ಕೋವಿಡ್‌ ರಾಜಕಾರಣದ ಹಿನ್ನೋಟ, ಮೂರನೇ ಅಲೆ ಮುನ್ನೊಟ

5 years ago

ಭಾರತ ಮತ್ತು ಜಗತ್ತಿಗೆ ಕೋವಿಡ್‌ ಕಲಿಸಿದ ಕಠಿಣ ಪಾಠ .. ?

ಕೋವಿಡ್‌ -೧೯ ಸಾಂಕ್ರಾಮಿಕ ಮತ್ತೊಂದು ಮಗ್ಗಲು ಬದಲಿಸಿದೆ. ಹಾಲಿವುಡ್‌ ಸಿನಿಮಾಗಳಲ್ಲಿ ಯಾವುದೋ ಲೋಕದಿಂದ ಬರುವ ವಿಚಿತ್ರ ಪ್ರಾಣಿಗಳು ಮಾನವ ಜನಾಂಗದ ಮೇಲೆ ದಾಳಿ ಮಾಡಿ ಸಿಕ್ಕ ಸಿಕ್ಕವನ್ನು ಹಿಡಿದು ತಿಂದು ಅಷ್ಟೇ ವೇಗದಲ್ಲಿ ಕಣ್ಮರೆಯಾಗುದನ್ನು ನೋಡಿದ್ದೇವೆ. ಭಾರತದಲ್ಲಿ ಎರಡನೇ ಅಲೆ ಇಂತದ್ದೇ ಹಾನಿಯನ್ನು ಸೃಷ್ಟಿಸಿದೆ, ಜೀವಿಗಳನ್ನು ಬಲಿಪಡೆದು ತೆರಳುತ್ತಿದೆ. ಯುದ್ಧ ಮುಗಿದ ಮೇಲೆ ಗೆದ್ದ ಸೈನ್ಯ ಸೋತ ರಾಜ್ಯವನ್ನು ಲೂಟಿ ಹೊಡೆದು, ಮನೆ ಮಠಗಳನ್ನು ಧ್ವಂಸಗೈತ್ತದೆಯಂತೆ. ಹೆಣ್ಣು ಮಕ್ಕಳನ್ನು ಅತ್ಯಾಚಾರಗೈದು ಸೇಡು ತೀರಿಸಿಕೊಳ್ಳುತ್ತವೆ ಎಂದು ಇತಿಹಾದಲ್ಲಿ ಕೇಳಿದ್ದೇವೆ. ಅದೇ ರೀತಿಯ ಭೀಕರ ಸ್ಥಿತಿಯನ್ನು ಕೊರೋನಾ ಭಾರತದಲ್ಲಿ ಉಂಟುಮಾಡಿದೆ.

ಹಾಗೆ ನೋಡಿದರೆ ಕೋವಿಡ್‌, ೨೦೧೯ರ ಮಧ್ಯ ಭಾಗದಲ್ಲಿ ಚೀನಾದಲ್ಲಿ ಪ್ರಬಲವಾಗುತ್ತಿತ್ತು. ವನ್ಯ ಪ್ರಾಣಿಗಳ ಮಾಂಸದ ಮಾರುಕಟ್ಟೆ ಹುವಾನ್‌ನಿಂದ ಎಲ್ಲಡೆ ವ್ಯಾಪಿಸುತ್ತಿತ್ತು. ಇದರ ಭೀಕರ ಪರಿಣಾಮವನ್ನು ಅಂದಾಜಿಸಿದ್ದ ಆ ದೇಶ ಯುದ್ದೋಪಾದಿಯಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿತ್ತು. ಇದರಲ್ಲಿ ಆಕ್ರಮಣಶೀಲತೆಯೂ ಇತ್ತು. ಆದರೆ ಭಾರತದಲ್ಲಿ ಅದರ ಅಪಾಯವನ್ನು ಗ್ರಹಿಸುವಲ್ಲಿಯೇ ನಮ್ಮ ಸರ್ಕಾರ ಎಡವಿತು. ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಸಾವಿರ ದಾಟಿತ್ತು. ಹಲವೆಡೆಯಿಂದ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಕೂಗು ಕೇಳಿ ಬರುತ್ತಿತ್ತು. ಮಾರ್ಚ್‌ವರೆಗೂ ಸರ್ಕಾರ ಕೋವಿಡ್‌ ಕುರಿತು ಗಂಭೀರ ನೀತಿ ನಿರ್ಧಾರ ಪ್ರಕಟಿಸಲೇ ಇಲ್ಲ. ನಮ್ಮ ನಾಯಕರು “ ನಮಸ್ತೆ ಟ್ರಂಪ್‌” ಹೆಸರಲ್ಲಿ ಟ್ರಂಪ್‌ ಪರ ಚುನಾವಣಾ ಪ್ರಚಾರದಲ್ಲಿ ಮುಳುಗಿ ಹೋಗಿದ್ದರು.

