ಚಳುವಳಿಯ ಸಂಗಾತಿಗಳು ಮತ್ತು ಅವರ ಸ್ಥಿತಿ

3 years ago

ಲಘು ಪಾರ್ಶ್ವವಾಯು ಹೊಡೆತ(Mild stroke attack)ದಿಂದ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪ್ಪನ ಆರೈಕೆಯಲ್ಲಿ ನಾನು ❤️❤️

ತಮ್ಮ ಹೋರಾಟದ ಸಂಗಾತಿಯೊಬ್ಬರ ಜೊತೆಗೆ ಇತ್ತೀಚಿಗೆ ಬಿಜಾಪುರದಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನಕ್ಕೆ ಹೋಗಿ ವಾಪಾಸ್ ಬರುವಾಗ ನಿನ್ನೆ ತಡರಾತ್ರಿ 3:30ಕ್ಕೆ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ನನ್ನಪ್ಪನ ದೇಹದ ಎಡಭಾಗ ಸ್ವಾಧೀನ ಕಳೆದುಕೊಂಡಿದೆ. ಜೊತೆಯಲ್ಲಿ ಬಂದಿದ್ದ ಸ್ನೇಹಿತರು ನಮ್ಮಪ್ಪನ ಈ ಸ್ಥಿತಿಯನ್ನು ನೋಡಿಯೂ ನಿಮ್ಮ ಮಗಳನ್ನು ಸಂಪರ್ಕ ಮಾಡಿ ಅಲ್ಲಿಗೆ ಹೋಗಿ ಎಂದು ಹೇಳಿ ಹೊರಡಲು ಮುಂದಾಗಿದ್ದಾರೆ. ಆಗ “ತನ್ನನ್ನು ಈ ಸ್ಥಿತಿಯಲ್ಲಿ ಬಿಟ್ಟು ಹೋಗಬೇಡಿ. ಇಲ್ಲಿಂದ ಸುಮಾರು 350 ಕಿ.ಮೀ. ದೂರ ಇರುವ ಮಗಳು ಈಗಿಂದೀಗಲೇ ಬಂದು ನನ್ನನ್ನು ಹೇಗೆ ಆಸ್ಪತ್ರೆಗೆ ಸೇರಿಸುತ್ತಾಳೆ. ನೀವು ನನ್ನನ್ನು ಆಸ್ಪತ್ರೆಗೆ ದಾಖಲಿಸಿ ಆಗಲೇ ವಾಪಾಸ್ ಹೋಗಿ ಬಿಡಿ ಮತ್ತೆ ನಾನು ನಿಮಗೆ ತೊಂದರೆ ಕೊಡೋದಿಲ್ಲ” ಎಂದು ಅಪ್ಪ ಗೋಗರೆದಿದ್ದಾರೆ. ಸಾಕಷ್ಟು ವರ್ಷಗಳ ಹೋರಾಟದ ಒಡನಾಡಿಯೂ ಆಗಿದ್ದ ಅವರು, ಎಷ್ಟೇ ಗೋಗರೆದರೂ ಮಾತು ಸ್ಪಷ್ಟತೆ ಕಳೆದುಕೊಂಡ, ಕೈ ಎತ್ತಲೂ ಆಗದ, ಕಾಲು ಆಡಿಸಲು ಬಾರದ, ಸ್ಥಿತಿಯಲ್ಲಿ ಇದ್ದ ನಮ್ಮಪ್ಪನಿಗೆ “ಬೆಳಗಾವಿಗೆ ಟಿಕೆಟ್ ತೆಗೆಸಿ ಕೊಡ್ತೀನಿ ನಿಮ್ಮ ಮಗಳ ಮನೆಗೆ ಹೋಗಿಬಿಡಿ. ನಾಳೆ ಸಂಘಟನೆಯ ಸಭೆಯೊಂದರಲ್ಲಿ ನಾನು ಭಾಗವಹಿಸುವುದಿದೆ” ಎಂದು ಹೇಳಿ ಕೈ ಮುಗಿದು ತಿರುಗಿಯೂ ನೋಡದೆ ಹೊರಟು ಹೋಗಿದ್ದಾರಂತೆ. ಇದನ್ನು ಕೇಳಿದ ನನಗೆ ಆಘಾತವಾಯಿತು. ಕಳೆದ ಐದು ವರ್ಷದ ಹಿಂದೆ ಅಪಘಾತದಲ್ಲಿ ನನ್ನಪ್ಪ ಕೈ ಮುರಿದುಕೊಂಡಾಗ ಶಸ್ತ್ರ ಚಿಕಿತ್ಸೆ ಮಾಡಿಸಿ, ನಾನು ಬರುವವರೆಗೂ ಮಗುವಿನಂತೆ ನಮ್ಮಪ್ಪನನ್ನು ನೋಡಿಕೊಂಡ ಆ ವ್ಯಕ್ತಿ ಇಂದು ಇಷ್ಟೇಕೆ ಕಠೋರವಾದರು?! ತಮ್ಮ ಮುಂದೆಯೇ ನಮ್ಮಪ್ಪ ಗೋಳಾಡುವಾಗ ವಿಶ್ವ ಮಾನವತೆ ಸಾರುವ ಅವರೇಕೆ ಕನಿಷ್ಠ ಮಾನವೀಯತೆ ಮರೆತರು?!! ಅನ್ನೋದು
ಅರ್ಥವೇ ಆಗುತ್ತಿಲ್ಲ. 😥

