ಹಿಂದುತ್ವವಾದಿಗಳಿಗೆ ಮತ್ತೊಂದು ಹೆಣ ಸಿಕ್ಕಿದೆ. ಫಣೀಂದ್ರ ಸುಬ್ರಹ್ಮಣ್ಯರ ಕೇಸರಿ ಶಾಲಿನ ಫೋಟೋ ಹಾಕಿಕೊಂಡು ರಾಜಕೀಯ ಮಾಡಲು ಶುರು ಮಾಡಿದ್ದಾರೆ. ಫಣೀಂದ್ರ ಸುಬ್ರಹ್ಮಣ್ಯ ತನ್ನನ್ನು ನಾನು ರಾಷ್ಟ್ರೀಯವಾದಿ ಎಂದು ಕರೆಸಿಕೊಂಡಿದ್ದರೂ ಆತ ನಿಮ್ಮಂತೆ “ಮತಿಹೀನ ಹಿಂದುತ್ವವಾದಿಯಲ್ಲ”! ಯಾರನ್ನೂ ದ್ವೇಷಿಸದ, ಕೋಮುಗಲಭೆಗಳನ್ನು ಇಷ್ಟಪಡದ ಸೈಲೆಂಟ್ ರಾಷ್ಟ್ರೀಯವಾದಿಯಾಗಿದ್ದ ಫಣೀಂದ್ರ ಸುಬ್ರಹ್ಮಣ್ಯ ಯಾವತ್ತೂ ಹೆಣಗಳನ್ನು ಬಳಸಿಕೊಂಡು ಯಾವುದೇ ಧರ್ಮ, ಸಮುದಾಯವನ್ನು ಟೀಕಿಸಿದ್ದೇ ಇಲ್ಲ. ಅಂತಹ ಫಣೀಂದ್ರ ಸುಬ್ರಹ್ಮಣ್ಯನ ಹೆಣವನ್ನು ಇದೀಗ ಹಿಂದುತ್ವವಾದಿಗಳು ದ್ವೇಷದ ರಾಜಕಾರಣಕ್ಕೆ ಬಳಸುತ್ತಿದ್ದಾರೆ.
ಯುವ ಉದ್ಯಮಿ ಫಣೀಂದ್ರ ಈಗಾಗಲೇ ವೈಯುಕ್ತಿಕ ಬದುಕಿನಲ್ಲಿ ಬಹಳಷ್ಟು ನೊಂದಿದ್ದರು. ತನ್ನ ವಯೋವೃದ್ದ ತಾಯಿಯನ್ನು ತಾನೇ ನೋಡಿಕೊಳ್ಳುತ್ತಿದ್ದ. ನಡೆದಾಡಲೂ ಸಾಧ್ಯವಾಗದ ತಾಯಿಗೆ ಬೆಳಿಗ್ಗೆ ತಿಂಡಿ ಮಾಡಿಸಿ ಕೆಲಸಕ್ಕೆ ಹೊರಟರೆ ಮಗ ಮನೆಗೆ ಬಂದರಷ್ಟೆ ರಾತ್ರಿಯ ಊಟ. ಬ್ರಾಹ್ಮಣರಲ್ಲೊಂದು ಸಮಸ್ಯೆ ಇದೆ. ವೃದ್ದ ತಂದೆ ತಾಯಿಯನ್ನು ನೋಡಿಕೊಳ್ಳಲು ಕೆಲಸದ ಜನ ಸಿಗಲ್ಲ. ಕೆಲಸದ ಜನ ಸಿಕ್ಕರೂ ಮಡಿವಂತಿಕೆಯ ವೃದ್ದರಿಗೆ ಬ್ರಾಹ್ಮಣ ಮನೆ ಕೆಲಸದವರೇ ಬೇಕು. ಬ್ರಾಹ್ಮಣ ಮನೆ ಕೆಲಸದವರು ಸಿಗುವುದೇ ಕಷ್ಟ. ಹಾಗಾಗಿ ಫಣೀಂದ್ರನೇ ತನ್ನ ವೃದ್ದ ತಾಯಿಯ ಬೇಕು ಬೇಡಗಳನ್ನು ನೋಡಿಕೊಳ್ಳಬೇಕಿತ್ತು. ಆದ್ದರಿಂದ ಉಳಿದ ಹಿಂದುತ್ವವಾದಿಗಳಂತೆ ತಂದೆತಾಯಿಯನ್ನು ಹಾಸಿಗೆಯಲ್ಲೇ ಬಿಟ್ಟು ಧರ್ಮ ರಕ್ಷಣೆಗಾಗಿ ಫಣೀಂದ್ರ ಬೀದಿಗಿಳಿಯಲಿಲ್ಲ. ತಾಯಿಯ ಪಾಲನೆಯಲ್ಲೇ ಧರ್ಮವನ್ನು ಫಣೀಂದ್ರ ಕಂಡಿದ್ದ. ಇಂತಹ ಸಹೃದಯದ ಫಣೀಂದ್ರನನ್ನು ಹಿಂದುತ್ವವಾದಿಗಳು ದ್ವೇಷದ ರಾಜಕಾರಣಕ್ಕೆ ಬಳಸುತ್ತಿದ್ದಾರೆಯೇ ಹೊರತು ಫಣೀಂದ್ರನನ್ನೇ ಆಶ್ರಯಿಸಿಕೊಂಡಿರುವ ತಾಯಿಯ ಬಗ್ಗೆ ಯೋಚನೆಯನ್ನೇ ಮಾಡಲ್ಲ. ಅವರಿಗೇನಿದ್ದರೂ ಹೆಣದ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಬೇಕಷ್ಟೆ.