ಆ ನಂತರವಾದರೂ ಒಂದು ಜವಾಬ್ದಾರಿಯುತ ಸರ್ಕಾರವಾಗಿ ಕೋವಿಡ್‌ ಎದುರಿಸಲು ಒಂದು ರಾಷ್ಟ್ರೀಯ ನೀತಿಯನ್ನು ಪ್ರಕಟಿಸಲೇ ಇಲ್ಲ. ಬದಲು ರಾಷ್ಟ್ರಪತಿ, ಪ್ರಧಾನಿ, ಕೇಂದ್ರದ ಸಚಿವರು ಸಂತೋಷ ಕೂಟಗಳು, ಆಪರೇಶನ್‌ ಕಮಲದ ಗುಪ್ತ ಸಭೆಗಳು, ಬೋಜನ ಕೂಟಗಳಲ್ಲಿ ಭಾಗಿಯಾಗುತ್ತಿದ್ದರು. ಇದು ಕೋವಿಡ್‌ ಪ್ರಸಾರವಾಗಲು ಹಿತಕರ ವಾತಾವರಣ ಸೃಷ್ಟಿಸಿತು. ತುಂಬಾ ವಿಳಂಬವಾಗಿ ಸರ್ಕಾರ ಕ್ರಮಕ್ಕೆ ಮುಂದಾದರೂ ಅದು ತುಂಬಾ ಹಾಸ್ಯಾಸ್ಪದವಾಗಿತ್ತು. ದೇಶದ ಪ್ರಧಾನಿ ಕೋವಿಡ್‌ ತಡೆಯಲು ತಟ್ಟೆ, ಲೋಟ ಬಾರಿಸುವಂತೆ ಹೇಳಿದ್ದು ಜಗತ್ತಿನಾದ್ಯಂತ ಭಾರಿ ಅಪಹಾಸ್ಯಕ್ಕೆ ಈಡಾಯಿತು. ಇನ್ನೊಂದೆಡೆ ಬಲಂಪಥೀಯ ಸಂಪ್ರದಾಯವಾದಿಗಳು ಗೋವಿನ ಗಂಜಲ ಕುಡಿಯುವುದರಿಂದ, ಗಂಗಾಜಲ ಸೇವನೆಯಿಂದ, ಆಯುರ್ವೇದ, ನಾಟಿ ಔಷಧಗಳಿಂದ ಕೋವಿಡ್‌ ವಾಸಿಯಾಗುತ್ತದೆ ಎಂದು ಜನರಲ್ಲಿ ಸುಳ್ಳು ಪ್ರಚಾರ ಮಾಡುತ್ತಿದ್ದರು. ಯಂತ್ರ, ತಂತ್ರ, ಯಜ್ಞಗಳು ನಡೆಸಲಾಗುತ್ತಿತ್ತು. ಬಾಬಾ ರಾಮ್‌ದೇವ್‌ನಂತ ಖಾವಿಧಾರಿ ವ್ಯಾಪಾರಿಗಳು ಇದರ ಲಾಭ ಪಡೆಯಲು ಕೋವಿಡ್‌ ಔಷಧ ಎಂದು ನಕಲಿ ಔಷಧಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಇವೆಲ್ಲ ಕೋವಿಡ್‌ ಸೋಂಕಿಗೆ ಹಾಸಿಗೆ ಹಾಸಿಕೊಟ್ಟಂತಾಯಿತು. ಕೋವಿಡ್‌ ಕುರಿತು ಜನರಿಗೆ ವೈಜ್ಞಾನಿಕ ಮಾಹಿತಿ ನೀಡುವುದಕ್ಕೆ ಇದು ದೊಡ್ಡ ಅಡ್ಡಿಯಾಯಿತು. ಸರ್ಕಾರವೇ ಮೌಢ್ಯದ ಆರಾಧನೆಯಲ್ಲಿ ತೊಡಗಿದ ಮೇಲೆ ಕೋವಿಡ್‌ ನಿಯಂತ್ರಿಸಲು ಕ್ರಮ ತೆಗೆದುಕೊಳ್ಳುವುದು ಎಲ್ಲಿಂದ ಬಂತು…!
ಆ ನಂತರವಾದರೂ ಸರ್ಕಾರ ತೀವ್ರ ಗತಿಯ ಒಂದು ಮಾನದಂಡವನ್ನು ರೂಪಿಸಲಿಲ್ಲ. ತಜ್ಞರ ಎಚ್ಚರಿಕೆಗಳನ್ನು ಗಾಳಿಗೆ ತೂರಿದ್ದೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ದೇಶಗಳು ಅನುಸರಿಸುತ್ತಿರುವ ನಿಯಂತ್ರಣ ಕ್ರಮಗಳನ್ನು ಪಾಲಿಸಲಿಲ್ಲ. ವಿಮಾನ, ರೈಲು ಸೇವೆ ಯತಾಸ್ಥಿತಿಯಲ್ಲಿತ್ತು. ಇದೇ ವೇಳೆ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದ್ದು, ಅದು ೪೫ ವರ್ಷಗಳಷ್ಟು ಹಿಂದಕ್ಕೆ ಕುಸಿದಿದೆ ಎಂದು ಆರ್ಥಿಕ ಸಮೀಕ್ಷೆಯ ಸಂಸ್ಥೆಗಳು ಹೇಳುತ್ತಿದ್ದವು. ನವರತ್ನಗಳು ಎಂದು ಕರೆಯಲಾಗುತ್ತಿದ್ದ ಸಾರ್ವಜನಿಕ ಲಾಭದಾಯ ಸಂಸ್ಥೆಗಳನ್ನು ಮಾರಲಾಗುತ್ತಿತ್ತು. ದೇಶದ ಸಾಲ ಏರುತ್ತಿದ್ದರೆ, ದೇಶದ ಆರ್ಥಿಕ ಸ್ಥಿತಿಯ ತಾಳ ತಲುಪ್ಪುತ್ತಿತ್ತು. ಜಿಡಿಪಿ ಕುಸಿಯುತ್ತಿತ್ತು. ಪೌರತ್ವ ನೀತಿಯ ವಿರುದ್ಧದ ಹೋರಾಟ ತೀವ್ರಗೊಂಡಿತ್ತು. ಇವೆಲ್ಲ ತನ್ನ ತಪ್ಪು ನೀತಿಗಳನ್ನು ಕೋವಿಡ್‌ ಮೇಲೆ ಹಾಕಿ ಪಲಾಯನ ಮಾಡುವ ಉದ್ದೇಶ ಸರ್ಕಾರ ಹೊಂದಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದವು. ಕೆಲ ತಿಂಗಳಲ್ಲೇ ಆರ್ಥಿಕ ದುಸ್ಥಿತಿ, ನಿರುದ್ಯೋಗ ಇತ್ಯಾದಿಗಳಿಗೆ ಕೋವಿಡ್‌ ಕಾರಣ ಎನ್ನುವ ಮೂಲಕ ಜನರ ಅನುಮಾನಗಳನ್ನು ನಿಜಗೊಳಿಸಿತು. ಅಲ್ಲಿಗೆ ಸರ್ಕಾರ ಪ್ರಜ್ಞಾಪೂರ್ವಕವಾಗಿಯೇ ಕೋವಿಡ್‌ ವಿರುದ್ದ ನಿಧಾನ ನಡೆ ಅನುಸರಿಸಿತ್ತು ಎಂಬುದು ಗುಟ್ಟಾಗಿ ಉಳಿಯಲಿಲ್ಲ. ಆಗಲೇ ಕೋವಿಡ್‌ ನಿಯಂತ್ರಣ ಸಮಿತಿಯೊಂದನ್ನು ರಚಿಸಿ ಜನರಿಗೆ ವೈಜ್ಞಾನಿವಾಗಿವಾಗಿ ಅರ್ಥಮಾಡಿಸುವ ಜವಾಬ್ದಾರಿಯನ್ನು ಪ್ರದರ್ಶಿಸಿದ್ದರೆ ದೇಶ ಎರಡು ಲಾಕ್‌ಡೌನ್‌ ಹಾಗೂ ಮೂಲಕ ಅಪಾರ ನಷ್ಟ ಅನುಭವಿಸಬೇಕಿರಲಿಲ್ಲ. ಲಕ್ಷಾಂತರ ಜನರ ಸಾವು, ನಗರಗಳಿಂದ ಹಳ್ಳಿಗಳಿಗೆ ವಲಸೆ, ಈ ವೇಳೆ ಹಸಿವು, ನೀರಡಿಕೆಯಿಂದ ಸಾವು. ಹಾಹಾಕಾರಗಳನ್ನ ನೋಡಬೇಕಿರಲಿಲ್ಲ.
ಇದರಿಂದ ಸರ್ಕಾರ ಪಾಠ ಕಲಿಯಿತೇ ಎಂದು ನೋಡಿದರೆ ಮತ್ತೆ ಕಾಣುವುದು ಅದೇ ನಿರ್ಲಕ್ಷ್ಯ, ಅಜ್ಞಾನ, ಅಸೂಕ್ಷ್ಮತೆ, ಅದಕ್ಷತೆ, ದುರಾಡಳಿತ ಮತ್ತು ಭಂಡತನ. ಕೋವಿಡ್‌ ಮೊದಲೇ ಅಲೆಯನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸಮರ್ಥವಾಗಿ ಎದುರಿಸಿದೆ ಎಂದು ಎಲ್ಲಡೆ ಪ್ರಚಾರ ಪಡೆಯಲಾಯಿತು. ಎರಡನೇ ಅಲೆಯ ಕುರಿತು ದೇಶದ ಸಾಂಕ್ರಾಮಿಕ ರೋಗ ತಜ್ಞರು ಕೊಟ್ಟ ಕಳವಳಕಾರಿ ಎಂಬ ವರದಿಯನ್ನ ಸರ್ಕಾರ “ ಕಳವಳಪಡಬೇಕಿಲ್ಲ” ಎಂದು ತನಗೆ ಬೇಕಾದಂತೆ ತಿರುಚಿಕೊಂಡಿತು. ಸಹಜವಾದ ಹಿಂದುತ್ವ ಮತ್ತು ಸಂಪ್ರದಾಯವಾದಿಗಳನ್ನು ಓಲೈಸುವ ಕುಂಭಮೇಳ, ಚುನಾವಣೆ, ರ್ಯಾಲಿ, ಸಮಾವೇಶದಲ್ಲಿ ಬಿಸಿಯಾಯಿತು. ವೈಜ್ಞಾನಿಕ ಸಲಹೆಗಳು ಕಸದ ಡಬ್ಬ ಸೇರಿದವು. ಕೋವಿಡ್‌ ಸಾಂಕ್ರಾಮಿಕ ವೇಳೆ ಕುಂಭ ಮೇಳ ಬೇಡ ಎಂದು ಸಲಹೆ ನೀಡಿದ ಉತ್ತರಾಖಂಡದ ಮುಖ್ಯಮಂತ್ರಿಯೊಬ್ಬರನ್ನು ರಾತ್ರೋರಾತ್ರಿ ಕೆಳಗಿಳಿಸಿ ತಾವು ಹೇಳಿದ್ದಕ್ಕೆಲ್ಲಾ ತಲೆ ಆಡಿಸುವ ವ್ಯಕ್ತಿಯೊಬ್ಬರನ್ನು ಅಲ್ಲಿ ಕೂರಿಸಲಾಯಿತು. ಪಂಚರಾಜ್ಯಗಳಲ್ಲಿ ನೂರಾರು ರ್ಯಾಲಿಗಳನ್ನು ನಡೆಸಲಾಯಿತು. ಆ ವೇಳೆಗಾಗಲೇ ಕೋವಿಡ್‌ ತೀವ್ರ ಸ್ವರೂಪ ಪಡೆದು ಸಾವಿರಾರು ಮಂದಿ ಸಾಯುತ್ತಿದ್ದರೂ ಪ್ರಧಾನಿ ಪಶ್ಚಿಮ ಬಂಗಾಳದ ಚುನಾವಣಾ ರ್ಯಾಲಿಯಲ್ಲಿ ಸೇರಿದ್ದ ಬೃಹತ್‌ ಸಂಖ್ಯೆ ಜನರನ್ನು ನೋಡಿ ಹೊಗಳಿದರು. ಕಳವಾಗಬೇಕಾದ ಸಂಗತಿಯನ್ನು ಆನಂದಿಸಿದ್ದು ಅತ್ಯಂತ ವಿಲಕ್ಷಣವಾಗಿತ್ತು. ಇವೆಲ್ಲ ಕೋವಿಡ್‌ ಕುರಿತು ಸರ್ಕಾರಕ್ಕೆ ವೈಜ್ಞಾನಿಕ ಮನೋಭಾವವೂ ಇಲ್ಲ, ಮನಸ್ಸು ಇಲ್ಲ ಎಂದು ತೋರಿಸಿದವು. ಕೊನೆಗೆ ಈ ಅನಾಹುತವನ್ನು ತಡೆಯಲು ನ್ಯಾಯಾಲಯವೇ ಮಧ್ಯ ಪ್ರವೇಶಿಸಬೇಕಾಯಿತು. ಚುನಾವಣಾ ಆಯೋಗಕ್ಕೆ ತರಾಟೆ ತೆಗೆದುಕೊಂಡ ಹೈಕೋರ್ಟ್‌ ಸುಪ್ರೀಂಕೋರ್ಟ್‌ ಮಾಡಬೇಕಾದ ಕೆಲಸವನ್ನು ಮಾಡಿ ಮೇಲ್ಪಂಕ್ತಿ ಹಾಕಿತು. ಆದರೆ ಈ ಹೊತ್ತಿಗೆ ಎಲ್ಲ ಅನಾಹುತಗಳು ಆಗಿ ಹೋಗಿದ್ದವು. ಹಳ್ಳಿ ಹಳ್ಳಿಗೂ ಕರೋನಾ ಸೋಂಕು ವ್ಯಾಪಿಸಿಬಿಟ್ಟಿತ್ತು.