ಅವರು ಹಾಗೆ ಬಿಟ್ಟು ಹೋದ ನಂತರ ಆ ತಡರಾತ್ರಿಯಲ್ಲಿ ನನಗೆ ಕರೆ ಮಾಡಿದರೆ ಗಾಬರಿ ಆದೇನೆಂದೋ ಅಥವಾ ‘ಮೊದಲೇ ತಾಪತ್ರಯದಲ್ಲಿರುವ ನನಗೆ ಏನೂ ಹೇಳದೆ ಊರು ಸುತ್ತೋಕೆ ಹೋಗಿ ಹೀಗೆಲ್ಲ ಮಾಡಿಕೊಂಡು ಮತ್ತಷ್ಟು ತೊಂದರೆ ಕೊಡ್ತೀಯಾ’ ಎಂದು ನಾನು ಬೈದು ಬಿಟ್ಟೇನೆಂದೋ ನನಗೂ ವಿಷಯ ಹೇಳಿಲ್ಲ. ಹೇಗಾದರೂ ಬದುಕಲೇ ಬೇಕು ಎಂದು ಇಚ್ಛಾಶಕ್ತಿ ತಂದುಕೊಂಡು ಸ್ಪಷ್ಟತೆ ಕಳೆದುಕೊಂಡ ಮಾತಿನಲ್ಲಿಯೇ ದೂರದಲ್ಲಿ ಇದ್ದ ಪೊಲೀಸರನ್ನು ಕರೆದು ಸಹಾಯಕ್ಕಾಗಿ ಗೋಗರೆದಿದ್ದಾರೆ. ನಮ್ಮಪ್ಪನ ಸ್ಥಿತಿ ನೋಡುತ್ತಿದ್ದಂತೆ ಕರುಣಾಮಯಿ ಪೊಲೀಸರು ಯಾರು ಏನು ಎತ್ತ ಏನನ್ನೂ ವಿಚಾರಿಸದೆ ಅತ್ಯಂತ ಮುತುವರ್ಜಿ ವಹಿಸಿ ಸ್ಥಳೀಯ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಯ ವಾರ್ಡ್ ಬಾಯ್ ಸಹಿತ ಎಲ್ಲರೂ, ಸಂಪೂರ್ಣ ಸ್ವಾಧೀನ ಕಳೆದುಕೊಂಡಿದ್ದ ಅಪ್ಪನ ಸಹಾಯಕ್ಕೆ ಧಾವಿಸಿದ್ದಾರೆ. ಇಷ್ಟೆಲ್ಲಾ ಸಹಾಯ ಮಾಡುತ್ತಿರುವ ಅವರಿಗೆ ಕೈಲಾದಷ್ಟು ಕೊಡೋಣ ಎಂದು ಅಪ್ಪ 50 ರೂ. ಕೊಡಲು ಹೋದರೆ “ನಿಮ್ಮಂತವರಿಂದ ಹಣ ತಗೊಂಡ್ರೆ ಒಳ್ಳೇದಾಗುತ್ತಾ ಬೇಡ ಅಜ್ಜಾರೇ” ಎಂದು ತನ್ನ ಕೆಲಸಕ್ಕೆ ತಾನು ಹತ್ತಿದ್ದಾನೆ. ನಿನ್ನೆ ತಡರಾತ್ರಿ ಆದ ಈ ಘಟನೆ ನನಗೆ ನಿನ್ನೆ ಬೆಳಿಗ್ಗೆ 8:30 ರ ಸುಮಾರಿಗೆ ಗೊತ್ತಾಗಿ ಸಾಗರ ಅವರೊಂದಿಗೆ ಬೆಳಗಾವಿಯಿಂದ ದಾವಣಗೆರೆ ಆಸ್ಪತ್ರೆಗೆ ನಿನ್ನೆ ಸಂಜೆ 4 ಗಂಟೆಗೆ ಬರುವವರೆಗೆ ನನಪ್ಪನ ಕಾಳಜಿ ಮಾಡಿದ್ದು ಯಾವ ಸಿದ್ಧಾಂತ, ಮಾನವೀಯ ಚಳವಳಿಯ ಗಂಧ ಗಾಳಿಯೂ ಗೊತ್ತಿರದ ಒಬ್ಬ ಸಾಮಾನ್ಯ ವಾರ್ಡ್ ಬಾಯ್ ಮತ್ತು ಪಕ್ಕದ ಬೆಡ್ಡಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಅಟೆಂಡರ್!

