ಗೆಳೆಯರಾದ ಶ್ರೀಪಾದ್ ಬಟ್ ಅವರು ಸಮಾನ ಶಿಕ್ಶಣಕ್ಕಾಗಿ ನಡೆಯುವ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಈ ಬಗೆಗಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತ ಶೈಕ್ಶಣಿಕ ವಲಯದಲ್ಲಿ ನಡೆಯುವ ಯಾವುದೇ ಬಗೆಯ ತರತಮಗಳನ್ನು, ಲೋಪದೋಶಗಳನ್ನು ಗಮನಿಸುತ್ತ ಅವನ್ನು ಜನರ ಗಮನಕ್ಕೆ ತರುವ ಮೂಲಕ ಸಾಮಾಜಿಕ ಎಚ್ಚರವನ್ನು ರೂಪಿಸುವ ಕೆಲಸವನ್ನು ಮಾಡುತ್ತಲೇ ಬರುತ್ತಿದ್ದಾರೆ. ಶಿಕ್ಶಣ ಕ್ಶೇತ್ರದಲ್ಲಿನ ಅಸಮಾನತೆಯನ್ನು ಕುರಿತು ಸಾಕಶ್ಟು ಬರೆದಿದ್ದಾರೆ ಮತ್ತು ಈ ಬಗೆಗೆ ಉಪನ್ಯಾಸಗಳನ್ನೂ ನೀಡಿದ್ದಾರೆ. ಹಾಗಾಗಿ ಅವರು ಇಂದಿನ ಕರ್ನಾಟಕದ ಶಿಕ್ಶಣ ಕ್ಶೇತ್ರದ ಬಗೆಗೆ ಅಥೆಂಟಿಕ್ ಆಗಿ ಮಾತನಾಡಬಲ್ಲವರಲ್ಲಿ ಒಬ್ಬರಾಗಿದ್ದಾರೆ.
ಸದ್ಯ ಅವರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಶ್ಟಿçÃಯ ಶಿಕ್ಶಣ ನೀತಿ-೨೦೨೦(ಎನ್ ಇ ಪಿ) ಕುರಿತು ‘ಕಣ್ಕಟ್ಟು’ ಎಂಬ ಕೃತಿಯನ್ನು ಬರೆದಿದ್ದಾರೆ. ಹೊಸ ಶಿಕ್ಣಣ ನೀತಿಯಲ್ಲಿ ಹುದುಗಿರುವ ಲೋಪದೋಶಗಳು, ಕೇಂದ್ರ ಸರ್ಕಾರದ ಗುಪ್ತಕರ‍್ಯಸೂಚಿ ಕುರಿತು ವಿವರವಾಗಿ ಬರೆದಿದ್ದಾರೆ. ಸರ್ಕಾರ ಪ್ರಕಟಿಸಿರುವ ನೀತಿಯು ನಿಡುಗಾಲದಲ್ಲಿ ಉಂಟುಮಾಡಲಿರುವ ಪರಿಣಾಮಗಳನ್ನು ಕುರಿತು ಬರೆದಿದ್ದಾರೆ. ಅತ್ಯುತ್ತಮ ಗುಣಮಟ್ಟದ ಶಿಕ್ಶಣವನ್ನು ಜಾರಿಗೆ ತರುವ ಆಶಯದ ಮಾತನಾಡುತ್ತಲೇ ದೇಶದ ಶೈಕ್ಶಣಿಕ ವ್ಯವಸ್ಥೆಯನ್ನು ಖಾಸಗಿಯವರಿಗೆ ಮತ್ತು ಸನಾತನವಾದಿಗಳಿಗೆ ಹಸ್ತಾಂತರಿಸುವ ಹುನ್ನಾರವಿರುವುದನ್ನು ಚರ್ಚಿಸಿದ್ದಾರೆ.
ಹಾಗಾಗಿ ಎನ್ ಇ ಪಿ ಬಗೆಗೆ ಆಸಕ್ತಿ ಇರುವವರು, ಶಿಕ್ಶಣ ಕ್ಶೇತ್ರದ ಬಗೆಗೆ ಕಾಳಜಿಯುಳ್ಳವರು ಹಾಗೂ ಅಧ್ಯಾಪನ ವೃತ್ತಿಯಲ್ಲಿ ತೊಡಗಿರುವ ಎಲ್ಲರೂ ಈ ಕೃತಿಯನ್ನು ಓದಲೇಬೇಕಿದೆ. ದೇಶದ ಬೇರೆ ಯಾವ ರಾಜ್ಯದಲ್ಲಿಯೂ ಜಾರಿಯಾಗದ ಎನ್‌ಇಪಿ ನಮ್ಮ ರಾಜ್ಯದಲ್ಲಿ ಮಾತ್ರ ಜಾರಿಯಾಗಿದೆ. ಈ ದಾರಿಯಲ್ಲಿ ಈಗಾಗಲೇ ಎರಡು ವರ್ಶಗಳನ್ನು ಸವೆಸಿರುವ ರಾಜ್ಯ ಉನ್ನತ ಶಿಕ್ಶಣ ಕ್ಶೇತ್ರವು ಸಾಕಶ್ಟು ದುಶ್ಪರಿಣಾಮಗಳನ್ನು ಎದುರಿಸುತ್ತಿದೆ. ಮುಂದಿನ ದಿನಗಳಲ್ಲಿ ಶಿಕ್ಶಣ ಕ್ಶೇತ್ರದ ಆರೋಗ್ಯವನ್ನು ಕಾಪಾಡಿಕೊಳ್ಳುವ ಹೊಣೆ ಪ್ರತಿಯೊಬ್ಬ ನಾಗರಿಕರದೂ ಆಗಿದೆ. ಇಂತಹ ಹೊತ್ತಿನಲ್ಲಿ ಈ ಪುಸ್ತಕದ ಓದು ನಮ್ಮ ತಿಳುವಳಿಕೆಯನ್ನು ಹೆಚ್ಚಿಸುತ್ತದೆ.
– ಡಾ.ರಂಗನಾಥ ಕಂಟನಕುಂಟೆ, ಅಧ್ಯಾಪಕರು



