ಗೋವಿಂದರಾಜ ನಗರ: ಬಿಜೆಪಿ ಹಿರಿಯ ನಾಯಕ ವಿ. ಸೋಮಣ್ಣ ಅವರ ಸ್ಪರ್ಧೆಯಿಂದಾಗಿ ರಾಜ್ಯದ ಗಮನ ಸೆಳೆಯುತ್ತಿದ್ದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಖಾಡ ಈ ಬಾರಿ ಅಂತಹ ಕುತೂಹಲ ಮೂಡಿಸಿಲ್ಲ.
ಒಕ್ಕಲಿಗ ಕುರುಬ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಿಂದ ವಿ. ಸೋಮಣ್ಣ ಒಂದು ಬಾರಿ ಸೋತು ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಮೂರನೇ ಬಾರಿ ಈ ಕ್ಷೇತ್ರದಿಂದ ತಮ್ಮ ಪುತ್ರ ಅರುಣ್ ಸೋಮಣ್ಣ ಅವರನ್ನು ಆಯ್ಕೆ ಮಾಡಿಸಬೇಕು ಎಂಬ ಅವರ ಪ್ರಯತ್ನಕ್ಕೆ ಬಿಜೆಪಿ ಹೈಕಮಾಂಡ್ ಸೊಪ್ಪು ಹಾಕಲಿಲ್ಲ ಬದಲಿಗೆ ಅವರನ್ನು ಚಾಮರಾಜನಗರ ಮತ್ತು ಮೈಸೂರಿನ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಮಾಡಿದೆ. ಹೀಗಾಗಿ ಈ ಕ್ಷೇತ್ರದಿಂದ ಸೋಮಣ್ಣ ಅವರ ಆಪ್ತ ಉಮೇಶ್ ಶೆಟ್ಟಿ, ಬಿಜೆಪಿ ಅಭ್ಯರ್ಥಿಯಾಗಿದ್ದರೆ ಕಾಂಗ್ರೆಸ್ ನಿಂದ ಶಾಸಕ ಎಂ ಕೃಷ್ಣಪ್ಪ ಅವರ ಪುತ್ರ ಪ್ರಿಯಾಕೃಷ್ಣ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ.
ಜೆಡಿಎಸ್ ನಿಂದ ಆ ಪಕ್ಷದ ನಗರ ಘಟಕದ ಅಧ್ಯಕ್ಷ ಆರ್ ಪ್ರಕಾಶ್ ಕಣಕ್ಕಿಳಿದಿದ್ದು ಪ್ರಿಯಕೃಷ್ಣ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಸೋಮಣ್ಣ ಅವರು ಪ್ರಿಯಕೃಷ್ಣ ಅವರ ಸಾಂಪ್ರದಾಯಿಕ ಎದುರಾಳಿ. ಆದರೆ ಈ ಬಾರಿ ಅವರು ಕಣದಲ್ಲಿ ಇಲ್ಲದಿರುವುದು ಬಿಜೆಪಿಯ ಸ್ಪರ್ಧೆ ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಒಕ್ಕಲಿಗ ಮತಗಳ ಧ್ರುವೀಕರಣ ಮತ್ತು ವಿ.ಸೋಮಣ್ಣ ಬೆಂಬಲಿಗರು ಪ್ರಿಯಾ ಕೃಷ್ಣ ಕೈ ಹಿಡಿದರೆ ಗೆಲುವು ಅವರ ಪರವಾಗಲಿದೆ. ಹಿಂದುತ್ವ ವಿಷಯ ಪ್ರಮುಖ ಚುನಾವಣಾ ವಿಷಯವಾದರೆ ಉಮೇಶ್ ಶೆಟ್ಟಿ ಗೆಲುವಿನ ನಗೆ ಬೀರಲಿದ್ದಾರೆ.