ಕಾರ್ಮಿಕವರ್ಗ ಹಿನ್ನೆಲೆಯ ನನ್ನಪ್ಪ ಸಹಜವಾಗಿ ಪ್ರಭಾವಿತಾನಾಗಿದ್ದು ಕಮ್ಯುನಿಸ್ಟ್ ಸಿದ್ಧಾಂತಕ್ಕೆ. ಒಂದು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬದುಕು ಸಾಗಿಸುತ್ತಾ ಖಾಸಗಿ ಆಸ್ತಿ ಹೊಂದುವುದನ್ನು ವಿರೋಧಿಸುವ ಕಮ್ಯುನಿಸ್ಟ್ ಸಿದ್ಧಾಂತದ ಹಾದಿಯಲ್ಲಿ ನಡೆಯುವುದು ನನ್ನಪ್ಪನಂತವರಿಂದ ಮಾತ್ರ ಸಾಧ್ಯ ಅನ್ನಿಸುತ್ತೆ. ವೇದಿಕೆಯ ಭಾಷಣ, ಬರಹಗಳಿಗೆ ಕಮ್ಯುನಿಸ್ಟ್ ಸಿದ್ಧಾಂತವನ್ನು ಸೀಮಿತಗೊಳಿಸಿ ಸಾಕಷ್ಟು ಹಣ, ಆಸ್ತಿ ಮಾಡಿಕೊಂಡು ಹಾಯಾದ ಜೀವನ ನಡೆಸುವ/ನಡೆಸುತ್ತಿರುವ ಸಾಕಷ್ಟು ಜನರನ್ನು ನಾನು ಪ್ರತ್ಯಕ್ಷ ನೋಡಿದ್ದೇನೆ. ಆದರೆ ನನ್ನಪ್ಪನಲ್ಲಿನ ಸಿದ್ಧಾಂತ ಬದ್ಧತೆಯೋ ಅಥವಾ ಈ ನೆಪದಲ್ಲಿ ಹಣ ಗಳಿಕೆ ವಿಷಯದಲ್ಲಿ ಮಾಡಿದ ಸೋಂಬೇರಿತನವೋ ಗೊತ್ತಿಲ್ಲ, ತನ್ನ 68 ನೇ ಇಳಿವಯಸ್ಸಿನಲ್ಲಿ ವಾಸಕ್ಕೆ ಒಂದು ಸೂರು, ಭದ್ರತೆಗೆ ಒಂದಿಷ್ಟು ಹಣ ಇಲ್ಲದೆ ಅಭದ್ರ ಭಾವದಲ್ಲಿ ಜೀವನ ಸಾಗಿಸುವುದನ್ನು ಅಸಹಾಯಕರಾಗಿ ನೋಡಬೇಕಾಗುವ ನಮ್ಮಂತ ಹೆಣ್ಣುಮಕ್ಕಳ ಸ್ಥಿತಿ ಯಾರಿಗೂ ಬೇಡ.