ಎರಡನೇ ಅಲೆಯ ಹೊತ್ತಿಗೆ ಭಾರತದಲ್ಲಿ ಬಲಿಯಾದವರ ಸಂಖ್ಯೆ ನಾಲ್ಕು ಲಕ್ಷ ಮುಟ್ಟುತ್ತಿದ್ದರೆ, ಸೋಂಕಿತರ ಪ್ರಮಾಣ ಮೂರು ಕೋಟಿಗೆ ತಲುಪುತ್ತಿದೆ. ಇದು ಸರ್ಕಾರ ನೀಡುತ್ತಿರುವ ಲೆಕ್ಕಾಚಾರ. ಆದರೆ ಕೋವಿಡ್‌ ತಜ್ಞರು ಮತ್ತು ಸಮೀಕ್ಷೆಗಳು ನೀಡುವ ಲೆಕ್ಕಾಚಾರಗಳು ಬೇರೆಯೇ ಇರುವುದನ್ನ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ಬಹಿರಂಗಪಡಿಸಿದೆ. ಭಾರದಲ್ಲಿ ಕೋವಿಡ್‌ ಸೋಂಕಿತರು ಹಾಗೂ ಸಾವಿಗೀಡಾದವರು ಸರ್ಕಾರ ಹೇಳುತ್ತಿರುವುದಕ್ಕಿಂತ ಹದಿನಾರು ಪಟ್ಟು ಹೆಚ್ಚು ಎನ್ನುತ್ತಿವೆ ಸಮೀಕ್ಷೆಗಳು. ಅಂದರೆ ೬೪ ಲಕ್ಷ ಮಂದಿ ಸಾವಿಗೀಡಾಗಿದ್ದು, ೪೮ ಕೋಟಿ ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎನ್ನುತ್ತಿವೆ ಸಮೀಕ್ಷೆಗಳು. ಜವಾಬ್ದಾರಿಯುತ ಸರ್ಕಾರಕ್ಕೆ ಇದು ತುಂಬಾ ಕಳವಳದ ವಿಚಾರ ಆಗಬೇಕಿತ್ತು. ಗಂಗಾ ನದಿ ತೇಲುತ್ತಿರುವ ಹೆಣಗಳ ರಾಶಿಯನ್ನು, ಅದರ ತೀರ ಘೋರಿಗಳಾಗಿ ಪರಿವರ್ತನೆ ಆಗಿದ್ದ ದೃಷ್ಯಗಳನ್ನು ನ್ಯೂಸ್‌ ಚಾನಲ್‌ಗಳು ತೋರಿಸಿವೆ. ಇದು ಗಂಗಾ ನದಿಯ ಶುದ್ಧೀಕರಣಕ್ಕಿಂತ ಜನರನ್ನು ಕೊಲ್ಲಲು, ಸರ್ಕಾರ ತನ್ನ ಅನಾಹುತಗಳನ್ನು ಮುಚ್ಚಿಕೊಳ್ಳಲು ನದಿಯನ್ನು ಬಳಸಿಕೊಂಡಂತೆ ಇತ್ತು.

