗುವುದು ಎಂದು ಅವರು ಹೇಳಿದರು.
ಬಿಜೆಪಿಯ ಪ್ರತಾಪ್ ಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ 54 ಕಾರಾಗೃಹಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಖೈದಿಗಳಿದ್ದಾರೆ. ಇಲ್ಲಿ 14,237 ಖೈದಿಗಳಿಗೆ ಅಧಿಕೃತ ಅವಕಾಶಗಳಿದ್ದು, ಸದ್ಯ ಈ ಕಾರಾಗೃಹಗಳಲ್ಲಿ 15,053 ಖೈದಿಗಳಿದ್ದಾರೆ ಎಂದರು.
ರಾಜ್ಯದಲ್ಲಿನ ಕಾರಾಗೃಹಗಳಲ್ಲಿ ಅಧಿಕೃತ ಸಾಮರ್ಥ್ಯಕ್ಕಿಂತ ಹೆಚ್ಚು ಖೈದಿಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು, ವಿಜಯಪುರ, ಮಂಗಳೂರು, ಬೀದರ್, ಅರಸೀಕೆರೆ, ವಿರಾಜಪೇಟೆ ಸೇರಿದಂತೆ ಮತ್ತಿತರ ಆರು ಕಡೆ ಬಂಧಿಖಾನೆಗಳನ್ನು ತೆರೆದು 3475 ಖೈದಿಗಳಿಗೆ ಹೆಚ್ಚಿನ ಸ್ಥಳಾವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.