ಫಣೀಂದ್ರ ಎಷ್ಟು ರಾಷ್ಟ್ರೀಯವಾದಿಯೋ ಅಷ್ಟೇ ಪ್ರಗತಿಪರ ಕನ್ನಡ ಹೋರಾಟವನ್ನೂ ಬೆಂಬಲಿಸುತ್ತಿದ್ದರು. ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷರಾಗಿದ್ದ ಬೈರಪ್ಪ ಹರೀಶ್ ಕುಮಾರ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಫಣೀಂದ್ರ ಕನ್ನಡಪರ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದ. ಕಿತ್ತು ಹಾಕಲ್ಪಟ್ಟಿದ್ದ ಬಿರಿಯಾನಿ ಹೊಟೇಲ್ ನಲ್ಲಿ ಅರೆಬಿಕ್ ದೇವವಾಣಿಯನ್ನು ಬೈರಪ್ಪ ಹರೀಶ್ ಕುಮಾರ್ ಅವರು ಮರು ಅಳವಡಿಕೆ ಮಾಡಿದಾಗ “ತುಂಬಾ ಒಳ್ಳೆಯ ಕೆಲಸ ಮಾಡಿದ್ರಿ. ಇದು ನಿಜವಾದ ಕನ್ನಡತನ. ವೈಯಕ್ತಿಕ ನಂಬಿಕೆಗಳಿಗೆ ಘಾಸಿ ಮಾಡುವುದು ಹಿಂದುತ್ವವೂ ಅಲ್ಲ, ಕನ್ನಡ ಹೋರಾಟವೂ ಅಲ್ಲ. ನೀವು ಮುಸ್ಲಿಂ ವ್ಯಾಪಾರಿಗಳ ಜೊತೆ ನಿಂತು ಒಳ್ಳೆ ಕೆಲಸ ಮಾಡಿದ್ರಿ” ಎಂದು ಬೈರಪ್ಪ ಹರೀಶ್ ಕುಮಾರ್ ಅವರ ಬೆನ್ನು ತಟ್ಟಿದ್ರು.
ನೀವು ಯಾವ ವಾದಿಯೇ ಆಗಿರಿ. ಆದರೆ ಮೊದಲು ಮನುಷ್ಯನಾಗಿರಿ. ಎಡವೇ ಆಗಿರಿ, ಬಲವೇ ಆಗಿರಿ, ರಾಷ್ಟ್ರೀಯವಾದಿ ಎಂದೇ ಕರೆಸಿಕೊಳ್ಳಿ. ಅದಕ್ಕಾಗಿ ಯಾರನ್ನೂ ದ್ವೇಷಿಸಬೇಡಿ, ಯಾರನ್ನೂ ಕೊಲ್ಲಬೇಡಿ ಎಂಬ ನಿಲುವನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಫಣೀಂದ್ರ ಸುಬ್ರಹ್ಮಣ್ಯರ ಪಾರ್ಥಿವ ಶರೀರ ಇದೀಗ ಉಗ್ರ ಹಿಂದುತ್ವವಾದಿಗಳ ದ್ವೇಷದ ರಾಜಕಾರಣಕ್ಕೆ ಅಸ್ತ್ರವಾಗಿರುವುದು ವಿಪರ್ಯಾಸ.
– ನವೀನ್ ಸೂರಿಂಜೆ, ಪತ್ರಕರ್ತರು