ಲಸಿಕೆ ರಾಜಕಾರಣ ಇನ್ನೊಂದು ಬೇರೆಯದೇ ಪುರಾಣವಾಗುತ್ತದೆ. ಭಾರತ್‌ಬಯೋಟೆಕ್‌ ಇಂಟರ್‌ನ್ಯಾಷನಲ್‌ಸಂಸ್ಥೆ ಕೋವ್ಯಾಕ್ಸಿನ್‌ ಲಸಿಕೆಯಯನ್ನ, ಸೀರಂ ಇನ್‌ಸ್ಟಿಟ್ಯೂಟ್‌ ಮತ್ತು ಆಕ್ಸ್‌ಫರ್ಡ್‌ಆಸ್ಟ್ರಜನಿಕಾದ ಕೋವಿಶೀಲ್ಡ್‌ಲಸಿಕೆಯನ್ನು ಪೂರೈಸುತ್ತಿವೆ. ಈ ಮೊದಲು ಈ ಸಂಸ್ಥೆಗಳು ಮೂರು ರೀತಿಯ ಬೆಲೆ ನಿಗದಿಪಡಿಸಿದ್ದವು. ಕೋವ್ಯಾಕ್ಸಿನ್‌ನನ್ನು ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್‌ಗೆ ತಲಾ ೧೫೦ ರೂಪಾಯಿ, ರಾಜ್ಯಗಳಿಗೆ ೬೦೦ ರೂಪಾಯಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ೧೨೦೦ ರೂ. ನಿಗದಿಪಡಿಸಲಾಗಿತ್ತು. ಸೀರಂ ಇನ್‌ಸ್ಟಿಟ್ಯೂಟ್‌ ಕೇಂದ್ರ ಸರ್ಕಾರಕ್ಕೆ ೧೫೦ರೂ. ರಾಜ್ಯಗಳಿಗೆ ೪೦೦ ರೂ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ ೬೦೦ ರೂಪಾಯಿ ನಿಗದಿಪಡಿಸಿತ್ತು. ಆದರೆ ಬಿಜೆಪಿಯೇತರ ರಾಜ್ಯಗಳು ಬೆಲೆಯ ಬಗ್ಗೆ ತಕರಾರು ತೆಗೆದ ಮೇಲೆ ರಾಜ್ಯಗಳಿಗೆ ಪೂರೈಸುವ ಬೆಲೆಯಲ್ಲಿ ತಲಾ ೧೦೦ ರೂಪಾಯಿಗಳನ್ನು ಕಡಿತಗೊಳಿಸಿದವು. ಆದರೆ ಮೂರು ರೀತಿಯ ಬೆಲೆ ನೀತಿ ಮೇಲ್ನೋಟಕ್ಕೆ ಅಪಕ್ವ ಮತ್ತು ಅವೈಜ್ಞಾನಿಕವಾಗಿತ್ತು.
ಕೇಂದ್ರ ಸರ್ಕಾರ ಲಸಿಕೆಗೆಗಾಗಿ ಬಜೆಟ್‌ನಲ್ಲಿ ೩೫ ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದರೂ ಆ ಬಗ್ಗೆ ಚಕಾರ ಎತ್ತದೆ ಮೌನವಹಿಸಿತ್ತು. ಬದಲು ರಾಜ್ಯಗಳೇ ಸ್ವಂತ ದುಡ್ಡಿನಿಂದ ಖರೀದಿಸಿ ಜನರಿಗೆ ಹಂಚಲಿ ಎಂಬ ಇರಾದೆಯನ್ನು ಹೊಂದಿದ್ದಂತೆ ಕಾಣುತ್ತಿತ್ತು. ಒಕ್ಕೂಟ ಸರ್ಕಾರದ ಜವಾಬ್ದಾರಿ ನಿರ್ವಹಿಸಬೇಕಾದ ಕೇಂದ್ರ ಸರ್ಕಾರ ಹೊಣೆಗಾರಿಕೆಯಿಂದ ಫಲಾಯನ ಮಾಡುವ ದಾರಿಯನ್ನು ಹುಡುಕುತ್ತಿತ್ತು. ಒಂದೇ ಗುಣಮಟ್ಟ, ಒಂದೇ ಪ್ರಮಾಣ ಒಂದೇ ಕಂಪನಿಯ ಲಸಿಕೆ ಮೂರು ಬೆಲೆಯಲ್ಲಿ ಮಾರಾಟ ಆಗುವುದು ವಿಲಕ್ಷಣವಾಗಿತ್ತು.

