ಸಿದ್ದಲಿಂಗಯ್ಯ ನಡೆ: ಒಂದು ಪ್ರತಿಕ್ರಿಯೆ

5 years ago

ಸತ್ಯ ಕಹಿ ಮತ್ತು‌ ಕಟು ಮೋಹನರಾಮ್ ಎಪ್ಪತ್ತರ ದಶಕದಿಂದ ಎಲ್ಲ ಜನಪರ ಚಳವಳಿ ಕಂಡವರು. ಅದರ ಸಖ್ಯದಲ್ಲಿದ್ದ ಕೆಲವು ಸಾಹಿತಿಗಳು ಆಯಾ ಕಾಲದ ವ್ಯವಸ್ಥೆಯಿಂದ ಪಡೆದ ಭಾಗ್ಯದವರ  ಜಾತಕ ಇಟ್ಟುಕೊಂಡವರು. ಅವರು ಲಂಕೇಶ್, ಕಾರ್ನಾಡರ ಬಗ್ಗೆ ಬರೆದ ಕಟು ಮಾತುಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಕವಿ ಸಿದ್ದಲಿಂಗಯ್ಯನವರ ವ್ಯಕ್ತಿನಡೆಯನ್ನು, ಪಡೆದ ಲಾಭಗಳನ್ನು ಸಾಧ್ಯವಾದಷ್ಟು ಸತ್ಯ ಮಾರ್ಗದಲ್ಲಿ ಬಯಲು ಮಾಡಿದ್ದಾರೆ.

ವಿಧಾನ ಪರಿಷತ್ತಿನ ಸದಸ್ಯ ಕೊಂಡಜ್ಜಿ ಮೋಹನ್ ನನ್ನ ಕಷ್ಟಕಾಲದ ಬದುಕಿಗೆ ಸಣ್ಣ ಹುದ್ದೆ ಕೊಡಿಸಿ ಮುನ್ನಡೆಸಿದ ಮಾರ್ಗದರ್ಶಕರು. ಅವರಿಗೂ ಮೋಹನರಾಮ್ ಅವರಷ್ಟೆ ಸಖ್ಯ ಚಳವಳಿಗಾರರ ಜೊತೆ ಇದೆ. ಅವರ ಆಡಿಯೋ ನಾನೂ ಕೇಳಿದೆ. ಮಾತಿನ ಬಿರುಸಲ್ಲಿ ಸಿದ್ದಲಿಂಗಯ್ಯ ಅವರ ಕೋಮುವಾದಿ ಪಕ್ಷದ ನಡೆಯನ್ನು ಸಮರ್ಥಿಸುವ ರೀತಿಯಲ್ಲಿ ಮಾತಾಡಿ ಶಾಕ್ ನೀಡಿದ್ದಾರೆ. ಅವರ ಭ್ರಮೆ ಹೇಗಿದೆಯೆಂದರೆ, ಯಾವತ್ತೋ ಸಿದ್ಧಾಂತ ಗಾಳಿಗೆ ತೂರಿ ಅಧಿಕಾರಕ್ಕಾಗಿ ಸದಾ ಸಭ್ಯನಡೆ ತೋರಿ ಒಂದಲ್ಲಾ ಒಂದು ಕುರ್ಚಿಗೆ ಅಂಟಿಕೊಂಡ ಕವಿಯನ್ನು ಇನ್ನೂ ಕಾಮ್ರೆಡ್  ಅಂದದ್ದು ಆತಂಕದ ವಿಚಾರ.

ಕವಿ ಎರಡು ಅವಧಿಗೆ ವಿಧಾನಪರಿಷತ್ತು ಸದಸ್ಯರಾದ ನಂತರ ಬೆಂಗಳೂರು ವಿವಿ ಕನ್ನಡ ವಿಭಾಗದಲ್ಲಿ ಕೂತು, ತುಳಿತಕ್ಕೊಳಗಾದ ತನ್ನ ಜನಾಂಗದ ಹುಡುಗರಿಗೆ ಪಾಠ ಮಾಡಲು‌ ಒದ್ದಾಡಿದರು! ಆಗಾಗ್ಗೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು!! ಮುಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕ್ಯಾಬಿನೆಟ್ ದರ್ಜೆ ಸ್ಥಾನ ಸಿಕ್ಕಾಗ ಆರೋಗ್ಯಪೂರ್ಣವಾಗಿದ್ದರು.