ಸಾಕಷ್ಟು ವೈಚಾರಿಕ ಪ್ರಜ್ಞೆ, ಸೈದ್ಧಾಂತಿಕ ತಿಳಿವಳಿಕೆ, ಪ್ರಬುದ್ಧ ವಿಚಾರವಂತಿಕೆ ಎಲ್ಲವನ್ನೂ ಹೊಂದಿದ್ದ ನನ್ನಪ್ಪ ತನ್ನ ಸಾಂಸಾರಿಕ ಜವಾಬ್ದಾರಿ ನಿಭಾಯಿಸುವುದರಲ್ಲಿ ಎಡವಿದ್ದೇ ಹೆಚ್ಚು.
ಇದರ ಪರಿಣಾಮ ನೇರವಾಗಿ ಬೀರಿದ್ದು ಮಕ್ಕಳಾದ ನಮ್ಮ ಮೇಲೆ. ಯಾರ್ಯಾರೋ ಪುಣ್ಯಾತ್ಮರ ಸಹಾಯದಿಂದ ಒಂದು ಹಂತದ ವಿದ್ಯಾಭ್ಯಾಸ ಪೂರ್ಣಗೊಳಿಸಿದರೂ ಸರಿಯಾದ ಸಮಯದಲ್ಲಿ ಸರಿಯಾಗಿ ಮಾರ್ಗದರ್ಶನ ಇಲ್ಲದೆ ಜೀವನದ ಕೆಲವೊಂದು ಘಟ್ಟದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ನಾವೂ ಎಡವಬೇಕಾಯಿತು. ಜೀವನದ ಪ್ರತಿ ಹೆಜ್ಜೆಯಲ್ಲೂ ಉತ್ತರ-ದಕ್ಷಿಣ ದ್ರುವಗಳಾದ ನಮ್ಮ ತಂದೆ ತಾಯಿಯರ ಬೇಜವಾಬ್ದಾರಿಯಿಂದಾಗಿ ಅತಂತ್ರವಾದ ನಮ್ಮಗಳ ಸ್ಥಿತಿ ಈಗೀಗ ತುಸು ಚೇತರಿಕೆ ಕಾಣುತ್ತಿದೆ ಅಷ್ಟೇ.

ದುಡಿಯುವ ವಯಸ್ಸಿನಲ್ಲಿ ಚಳವಳಿ, ಸಂಘಟನೆ ಅಂತೆಲ್ಲ ಕಟ್ಟಿಕೊಂಡ ಸಂಸಾರ ಮರೆತು ಬೇಜವಾಬ್ದಾರಿಯಿಂದ ವರ್ತಿಸಿದರೆ ಜೀವನದ ಇಳಿಸಂಜೆಯಲ್ಲಿ ಯಾವ ಪರಿಸ್ಥಿತಿಗೆ ತಲುಪಬಹುದು ಅನ್ನೋದಕ್ಕೆ ನನ್ನ ತಂದೆ ಸೂಕ್ತ ನಿದರ್ಶನ.
ತೀರಾ ವೈಯಕ್ತಿಕ ವಿಚಾರಗಳನ್ನು ಫೇಸ್ಬುಕ್ಕಿನಲ್ಲಿ ಹಂಚಿಕೊಳ್ಳಬೇಡಿ ಎಂದು ಕೆಲವರು ಸಲಹೆ ಕೊಡುತ್ತಾರೆ. ಆದ್ರೆ ನನ್ನ ಕೆಲವು ಅನುಭವಗಳನ್ನು ಇಲ್ಲಿ ಹಂಚಿಕೊಂಡರೆ ನಾನಿಲ್ಲಿ ಕಳೆದುಕೊಳ್ಳುವುದೇನಿಲ್ಲ. ನಮ್ಮ ಹಾಗೇ ಅಲ್ಲದಿದ್ದರೂ ಸಮಾಂತರ ಪರಿಸ್ಥಿತಿಯಲ್ಲಿ ಇರುವವರಿಗೆ ಜಾಗೃತಿ ವಹಿಸಲು ಅನುಕೂಲ ಆಗಬಹುದು ಅನ್ನೋದಷ್ಟೇ ಸುದೀರ್ಘ ಬರಹದ ಆಶಯ.

– ಸರಳಾ ಸಾತ್ಪುತೆ, ಪತ್ರಕರ್ತರು

Leave a Reply