ಇನ್ನು ಲಸಿಕೆ ಸಂಗ್ರಹಣೆ ಮತ್ತು ಪೂರೈಕೆಯಲ್ಲೂ ಈ ಸಂಸ್ಥೆಗಳು ಕೇಂದ್ರದ ಪರವಾಗಿ ರಾಜ್ಯಗಳಿಗೆ ದುಬಾರಿಯಾಗಿ, ಖಾಸಗಿ ಆಸ್ಪತ್ರೆಗಳಿಗೆ ವಾಣಿಜ್ಯ ವ್ಯವಹಾರಕ್ಕೆ ಅನುಕೂಲ ಆಗುವಂತೆ ತಾರತಮ್ಯ ವಿಧಾನ ಪಾಲಿಸಲು ಮುಂದಾಗಿದ್ದವು. ತಾವು ತಯಾರಿಸುವ ಲಸಿಕೆಯಲ್ಲಿ ಶೇ.೫೦ರಷ್ಟು ಕೇಂದ್ರಕ್ಕೂ, ಶೇ.೨೫ರಷ್ಟು ರಾಜ್ಯಗಳಿಗೂ, ಶೇ.೨೫ರಷ್ಟು ಖಾಸಗಿ ಆಸ್ಪತ್ರೆಗಳಿಗೆ ಪೂರೈಸುವುದಾಗಿ ಹೇಳಿದ್ದವು. ಇದು ಕೇಂದ್ರ ಸರ್ಕಾರದ ಪರವಾದ ನಿಲುವಾಗಿತ್ತು. ಇದು ಹೇಗಿತ್ತು ಎಂದರೆ ಕೇಂದ್ರ ಸರ್ಕಾರ ಒಕ್ಕೂಟ ಸರ್ಕಾರವಾಗಿ ತನ್ನ ಜವಾಬ್ದಾರಿಯನ್ನೂ ಪೂರೈಸುವುದಿಲ್ಲ, ರಾಜ್ಯಗಳು ಬೇಕಾದರೆ ತಾವೇ ಖರೀದಿಸಿ ತನ್ನ ಜನರಿಗೆ ಹಂಚಲಿ, ಆದರೆ ಅದರ ಒಟ್ಟು ಕ್ರೆಡಿಟ್‌ ತನಗೆ ಸಿಗಲಿ ಎಂಬಂತಿತ್ತು.

ಕೊನೆಗೆ ವಿಧಿ ಇಲ್ಲದೆ ಕರ್ನಾಟಕ, ದೆಹಲಿ, ಪಂಜಾಬ್‌, ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಇತ್ಯಾದಿ ರಾಜ್ಯಗಳು ಅಮೆರಿಕಾ, ಯುರೋಪ್‌ ದೇಶಗಳಲ್ಲಿ ಬಳಸಲಾಗುತ್ತಿದ್ದ ಮಾಡೆರ್ನಾ, ಫೈಝರ್‌ ಇತ್ಯಾದಿ ಲಸಿಕೆಗಳನ್ನು ಖರೀದಿಸುವ ಸಲುವಾಗಿ ಜಾಗತಿಕ ಟೆಂಡರ್‌ ಕರೆಯಲು ಮಾಡಿದ ಪ್ರಯತ್ನವೂ ವಿಫಲವಾಗಿದ್ದವು. ಯಾಕೆಂದರೆ ಅದೆ ಏಪ್ರಿಲ್‌ ತಿಂಗಳಲ್ಲಿ ಕೇಂದ್ರ ಆರೋಗ್ಯ ಇಲಾಖೆ ವಿದೇಶಿ ಲಸಿಕೆ ಆಮದು ಮಾಡಿಕೊಳ್ಳಲು ಹಲವು ನಿಯಮಾಮಗಳಿಗನ್ನು ಸೇರಿಸಿದ್ದು ಇದಕ್ಕೆ ತೊಡಕಾಗಿತ್ತು. ಔಷಧ ಮತ್ತು ಗುಣಮಟ್ಟ ಇಲಾಖೆಯೂ ಸೇರಿದಂತೆ ಕೇಂದ್ರದ ಆರೋಗ್ಯ ಇಲಾಖೆ ಅಡಿ ಬರುವ ಎಲ್ಲ ಸಂಸ್ಥೆಗಳ ನಿಯಮಾವಳಿಗಳನ್ನು ಪೂರೈಸಿ ವಿದೇಶಿ ಲಸಿಕೆಗಳು ತಮ್ಮ ಕೈಗೆ ಬಂದು ಮುಟ್ಟಲು ರಾಜ್ಯಗಳಿಗೆ ಒಂದು ವರ್ಷವಾದರೂ ಬೇಕಾಗಿತ್ತು. ತಾವೇ ಆರಿಸಿ ಅಧಿಕಾರಕ್ಕೆ ತಂದ ಕೇಂದ್ರ ಸರ್ಕಾರ ತಮ್ಮ ( ರಾಜ್ಯಗಳು) ಏಕೆ ತಾರತಮ್ಯ ಅನುಸರಿಸುತ್ತಿದೆ ಎಂಬುದು ಗುಟ್ಟಾಗಿರಲಿಲ್ಲ. ಇಲ್ಲಿ ಕೇಂದ್ರಕ್ಕೆ, ರಾಜ್ಯಗಳಿಗೆ ಲಸಿಕೆ ಖರೀದಿಸಲು ಸಾವಿರಾರು ಕೋಟಿ ಖರ್ಚು ಮಾಡಿ ಕೈ ಸುಟ್ಟುಕೊಳ್ಳುವುದು ಬೇಕಿರಲಿಲ್ಲ, ರಾಜ್ಯಗಳು ತಮಗೇ ಬೇಕಾದಷ್ಟು ಲಸಿಕೆಯನ್ನು ಖರೀದಿಸಿ ಸ್ವತಂತ್ರವಾಗುವುದು ಬೇಕಿರಲಿಲ್ಲ. ಬದಲು ಅದಕ್ಕೆ ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ ಮತ್ತು ಲಸಿಕೆ ತಯಾರಿಕಾ ಕಂಪನಿಗಳ ಜೊತೆಗಿನ ಹಿತಾಸಕ್ತಿ ಹೆಚ್ಚಾಗಿದ್ದಂತೆ ತೋರುತ್ತಿತ್ತು. ಈ ಎಲ್ಲ ಉದ್ದೇಶಗಳಿಂದ ಅದು ʼ ತಾನೂ ಕೊಡ, ಕೊಡುವವರನ್ನೂ ಬಿಡʼ ಎಂಬಂತೆ ನಡೆದುಕೊಳ್ಳುತ್ತಲಿತ್ತು ಎಂಬ ಅನುಮಾನಗಳನ್ನು ಜನರಲ್ಲಿ ಹುಟ್ಟು ಹಾಕಿದವು.