ಅವರ ಅವಧಿ ಮುಗಿಯುವುದರೊಳಗೆ, ಮುಖ್ಯಮಂತ್ರಿ ಚಂದ್ರು ಆ‌ ಅಧ್ಯಕ್ಷ ಹುದ್ದೆ ಪಡೆಯಲು ಸಿದ್ದಲಿಂಗಯ್ಯನವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಕೊಡಿಸಿದರು! ಮತ್ತೆ‌ ಇನ್ನೊಂದು ಗಾದಿ ಅನಾಯಾಸವಾಗಿ ದಕ್ಕುವಂತೆ ಮಾಡಿದರು!

ಆಯ್ತು, ಕವಿ ಪುಸ್ತಕ ಪ್ರಾಧಿಕಾರಕ್ಕೆ ಬಂದವರು ಮೂರು ವರ್ಷ ಮುಗಿಯುವ ಕೊನೆಯ ಸಂದರ್ಭದಲ್ಲಿ… ಬಸವ ಜಯಂತಿ ದಿನ ಕಲಾಕ್ಷೇತ್ರದ ವೇದಿಕೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಧುನಿಕ ಬಸವಣ್ಣ ಎಂದು ಹೊಗಳೇಬಿಟ್ಟರು!

ಸರಿ, ಇದರಿಂದ ಸಂಪ್ರೀತರಾದ ಮುಖ್ಯಮಂತ್ರಿ, ಇನ್ನೊಂದು ವರ್ಷ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಗದ್ದುಗೆಯಲ್ಲಿ ಗಟ್ಟಿಯಾಗಿರಲು ಅನುವು ಮಾಡಿಕೊಟ್ಟರು!  ಮೂರು ಹೋಗಿ ನಾಲ್ಕು ವರ್ಷ ಆಯಿತಲ್ಲ… ಕಡಿದು ಕಟ್ಟೆ ಹಾಕಿದ ಕೆಲಸ ಅಷ್ಟರಲ್ಲೇ ಇತ್ತು. ವಾಪಾಸು ಮೂಲ ಸಂಸ್ಥೆಗೆ ಹೋಗಲು ಮನಸ್ಸು ಬಾರದೆ ಮತ್ತೆ ಅದೇ ಹುದ್ದೆ 5ನೇ ವರ್ಷದಲ್ಲಿ ಮುಂದುವರೆಯಲು ತಮ್ಮವರೇ ಆದ‌ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಗೋವಿಂದ ಕಾರಜೋಳ ಅವರ ಕಾಲು ಹಿಡಿದರು! ಕಾರಜೋಳರ ಕೃಪಾಕಟಾಕ್ಷದಿಂದ 5ನೇ‌ ವರ್ಷವೂ ಕುರ್ಚಿಗೆ ಫೆವಿಕಾಲ್ ಹಾಕಿಕೊಂಡು ಕೂತರು! ಇನ್ನೊಬ್ಬನಿಗೆ ಸಿಕ್ಕಬೇಕಾದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ತಪ್ಪಿಸಿದ ಶಾಪ ಕವಿಗೆ ಅಂಟಿತು.

5 ವರ್ಷಗಳ ನಂತರ ಕನ್ನಡ ವಿಭಾಗಕ್ಕೆ ವಾಪಾಸಾಗಿ, ಅಲ್ಲಿ ಕೂತು ಪಾಠ ಮಾಡಲಾರದ ಮನಸ್ಸು ಮತ್ತೆ ಅಧಿಕಾರ ಬಯಸಿತು! ಬೆಂಗಳೂರು ವಿವಿಯ ಡಾ. ಅಂಬೇಡ್ಕರ್ ಅಧ್ಯಯನ ಪೀಠ ಅಧ್ಯಕ್ಷ ಸ್ಥಾನ ಗಿಟ್ಟಿಸುವಲ್ಲಿ ಮತ್ತೆ ಯಶಸ್ವಿ ಆದರು!  ಬಹುಶಃ ಅದೇ ಹುದ್ದೆಯಲ್ಲೇ ನಿವೃತ್ತರೂ ಆದರೋ ಏನೋ…

