ಕಾಂಗ್ರೇಸ್ ಬಗೆಗಿನ ನಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಏನೇ ಇರಲಿ. ಬಡವರಿಗೆ ನೆರವಾಗುವ ಹಾಗೂ ಹಳ್ಳಿಗಳಿಂದ ನಗರಗಳಿಗೆ ಸರ್ಕಾರಿ ಕೆಲಸಗಳ ನಿಮಿತ್ತ ಬಂದವರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಲ್ಪ ಬೆಲೆಯಲ್ಲಿ ಹಸಿದ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟಿನ್ ಪರಿಕಲ್ಪನೆಯನ್ನು ನಾವೆಲ್ಲರೂ ಶ್ಲಾಘಿಸಬೇಕು.
ಬಿ.ಜೆ.ಪಿ. ಯ ಮೂರ್ಖ ಶಿಖಾಮಣಿಗಳ ಸಣ್ಣತನದಿಂದಾಗಿ ರಾಜ್ಯಾದಂತ ಐವತ್ತೈದಕ್ಕೂ ಹೆಚ್ಚು ಕ್ಯಾಂಟಿನ್ ಗಳು ಮುಚ್ಚಿದ್ದವು. ಅವುಗಳು ಈಗ ಪ್ರಾರಂಭವಾಗುತ್ತಿವೆ. ಇಂದಿರಾ ಕ್ಯಾಂಟಿನ್ ಪರಿಕಲ್ಪನೆಯನ್ನು ಜಾರಿಗೆ ತಂದ ಕೀರ್ತಿ ಸಿದ್ಧರಾಮಯ್ಯನವರದು.
ಹಸಿದ ಹೊಟ್ಟೆಗೆ ಅನ್ನ ಹಾಕುವುದು, ಬೆತ್ತಲೆ ದೇಹಕ್ಕೆ ವಸ್ತ್ರ ತೊಡಿಸುವುದು ಮತ್ತು ಚಳಿ ಹಾಗೂ ಮಳೆಯಿಂದ ತತ್ತರಿಸುವ ಜೀವಗಳಿಗೆ ವಸತಿ ಸೌಕರ್ಯ ಕಲ್ಪಿಸುವುದು ಇವುಗಳು ಜಗತ್ತಿನಲ್ಲಿ ಒಬ್ಬ ಮನುಷ್ಯ ಮಾಡಬಹುದಾದ ಶ್ರೇಷ್ಠ ಕಾರ್ಯಗಳು.
ಯಜ್ಞ, ಯಾಗ ಮತ್ತು ಓಮ ಮಾಡಿ ಬಾರದ ಪುಣ್ಯ ಕಟ್ಟಿಕೊಳ್ಳುವ ಹುಂಬತನಗಳಿಗಿಂತ ಇಲ್ಲದವರ ಬಗ್ಗೆ ಯೋಚಿಸುವ ಮಾನವೀಯ ಚಿಂತನೆಗಳು ಈ ಜಗತ್ತಿನ ಎಲ್ಲಾ ದೇವರುಗಳ ಪ್ರಾರ್ಥನೆ ಮತ್ತು ಭಜನೆಗಳಿಂದ ಮುಖ್ಯವಾದವು.
ಗಾಂಧೀಜಿಯವರ ಈ ಪರಿಕಲ್ಪನೆ ನೆಹರೂ ಅವರ ಮೂಲಕ ಕಾಂಗ್ರೇಸ್ ಪಕ್ಷದ ಚಿಂತನೆಗಳಲ್ಲಿ ಅಡಕಗೊಂಡಿದ್ದು ಮತ್ತು ಎಡಪಕ್ಷಗಳ ಮೂಲ ಪರಿಕಲ್ಪನೆಯಲ್ಲಿ ಇದು ಸಹ ಒಂದಾಗಿ ಇಂದಿಗೂ ಜೀವಂತವಾಗಿದೆ.
ಧಾರವಾಡದ ಮಿನಿ ವಿಧಾನಸೌಧದ ಎದುರು ಹಾಗೂ ಮಂಡ್ಯ ನಗರದ ಸಂಜಯ ವೃತ್ತದ ಬಳಿ ಇರುವ ಇಂದಿರಾ ಕ್ಯಾಂಟಿನ್ ನಲ್ಲಿ ಹಳ್ಳಿಯಿಂದ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು, ರೈತರು, ಕೂಲಿಕಾರರು ತಿಂಡಿ, ಊಟ ಮಾಡುವುದನ್ನು ನಾನು ನೋಡುವಾಗ ಈ ಜಗತ್ತಿನಲ್ಲಿ ಮನುಷ್ಯತ್ವ ಇನ್ನೂ ಜೀವಂತವಾಗಿದೆ ಎನಿಸುತ್ತಿತ್ತು.
ರಾಷ್ಟ್ರಭಕ್ತಿ, ಧರ್ಮಭಕ್ತಿ ಎಂದೆಲ್ಲಾ ಬೊಗಳೆ ಬಿಡುವ ಮುಠಾಳರ ಎದೆಯೊಳಗೆ ಬ್ರಾಹ್ಮಣ್ಯ ಉಸಿರಾಡಬಹುದೇ ಹೊರತು ಮನುಷ್ಯತ್ವ ಉಸಿರಾಡುವುದಿಲ್ಲ. ಇದಕ್ಕೆ ಸಾಕ್ಷಿಯಾಗಿ ಕಳೆದ ಮೂರೂವರೆ ವರ್ಷದಿಂದ ಅವರಿಂದ ಮುಚ್ಚಿಸಲ್ಪಟ್ಟಿದ್ದ ಇಂದಿರಾ ಕ್ಯಾಂಟಿನ್ ಗಳು ನಮ್ಮೆದುರು ಇವೆ.
ಈ ಕ್ಯಾಂಟಿನ್ ಗಳು ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪನೆಯಾಗಬೇಕಿದೆ. ಈ ಬಗ್ಗೆ ನೂತನ ಸರ್ಕಾರ ಗಂಭೀರವಾಗಿ ಆಲೋಚಿಸಲಿ ಎನ್ನುವುದು ನನ್ನ ಆಶಯ.
- ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