ಈ ನಡುವೆ ಕೆಲವು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಅವೈಜ್ಞಾನಿಕ ಬೆಲೆ ಮತ್ತು ಪೂರೈಕೆ ನೀತಿಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಕದ ಬಡಿದವು. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಪಕ್ಷವಂತೂ ಯಾವ ಸಹಾಯವನ್ನೂ ಮಾಡದೆ ಕೇಂದ್ರ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿತು. ತಾವೇ ಖರೀದಿಸಿ ಜನರಿಗೆ ಲಸಿಕೆ ನೀಡುವುದಾದರೆ ಪ್ರಧಾನಿ ಮೋದಿಯವರ ಫೋಟೋ ಏಕೆ ಲಸಿಕೆ ಪ್ರಮಾಣ ಪತ್ರದಲ್ಲಿ ಇರಬೇಕು ಎಂದು ಪ್ರಶ್ನಿಸಿತು. ಇದು ಇನ್ನೂ ಮುಂದುವರಿದ ಪ್ರಧಾನಿ ಜಾಗದಲ್ಲಿ ತಮ್ಮ ನಾಯಕ ಮಮತಾ ಬ್ಯಾನರ್ಜಿ ಅವರ ಫೋಟೋ ಲಗತ್ತಿಸಲು ಆರಂಭಿಸಿತು. ಇದರ ಬೆನ್ನಲ್ಲೇ ಲಸಿಕೆಯ ಬೆಲೆ ಮತ್ತು ಪೂರೈಕೆ ಕುರಿತು ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್‌ ತರಾಟೆ ತೆಗೆದುಕೊಂಡಿತು. ಅಲ್ಲದೆ ಲಸಿಕೆ ಖರೀದಿಗಾಗಿ ಸರ್ಕಾರ ಮೀಲಿಟ್ಟಿದ್ದ ಹಣದ ಲೆಕ್ಕ ಕೊಡುವಂತೆಯೂ ಪ್ರಶ್ನಿಸಿತ್ತು. ಈ ಎಲ್ಲದ ಪರಿಣಾಮವಾಗಿ ಲಸಿಕೆ ಪಡೆದವರಿಗೆ ನೀಡುವ ಸರ್ಟಿಫಿಕೇಟ್‌ನಲ್ಲಿ ತನ್ನ ಫೋಟೋ ಪ್ರಚಾರ ಮಾಡಿಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದ ಕೇಂದ್ರ ಸರ್ಕಾರ ಡ್ಯಾಮೇಜ್‌ ಕಂಟ್ರೋಲ್‌ ಮಾಡುವಂತೆ ದೇಶದ ಎಲ್ಲರಿಗೂ ತಾನೇ ಲಸಿಕೆ ಪೂರೈಸುವುವುದಾಗಿ ಪ್ರಕಟಿಸಬೇಕಾಗಿ ಬಂತು.

ಲಸಿಕೆ ಪೂರೈಕೆಯಲ್ಲಿ ಕೂಡ ಕೇಂದ್ರದ ಒಕ್ಕೂಟ ಸರ್ಕಾರ ತಾರತಮ್ಯ ಅನುಸರಿಸುತ್ತಾ ಜನರನ್ನು ಕತ್ತಲೆಯಲ್ಲಿಡುತ್ತಾ ಬಂದಿದೆ ಎಂಬ ಆರೋಪಗಳಿವೆ. ಲಸಿಕೆ ಬೇಕು ಎಂದು ಎಲ್ಲರೂ ಓಡಿ ಬಂದರೆ ತಮ್ಮ ಬಂಡವಾಳ ಬಯಲಾಗುತ್ತದೆ ಎಂದು ಸರ್ಕಾರ ಎಣಿಸಿದಂತಿತ್ತು. ಜನರು ಸಾಮೂಹಿಕವಾಗಿ ಲಸಿಕೆಗೆ ಬೇಡಿಕೆ ಇಡುವುದನ್ನು ತಡೆಯುವ ಸಲುವಾಗಿ ಹಲವು ತಂತ್ರಗಳನ್ನು ಮಾಡಲಾಯಿತು. ಕೋವಿಡ್‌ ಯೋಧರು, ಆರೋಗ್ಯ ಕಾರ್ಯಕರ್ತರು, ಹಿರಿಯ ನಾಗರಿಕರು, ೪೫ ವರ್ಷ ಮೇಲ್ಪಟ್ಟವರು ಇತ್ಯಾದಿ ವಿಭಾಗಗಳಾಗಿ ಮಾಡಿ ಲಸಿಕೆ ಕೊರತೆಯನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಲಾಯಿತು. ಜನರೂ ಈ ಬಗ್ಗೆ ಯೋಚಿಸಿರಲಿಲ್ಲ. ಆದರೆ ಸರ್ಕಾರದ ಈ ವಿಧಾನದ ಹಿಂದೆ ಪೂರೈಕೆಯಲ್ಲಿನ ಕೊರತೆ ಜನರ ಗಮನಕ್ಕೆ ಬಾರದಂತೆ ಮಾಡುವುದೇ ಆಗಿತ್ತು. ಇಲ್ಲಿ ಒಂದು ಪ್ರಮುಖ ಪ್ರಶ್ನೆ ಎಂದರೆ, ಮೋದಿ ಸರ್ಕಾರಕ್ಕೆ ಮತ ಚಲಾಯಿಸಿದವರಲ್ಲಿ ೧೮ರಿಂದ ೪೫ ವಯಸ್ಸಿನ ಶೇ.೫೦ರಷ್ಟು ಮತದಾರರಿದ್ದಾರೆ. ದೇಶದ ಯುವಜನರಿಂದ ಮತ ಪಡೆದು ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ, ಯುವ ಜನರ ಉದ್ದಾರವೇ ತನ್ನ ಆದ್ಯತೆ ಎಂದು ಹೇಳಿಕೊಳ್ಳುವ ಸರ್ಕಾರ ಯುವ ಜನರಿಗೆ ಲಸಿಕೆ ಹಾಕುವುದಕ್ಕೆ ವಿಳಂಬ ಮಾಡುತ್ತಿತ್ತು ಎಂಬುದನ್ನ ಕೇಳಬೇಕಾಗಿದೆ.