ರಾಜ್ಯದಲ್ಲಿ ಏಳು ಲಕ್ಷದ ಒಂದು ರೂಪಾಯಿ ಪ್ರಶಸ್ತಿ ಒಂದಿದೆ. ಅದು ನೃಪತುಂಗ ಪ್ರಶಸ್ತಿ ಅದಕ್ಕೆ ಲಾಬಿ ಇಲ್ಲದೆಯೂ‌ ಪ್ರಶಸ್ತಿ ಪಡೆದವರು ಇದ್ದಾರೆ. ಲಾಬಿ‌ ಮಾಡಿ ಲಪಟಾಯಿಸಿಕೊಂಡವರೂ ಇದ್ದಾರೆ. ನಿತ್ಯೋತ್ಸವ ಕವಿ ಪ್ರೊ. ನಿಸಾರ್ ಅಹಮದ್ ಅವರಿಗೆ ಸಲ್ಲಬೇಕಾದ ಆ ದೊಡ್ಡ ಮೊತ್ತದ ಪ್ರಶಸ್ತಿ ಈ ಕವಿ ಕೈಗೆ ಬಂದ ಕತೆಯನ್ನು ಕಸಾಪ ಪದಾಧಿಕಾರಿಗಳೇ ಬಾಯಿಬಿಡಬೇಕು. ಈ ದೊಡ್ಡ ಮೊತ್ತದ ಪ್ರಶಸ್ತಿ ಹಣವನ್ನು ಬೆಂಗಳೂರು ಸಾರಿಗೆ ಸಂಸ್ಥೆ ನೀಡುತ್ತದೆ. ಅದರ ಉನ್ನತ ಅಧಿಕಾರಿ ಪ್ರಶಸ್ತಿ ಕಮಿಟಿಯಲ್ಲಿರುತ್ತಾರೆ. ಹೀಗೆ ಸೇರಿದ ಒಂದು ವರ್ಷದ ಪ್ರಶಸ್ತಿ ಸಮಿತಿಯಲ್ಲಿ ಅಧಿಕಾರಿ  ಶಿಫಾರಸ್ಸು ಮಾಡಿ ಒತ್ತಾಯಿಸಿದ್ದು ಕವಿ ನಿಸಾರ್ ಅಹಮದ್ ಅವರ ಹೆಸರನ್ನು.

ಆದರೆ ಅವರಿಗೆ ಪ್ರಶಸ್ತಿ ಬರುವುದಿಲ್ಲ! ಕಸಾಪದ ಆಡಳಿತ ವಿಭಾಗದ ಒಬ್ಬರು ರಾಜ್ಯ ಅಧ್ಯಕ್ಷ ಸ್ಥಾನದ ಹುದ್ದೆಯ ಚುನಾವಣೆಗೆ ಸ್ಪರ್ಧಿಸಬೇಕಿತ್ತು. ಕವಿಗಳು ಅವರ ಬಳಿ “ನನಗೆ ತುಂಬಾ ಅನಾರೋಗ್ಯ. ಆರ್ಥಿಕ ಸಂಕಷ್ಟ ಇದೆ. ಇನ್ನೆಷ್ಟು ವರ್ಷ ಬದುಕಿರುವೆನೋ… ನನಗೆ “ನೃಪತುಂಗ” ಪ್ರಶಸ್ತಿ ಕೊಡಿಸಿ” ಎಂದು ಅಂಗಲಾಚಿದರು! ಅವರಿಗೂ ಕವಿ ಹಾಗೂ ಬೆಂಬಲಿಗರ ಬೆಂಬಲ ಬೇಕಿತ್ತು. ಅವರು ಕವಿ ಸಿದ್ಧಲಿಂಗಯ್ಯ ಅವರ ಹೆಸರನ್ನು ಶಿಫಾರಸ್ಸು ಮಾಡಿದರು. ಕವಿ ನೃಪತುಂಗ ಪ್ರಶಸ್ತಿ ಪಡೆದು ಗೆಲುವಿನ ನಗೆ ಬೀರಿದರು!

ಮುಂದೆ ರಾಜಕೀಯ ಕಾರಣಕ್ಕೆ, ದಲಿತರ ಓಟಿನ ಬೇಟೆಗೆ ಕೋಮುವಾದಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕವಿ ಮನೆಗೆ ಬಂದದ್ದು… ಕವಿ ಅದನ್ನು ಸಮರ್ಥಿಸಿಕೊಂಡದ್ದು…  ಇತಿಹಾಸ.

ಈ ದೇಶದಲ್ಲಿ ಕೋಮುವಾದಿ ಪಕ್ಷ ದಲಿತರು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ದಬ್ಬಾಳಿಗೆ ಮಾಡಿದಾಗಲೂ ಒಂದು ಹೇಳಿಕೆ ಕೊಡದೆ ಕವಿ “ಮೌನಿ” ಆದದ್ದು ಈ ನಾಡಿನ ದಮನಿತರಿಗೆ ಮಾಡಿದ ಅನ್ಯಾಯ ಅಲ್ಲವೆ?

  • ಆರ್ ಜಿ ಹಳ್ಳಿ ನಾಗರಾಜ, ಬಂಡಾಯ ಸಾಹಿತಿಗಳು

Leave a Reply