ಇಷ್ಟಾದ ಮೇಲೂ ಜೂನ್‌ ೧೫ರ ಹೊತ್ತಿಗೆ ದೇಶದಲ್ಲಿ ಎರಡೂ ಡೋಸ್‌ ಲಸಿಕೆ ಪಡೆದವರ ಸಂಖ್ಯೆ ಶೇ.೪ರಷ್ಟು ಮಾತ್ರ. ಒಂದು ಡೋಸ್‌ ಲಸಿಕೆ ಪಡೆದವರ ಪ್ರಮಾಣ ಶೇ೧೫ರಷ್ಟು. ಈ ನಡುವೆ ಮೊದಲ ಕೋವಿಶೀಲ್ಡ್‌ ಲಸಿಕೆಯ ಎರಡುಗಳ ನಡುವಿನ ಸಮಯವನ್ನು ನಿರಂತರವಾಗಿ ಹಿಗ್ಗಿಸುತ್ತಲೇ ಬರಲಾಗುತ್ತಿದೆ. ಮೊದಲು ಎರಡು ಡೋಸ್‌ಗಳ ನಡುವಿನ ಅಂತರವನ್ನು ನಾಲ್ಕು ವಾರಗಳಿಗೆ ನಿಗದಿಪಡಿಸಲಾಗಿತ್ತು. ಆ ಬಳಿಕ ಅದನ್ನು ೬-೮ ವಾರಗಳಿಗೆ ನಿಗದಿಪಡಿಸಲಾಯಿತು. ಬ್ರಿಟನ್‌ ಆರೋಗ್ಯ ಇಲಾಖೆಯ ಸಲಹೆ ಮೇರೆಗೆ ಅದನ್ನು ೮-೧೨ ವಾರಗಳಿಗೆ ವಿಸ್ತರಿಸಲಾಗಿತ್ತು. ಈ ಎಲ್ಲ ನಿರ್ಧಾರಗಳನ್ನು ೧೪ ಸದಸ್ಯರ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ ( ಎನ್‌ಟಿಎಜಿಐ) ತೆಗೆದುಕೊಳ್ಳುತ್ತಿತ್ತು. ಈ ನಡುವೆ ಎರಡು ಲಸಿಕೆಗಳ ನಡುವಿನ ಅಂತರವನ್ನು ಬರೋಬ್ಬರಿ ೧೬ ವಾರಗಳಿಗೆ ವಿಸ್ತರಿಸಲು ಕೇಂದ್ರ ಆರೋಗ್ಯ ಇಲಾಖೆ ನಿರ್ಧಾರ ತೆಗೆದುಕೊಂಡಿದೆ. ಆದರೆ ಇಂತಹ ನಿರ್ಣಯವನ್ನು ಎನ್‌ಟಿಎಜಿಐನ ಸಭೆಯಲ್ಲಿ ತೆಗೆದುಕೊಳ್ಳಲಾಗಿಲ್ಲ ಎಂದು ತಂಡದ ಸದಸ್ಯರು ಹೇಳಿರುವುದು ಚರ್ಚೆಗೀಡಾಗಿದೆ. ಈ ಮೊದಲಿನಂತೆ ಆರೋಗ್ಯ ಇಲಾಖೆ ʼ ಕೋವಿಡ್‌ ಆಲ್ಫಾ ತಳಿಯ ಅಪಾಯವನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಎರಡು ಡೋಸ್‌ಗಳ ನಡುವಿನ ಅಂತರ ಹೆಚ್ಚಿಸಲಾಗಿದೆʼ ಎಂಬ ಮಾಮೂಲಿ ಕುಂಟು ನೆಪ ಹೇಳಿದೆ. ಆದರೆ ವಾಸ್ತವದಲ್ಲಿ ಭಾರತಲ್ಲಿ ಅತಿ ಹೆಚ್ಚು ಸಾವು ನೋವಿಗೆ ಕಾರಣವಾಗಿರುವುದು ಡೆಲ್ಟಾ ಬಿ.೧ ೬೧೭ ತಳಿ. ಮಾರಕ ಡೆಲ್ಟಾ ತಳಿಯನ್ನು ನಿಯಂತ್ರಿಸಲು ಈಗನ ೮-೧೨ರ ಅವಧಿ ಸೂಕ್ತವಾಗಿದೆ ಎಂದು ಹೇಳಲಾಗುತ್ತಿದೆ. ಲಸಿಕೆ ಕೊರೆಯನ್ನು ಮರೆ ಮಾಚುವ ಸಲುವಾಗಿ ಕೇಂದ್ರ ಈ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಇನ್ನು ಕೋವಿಡ್‌ನಿಂದ ಕಲಿಯಬೇಕಾದ ಪಾಠಗಳೇನು ಎಂಬ ಪ್ರಶ್ನೆ ಉದ್ಧವವಾಗಿದೆ. ಈ ಮೊದಲು ಜಗತ್ತಿನ ಹಲವು ದೇಶಗಳು ಮಾರಕ ಪ್ಲೇಗ್‌, ಮಲೇರಿಯಾ, ಸಿಡುಬು, ಪೊಲೀಯೋದಂತ ಸಮಸ್ಯೆಗಳನ್ನು ಎದುರಿಸಿದೆ. ಆದರೆ ಆಗೆಲ್ಲ ಈ ಸೋಂಕು ಜಾಗತಿಕ ಸಮಸ್ಯೆ ಆಗಿರಲಿಲ್ಲ. ಕೆಲವು ದೇಶ ಅಥವಾ ಖಂಡಕ್ಕೆ ಮಾತ್ರ ಸೀಮಿತವಾಗಿದ್ದವು. ಸಿಡುಬು ಆಫ್ರಿಕಾವನ್ನು ಬಾದಿಸಿದರೆ, ಮಲೇರಿಯಾ ಮತ್ತು ಪ್ಲೇಗ್‌ ಯುರೋಪ್‌ ದೇಶಗಳನ್ನು ಭಾದಿಸಿದ್ದವು. ದೇಶಗಳ ನಡುವೆ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳ ಜಾಲ ನಿಕಟವಾಗಿ ಇರದಿದ್ದ ಕಾಲ ಅದಾಗಿತ್ತು. ಆದರೆ ೨೧ನೇ ಶತಮಾನದಲ್ಲಿ ಜಾಗತೀಕರಣ ಮತ್ತು ವೇಗದ ಸಂಚಾರ ಮತ್ತು ಸಂಪರ್ಕ ಜಾಲಗಳು ಸಾಂಕ್ರಾಮಿಕ ಸೋಂಕನ್ನು ಪ್ರಸಾರ ಮಾಡಲು ಸಹಕಾರಿಯಾಗಿ ಪರಿವರ್ತನೆಯಾಗಿವೆ. ಸೋಂಕು ಕೆಲ ದಿನಗಳಲ್ಲೇ ಜಗತ್ತಿಗೆ ಹರಡಲು ರೈಲು, ಹಡಗು, ವಿಮಾನ, ಪ್ರವಾಸೋದ್ಯಮ, ಆಮದು, ರಫ್ತು ನೀತಿಗಳು ಅನುಕೂಲವಾಗಿ ಪರಿಣಮಿಸಿವೆ. ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕದಂತ ಸೋಂಕುಗಳನ್ನು ಜಗತ್ತನ್ನು ಒಂದು ಹಿಡಿಯಾಗಿ ನಿಂತು ಎದುರಿಸದಲ್ಲಿ ಮಾತ್ರ ಮನುಷ್ಯ ನೆಮ್ಮದಿಯಾಗಿ ಬದುಕುಳಿಯಲು ಸಾಧ್ಯವಿದೆ. ೨೦ನೇ ಶತಮಾನವನ್ನು ಯದ್ದಗಳು ಕಾಡಿದರೆ ೨೧ನೇ ಶತಮಾನವನ್ನು ಸಾಂಕ್ರಾಮಿಗಳ ರೋಗಗಳು ಭಾದಿಸುವುದರಲ್ಲಿ ಎರಡು ಮಾತಿಲ್ಲ ಎಂಬ ನೀತಿ ಪಾಠವನ್ನು ಕೋವಿಡ್‌ ಕಲಿಸಿದೆ.

ಅತಿಯಾದ ಜನ ಸಾಂದ್ರತೆಯನ್ನು ಹೊಂದಿದ ಭಾರತದ ನಗರಗಳು ಸೋಂಕು ಹರಡಲು ಹೇಳಿ ಮಾಡಿಸಿದಂತಿವೆ. ಶುದ್ಧ ನೀರು, ಶುದ್ಧ ಗಾಳಿ ಶುದ್ಧ ಆಹಾರ, ವಸತಿ, ಆರೋಗ್ಯ ಸಮಸ್ಯೆ ಎದುರಿಸುತ್ತಿವೆ. ಪ್ರವಾಹ, ಪ್ರಕೃತಿ ವಿಕೋಪಗಳನ್ನು ಎದುರಿಸಲು ಸಮರ್ಥವಾಗಿಲ್ಲ. ಆಳುವವರು ನಗರ ವಿಕೇಂದ್ರೀರಕಣಕ್ಕೆ ಒತ್ತು ನೀಡಬೇಕಿದೆ. ವ್ಯವಸ್ಥಿತ ರಸ್ತೆ, ಚರಂಡಿ, ಕುಡಿಯುವ ನೀರು, ಆಮ್ಲಜನಕ ಹೆಚ್ಚುವ ಪರಿಸರ ನಿರ್ಮಾಣಕ್ಕೆ ಒತ್ತು ಆದ್ಯತೆ ನೀಡಬೇಕಿದೆ. ಆದರೆ ಧರ್ಮ, ದೇಶ, ಗಡಿ, ಮುಸ್ಲಿಮರು ಇತ್ಯಾದಿ ಸಾಂಪ್ರದಾಯಿಕ ರಾಜಕಾರಣದ ಮೂಲಕ ಅಧಿಕಾರ ಹಿಡಿಯಲು ಭಂಡತನ ಪ್ರದರ್ಶಿಸುತ್ತಿವೆ. ದೇಶದ ಶಕ್ತಿ ಮತ್ತು ಸಂಪನ್ಮೂಲಗಳನ್ನು ಇದಕ್ಕೆ ವ್ಯಯ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಸಾಂಕ್ರಾಮಿಕ ರೋಗಗಳೇ ೨೧ನೇ ಶತಮಾನದ ಮಾನವ ಜನಾಂಗದ ಅತಿದೊಡ್ಡ ಶತ್ರುವಾಗಿವೆ ಅರಿಯದಿದ್ದಲ್ಲಿ ಮಾನವ ಜನಾಂಗ ದೊಡ್ಡ ಬೆಲೆ ತೆರಬೇಕಾದೀತು.

ಎರಡನೇ ಅಲೆಯ ವೇಳೆ ಜಾರಿಗೊಳಿಸಿದ್ದ ಲಾಕ್‌ಡೌನ್‌ತೆರವುಗೊಳಿಸುತ್ತಿದ್ದಂತೆ ಎಲ್ಲಡೆ ಜನ ಸಾಂದ್ರತೆ ಏರುತ್ತಿದೆ. ಜನರು ಹಳ್ಳಿಗಳಿಂದ ನಗರಗಳ ಕಡೆಗೆ ತಂಡೋಪ ತಂಡವಾಗಿ ಮರಳುತ್ತಿದ್ದಾರೆ. ಮತ್ತೊಂದು ಕೋವಿಡ್‌ಅಲೆ ಏರ್ಪಡಲು ಕಾರಣವಾಗುವ ಸೂಚನೆಗಳನ್ನು ಇದು ಕಾಣಿಸುತ್ತಿದೆ. ನಗರಗಳಲ್ಲಿ ಜನ ಸಾಂದ್ರತೆ ಹೆಚ್ಚುತ್ತಿದ್ದಂತೆ ಸೋಂಕಿನ ಪ್ರಸಾರವೂ ವೇಗ ಪಡೆದುಕೊಳ್ಳಲಿದೆ. ಆಗಸ್ಟ್‌ – ಸೆಪ್ಟಂಬರ್‌ನಿಂದ ಮೂರನೇ ಅಲೆಯ ಕೋವಿಡ್‌ ತಳಿಗಳೂ ಚುರುಕಾಗುವ ಸಾಧ್ಯತೆ ಇದೆ. ಜನವರಿ ಹೊತ್ತಿಗೆ ಮೂರನೇ ಪ್ರಭಾವ ಎಷ್ಟು ಎಂಬದನ್ನು ಅಂದಾಜಿಸಬಹುದಾಗಿದೆ. ಇದು ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.
ಎರಡನೇ ಅಲೆಯಲ್ಲಿ ಶೇಕಡಾ ೩ರಿಂದ ೫ ರಷ್ಟು ಪ್ರಮಾಣದ ಮಕ್ಕಳು ಕೋವಿಡ್‌ ಬಾಧೆಗೊಳಗಾಗಿದ್ದಾರೆ. ಈಗಿನಿಂದಲೇ ಸರ್ಕಾರಗಳು ಎಚ್ಚರಗೊಂಡು ಪೂರ್ವಸಿದ್ಧತೆ ಕೈಗೊಂಡಲ್ಲಿ ಮತ್ತೊಂದು ಅಲೆಯ ವಿಕೋಪ ನಮ್ಮ ಭವಿಷ್ಯದ ಪೀಳಿಗೆ ಅನುಭವಿಸುವುದನ್ನು ತಪ್ಪಿಸಬಹುದು. ಎರಡನೇ ಅಲೆ ಮೊದಲ ಅಲೆಗಿಂತ ತೀವ್ರವಾಗಿತ್ತು. ಮೂರನೇ ಅಲೆಯ ಪ್ರಭಾವ ಇನ್ನೂ ಹೆಚ್ಚಿರಬಹುದು ಎಂಬ ಜನರ ಆತಂಕಕ್ಕೆ ಕಾರಣಗಳಿವೆ. ಮುಖ್ಯಮಂತ್ರಿ ಬದಲಾವಣೆ, ಕುರ್ಚಿ ಹಿಡಿಯುವ ರಾಜಕೀಯದಾಟಗಳನ್ನು ನಿಲ್ಲಿಸಿ ಕೋವಿಡ್‌ ಅಲೆಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಿದಿದ್ದರೆ ಭಾರತ ಮತ್ತೊಂದು ಮಹಾ ವಿನಾಶವನ್ನು ಎದುರಿಸಬೇಕಾಗುವ ಅಪಾಯವನ್ನು ಅಲ್ಲಗಳೆಯಲಾಗದು.
– ಗೋವಿಂದರಾಜ ಬೈಚಗುಪ್ಪೆ,  ರಂಗ ನಿರ್ದೇಶಕರು

Leave a Reply